ಕನ್ನಡದಲ್ಲಿ ಈಗಾಗಲೇ ಸಾಕಷ್ಟು ವಿಡಿಯೋ ಆಲ್ಬಂಗಳು ಬಂದಿವೆ. ಬರುತ್ತಲೂ ಇವೆ. ಈಗ ಅಂಥದ್ದೇ ಹೊಸ ವಿಡೀಯೋ ಆಲ್ಬಂ ಇತ್ತೀಚೆಗೆ ಬಿಡುಗಡೆಯಾಗಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿಕೊಂಡು ಈ ಆಲ್ಬಂ ಹೊರತಂದಿವೆ. ಇತ್ತೀಚೆಗೆ ವಿಡಿಯೋ ಹಾಡು ತೋರಿಸುವುದರ ಮೂಲಕ ತಮ್ಮ ಮೊದಲ ಪ್ರಯತ್ನದ ಬಗ್ಗೆ ಹೇಳಿಕೊಳ್ಳಲು ಪತ್ರಕರ್ತರ ಮುಂದೆ ಬಂದಿದ್ದರು ಗಣೇಶ್.
ಅವರ ಮೊದಲ ಪ್ರಯತ್ನದ ವಿಡೀಯೋ ಆಲ್ಬಂಗೆ ಇಟ್ಟುಕೊಂಡಿರುವ ಹೆಸರು “ಲವ್‌ಲೆಫ್ಟ್ ಅಸ್’. ಈ ಶೀರ್ಷಿಕೆಗೆ “ಹುಡುಗಿನೇ ಹಿಂಗಾ, ಹುಡುಗೀರೇ ಹಿಂಗಾ’ ಎಂಬ ಅಡಿಬರಹವೂ ಇದೆ. ಪ್ರೀತಿ ಬಿಧ್ದೋದ್ದಾಗ ಸಹಜವಾಗಿ ಹುಡುಗರು ಹೇಳುವ ಮಾತಿದು. ಅಂಥದ್ದೊಂದು ಕಲ್ಪನೆಯ ಮೇಲೊಂದು ಹಾಡು ಬರೆದು, ಚಿತ್ರೀಕರಿಸಿದ್ದಾರೆ ಗಣೇಶ್. ಈ ಆಲ್ಬಂ ಚಿತ್ರೀಕರಣಕ್ಕೆ ಹಣ ಹಾಕಿ ಹೊಸ ಪ್ರಯತ್ನಕ್ಕೆ ಸಾಥ್ ನೀಡಿರುವುದು ನಿರ್ಮಾಪಕ ಹೇಮಂತ್.
“ನಮ್ಮ ತಂಡದ ಮೇಲೆ ನಂಬಿಕೆ ಇಟ್ಟು ನಿರ್ಮಾಪಕರು ಹೇಳಿದ್ದನ್ನೆಲ್ಲಾ ಒದಗಿಸಿಕೊಟ್ಟಿದ್ದಾರೆ. ಇದೇ ಮೊದಲ ಸಲ, ಗಾಯಕ ಟಿಪ್ಪು ಅವರು ವೀಡಿಯೋ ಆಲ್ಬಂಗೆ ದನಿ ನೀಡಿದ್ದಾರೆ. ಎರಡು ವರ್ಷದ ಹಿಂದೆ ಚರ್ಚಿಸಿ, ಈ ಆಲ್ಬಂ ಸಾಂಗ್ ಮಾಡಲಾಗಿದೆ. ಎಲ್ಲರಿಗೂ ಇಲ್ಲಿ ಚಾಲೆಂಜಿಂಗ್ ಎನಿಸುವ ಕೆಲಸವಿತ್ತು. ಅದಕ್ಕೆಲ್ಲಾ ಉತ್ಸಾಹ ತುಂಬಿ ಹಾಡು ಅಚ್ಚುಕಟ್ಟಾಗಿ ಮೂಡಿ ಬರಲು ಕಾರಣ ನಿರ್ಮಾಪಕರು’ ಎಂದರು ಗಣೇಶ್.
