Advertisement

ಹುಡುಗಿ ವಿಷಯಕ್ಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಇರಿದು ಕೊಂದರು

10:13 AM Feb 28, 2017 | Team Udayavani |

ಬೆಂಗಳೂರು: ಹುಡುಗಿಯ ವಿಚಾರಕ್ಕೆ 10ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಹತ್ಯೆ ಮಾಡಿರುವ ಘಟನೆ ಯಲಹಂಕದ ಸಂಯುಕ್ತ ಸರ್ಕಾರಿ ಕಾಲೇಜು ಬಳಿ ನಡೆದಿದೆ. ಯಲಹಂಕದ ಹರ್ಷರಾಜ್‌ (16) ಮೃತ ವಿದ್ಯಾರ್ಥಿ.

Advertisement

ಸೋಮವಾರ ಮಧ್ಯಾಹ್ನ ಯಲಹಂಕದ ಸಂಯುಕ್ತ ಸರ್ಕಾರಿ ಶಾಲಾ-ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ
ವೇಳೆ ಈ ಘಟನೆ ನಡೆದಿದೆ. ಪ್ರಕರಣದ ಸಂಬಂಧ ಕಾಲೇಜಿನ ಹಳೇ ವಿದ್ಯಾರ್ಥಿ ಸೇರಿ ಮೂವರು ಬಾಲಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ವಶಕ್ಕೆ ಪಡೆಯಲಾಗಿರುವ ಬಾಲ ಆರೋಪಿಗಳು ಯಲಹಂಕ ಡೌನ್‌ ಬಜಾರ್‌ ನಿವಾಸಿಗಳಾಗಿದ್ದಾರೆ. ಪೊಲೀಸರ ವಶದಲ್ಲಿರುವ ಬಾಲ ಆರೋಪಿಯೊಬ್ಬನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಾಲ್ವರು
ಕೃತ್ಯವೆಸಗಿದ್ದು, ಪರಾರಿಯಾಗಿರುವ ಮತ್ತೂಬ್ಬನಿಗೆ ಪೊಲೀಸರು ಬಲೆ ಬೀಸಲಾಗಿದೆ ಎಂದು ಡಿಸಿಪಿ ಲಾಬೂರಾಮ್‌ “ಉದಯವಾಣಿ’ಗೆ ತಿಳಿಸಿದರು.

ಹುಡುಗಿ ಜತೆ ಮಾತನಾಡಿದ್ದಕ್ಕೆ ಕೊಲೆ:
ಯಲಹಂಕ ನಿವಾಸಿ ನಾರಾಯಣಪ್ಪ ಹಾಲು ಮಾರಾಟಗಾರರಾಗಿದ್ದು, ಇವರ ಪುತ್ರ ಹರ್ಷರಾಜ್‌ ಯಲಹಂಕದ ಸಂಯುಕ್ತ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಹರ್ಷನಿಗೆ ಅದೇ ಕಾಲೇಜಿನಲ್ಲಿ ಪ್ರಥಮ ಪಿಯುದಲ್ಲಿ ವ್ಯಾಸಂಗ ಮಾಡುತ್ತಿರುವ ಹುಡುಗಿಯೊಬ್ಬಳ ಪರಿಚಯವಿತ್ತು. ಹರ್ಷ ಮತ್ತು ಹುಡುಗಿ ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಹರ್ಷನ ಸ್ನೇಹಿತೆಯ ಹಿಂದೆ ಅದೇ ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿ ಅರ್ಧಕ್ಕೆ ಕಾಲೇಜು ತೊರೆದಿರುವ, ಪೊಲೀಸರ ವಶದಲ್ಲಿರುವ ಬಾಲಾರೋಪಿ ಬಿದ್ದಿದ್ದ. ಹಲವು ಬಾರಿ ಹುಡುಗಿ ಬಳಿ ಬಾಲ ಆರೋಪಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ವಿದ್ಯಾರ್ಥಿನಿ ಇದನ್ನು ನಿರಾಕರಿಸಿದ್ದಳು. ಇನ್ನೂ ಹರ್ಷನೊಂದಿಗೆ ತಾನು ಪ್ರೀತಿಸುತ್ತಿರುವ ಹುಡುಗಿ ಹೆಚ್ಚು ಮಾತನಾಡುತ್ತಾಳೆಂಬ ಕಾರಣಕ್ಕೆ ಬಾಲ ಆರೋಪಿ ಕೋಪಗೊಂಡಿದ್ದ.