ರಾಘವೇಂದ್ರ ಆಲ್ಬಂಗೆ ಸಂಗೀತ ನೀಡಿದ್ದಾರೆ. ಅವರಿಗೆ ಇಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ಇಲ್ಲಿ ಎಲ್ಲರೂ ಹೊಸಬರೇ. ಆದರೆ, ಎಲ್ಲರಿಗೂ ಅನುಭವ ಇತ್ತು. ಆ ಅನುಭವ ಒಳ್ಳೆಯ ವಿಡೀಯೋ ಹಾಡು ಮಾಡಲು ಸಾಧ್ಯವಾಗಿದೆ ಎಂದರು ರಾಘವೇಂದ್ರ. ಈ ಹಾಡಿಗೆ ಕ್ಯಾಮೆರಾ ಹಿಡಿದಿರುವುದು ಭಾನುಪ್ರತಾಪ್. ನಿರ್ಮಾಪಕರು ಕೇಳಿದ್ದನ್ನೆಲ್ಲಾ ನೀಡಿದ್ದರಿಂದ ಭಾನುಪ್ರತಾಪ್ ಅವರಿಗೆ ಈ ಹಾಡನ್ನು ವಿಭಿನ್ನವಾಗಿ ತೋರಿಸುವ ಆಸೆ ಹೆಚ್ಚಾಯಿತಂತೆ.
“ಇಲ್ಲಿ ಕಾಫ್ಟರ್ ಬಳಸಲಾಗಿದೆ. ಹೆಲಿಕ್ಯಾಮ್‌ನಲ್ಲೂ ಚಿತ್ರೀಕರಿಸಲಾಗಿದೆ. ಯಾವುದೇ ಕಮರ್ಷಿಯಲ್ ಸಿನಿಮಾಗಳ ಸಾಂಗ್‌ಗೆ ಕಮ್ಮಿ ಇಲ್ಲವೆಂಬಂತೆ ಈ ಹಾಡು ಮೂಡಿಬಂದಿದೆ’ ಎಂಬುದು ಭಾನುಪ್ರಾತಪ್ ಮಾತು. ರೋಹನ್‌ರಾಜ್ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. “ಗಣೇಶ್ ಎರಡು ವರ್ಷಗಳ ಹಿಂದೆ ಸಿಕ್ಕಾಗ, ಒಂದು ಸಾಹಿತ್ಯ ಬರೆದು ತೋರಿಸಿದ್ದರು. ಅದು ಚೆನ್ನಾಗಿತ್ತು. ಒಂದು ವಿಡೀಯೋ ಆಲ್ಬಂ ಮಾಡೋಣ ಅಂತ ಅಂದೇ ನಿರ್ಧರಿಸಿದ್ದೆವು. ಅದೀಗ ಈಡೇರಿದೆ.
ಮೊದಲು ಈ ರೇಂಜ್‌ಗೆ ಹಾಡು ಮೂಡಿಬರುತ್ತೆ ಅಂದುಕೊಂಡಿರಲಿಲ್ಲ. ಈಗ ನೋಡಿದ ಮೇಲೆ ಖುಷಿಯಾಗಿದೆ ಎಂದರು ರೋಹನ್‌ರಾಜ್. ಈ ಹಾಡಲ್ಲಿ ವಿಜಯಶ್ರೀ, ಅಮೂಲ್ಯ ಕೂಡ ನಟಿಸಿದ್ದಾರೆ. ಅಂದಹಾಗೆ, ಈ ಹಾಡಿಗೆ ಎಂಟು ಲಕ್ಷ ಖರ್ಚು ಮಾಡಿರುವ ನಿರ್ಮಾಪಕರು, ಹಣ ಹಿಂದಿರುಗಿ ಬರುತ್ತೆ ಎಂಬ ನಂಬಿಕೆ ಇಟ್ಟುಕೊಂಡಿಲ್ಲವಂತೆ. ಸಿನಿಮಾ ಮೇಲಿನ ಪ್ರೀತಿಯಿಂದ ಮೊದಲು ಈ ವಿಡೀಯೋ ಆಲ್ಬಂ ಮಾಡಿರುವುದಾಗಿ ಹೇಳುತ್ತಾರೆ ನಿರ್ಮಾಪಕರು.