Advertisement

ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಾರ್ಷಿಕೋತ್ಸವ ಸಮಾರಂಭ ಆರಂಭಗೊಂಡಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿದ್ಯಾರ್ಥಿಗಳೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತು. ವಾರ್ಷಿಕೋತ್ಸವದಲ್ಲಿ ಹರ್ಷ ತನ್ನ ಸ್ನೇಹಿತೆಯೊಂದಿಗೆ ಇದ್ದ. ಇದನ್ನು ಕಂಡಿದ್ದ ಬಾಲ ಆರೋಪಿ ಹರ್ಷನನ್ನು ಕರೆದು ಅವಳೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿದ್ದ. ಇದನ್ನು ನಿರ್ಲಕ್ಷಿಸಿದ್ದ ಹರ್ಷ, ತನ್ನ ಸ್ನೇಹಿತೆಯೊಂದಿಗೆ ಮಾತನಾಡುತ್ತಾ, ಆಕೆಯೊಂದಿಗೆ ಓಡಾಡುತ್ತಿದ್ದ. ಇದರಿಂದ ಕೋಪಗೊಂಡ ಬಾಲ ಆರೋಪಿ ಹರ್ಷನ ಸ್ನೇಹಿತರಿಗೆ ಹೇಳಿ 2.30 ಸುಮಾರಿಗೆ ಶಾಲೆಯಿಂದ
ಹೊರಗೆ ಕರೆಸಿದ್ದ. ಶಾಲಾ-ಕಾಲೇಜಿಗೆ ಹೊಂದಿಕೊಂಡತೆ ಹಿಂಬದಿ ರೈಲ್ವೆ ಹಳಿ ಇದ್ದು, ಅಲ್ಲಿಗೆ ಹರ್ಷರಾಜ್‌ನನ್ನು
ಕರೆಸಿಕೊಂಡಿದ್ದ ಬಾಲಾರೋಪಿ ಹಾಗೂ ಆತನ ಸ್ನೇಹಿತರು ಹರ್ಷನ ಬಳಿ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಾಲಾರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಹರ್ಷನ ಎದೆಗೆ ಇರಿದಿದ್ದಾನೆ. ರಕ್ತಸ್ರಾವವಾಗಿ ನರಳುತ್ತಿದ್ದ ಹರ್ಷನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯಾರ್ಥಿಯನ್ನು ಪರಿಶೀಲಿಸಿದ ವೈದ್ಯರು ಹರ್ಷ ಮೃತಪಟ್ಟಿದ್ದಾಗಿ
ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಕಲ್ಲೆಸೆದ ವಿದ್ಯಾರ್ಥಿಗಳು!
ಹರ್ಷನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸುವುದನ್ನು ನೋಡಿದ ಹರ್ಷನ ಸ್ನೇಹಿತರು ರೈಲ್ವೆ ಮೇಲ್ಸೇತುವೆ ಬಳಿ ನಿಂತು
ನೋಡಿದ್ದು, ಈ ವೇಳೆ ದುಷ್ಕರ್ಮಿಗಳ ಮೇಲೆ ಕಲ್ಲು ತೂರಿದ್ದಾರೆ. ಈ ವೇಳೆ ಕಲ್ಲೊಂದು ಪೊಲೀಸರು ವಶಕ್ಕೆ
ಪಡೆಯಲಾಗಿರುವ ಬಾಲಾರೋಪಿ ಮೇಲೆ ಬಿದ್ದಿದ್ದು, ಸಾರ್ವಜನಿಕರು ಹಿಡಿದು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದವರು ಸ್ಥಳದಿಂದ ಪರಾರಿಯಾದರು ಎಂದು ಸ್ಥಳದಲ್ಲಿದ್ದ ವಿದ್ಯಾರ್ಥಿಗಳು “ಉದಯವಾಣಿ’ಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next