ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಹಾಗೂ ಅಕ್ರಮ ವಲಸೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪಾಕ್ ಮೂಲಕ ಸಮೀರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಂಧನದ ವೇಳೆ ಸಮೀರಾ 4 ತಿಂಗಳ ಗರ್ಭವತಿಯಾಗಿದ್ದು, ಸೆ.19ರಂದು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೈಲಿನ ನಿಯಮಾವಳಿಯಂತೆ ಹುಟ್ಟಿರುವ ಮಗು 6 ವರ್ಷಗಳವರೆಗೆ ತಾಯಿ ಆರೈಕೆಯಲ್ಲೇ ಬೆಳೆಯಲಿದೆ.
ಸದ್ಯ ಸಮೀರಾ ಮತ್ತು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಅಥವಾ ಭಾನುವಾರ ಆಸ್ಪತ್ರೆಯಿಂದ ಜೈಲಿಗೆ ಮರಳಲಿದ್ದಾರೆ. ನಂತರ ಜೈಲಿನ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಮಗುವಿನ ನಾಮಕಾರಣವನ್ನು ಇಲ್ಲಿಯೇ ಮಾಡಲಾಗುತ್ತದೆ. ಮಗು ಭಾರತದಲ್ಲೇ ಜನಿಸಿರುವುದರಿಂದ ಆ ಮಗುವಿಗೆ ಭಾರತೀಯ ಪೌರತ್ವ ಸಿಗಲಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಹ ನೀಡಲಾಗುವುದು.
ಆದರೆ, ಸಮೀರಾ ಮೇಲಿರುವ ಅಕ್ರಮ ವಲಸೆ ಹಾಗೂ ನಕಲಿ ಪೌರತ್ವ ಪಡೆದ ಆರೋಪ ಕುರಿತು ನ್ಯಾಯಾಲಯ ತೀರ್ಮಾನಿಸಲಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಮತ್ತೂಂದೆಡೆ ಕಾನೂನು ತಜ್ಞರ ಪ್ರಕಾರ ಮಗು ಯಾವ ಸ್ಥಳದಲ್ಲಿ ಜನ್ಮ ನೀಡಿದೆಯೋ ಅದೇ ಸ್ಥಳದ ಪೌರತ್ವ ಸಿಗಲಿದೆ. ಅಲ್ಲದೇ ತಂದೆಯ ರಾಷ್ಟ್ರೀಯತೆಯನ್ನು ಇಲ್ಲಿ ಪರಿಗಣಿಸಲಾಗುತ್ತದೆ.
ಏನಿದು ಪ್ರಕರಣ?: ಕೇರಳ ಮೂಲದ ಮೊಹಮ್ಮದ್ ಸಿಹಾಬ್ ಕೆಲ ವರ್ಷಗಳ ಹಿಂದೆ ಕತಾರ್‌ನಲ್ಲಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಈ ವೇಳೆ ಪಾಕಿಸ್ತಾನ ಮೂಲದ ಸಮೀರಾ ಜತೆ ಪ್ರೇಮಾಂಕುರವಾಗಿ ಇಬ್ಬರು ಮನೆಯವರ ವಿರೋಧದ ನಡುವೆ ವಿವಾಹವಾಗಿದ್ದರು. ಹೀಗೆ 2016ರಲ್ಲಿ ಬೆಂಗಳೂರಿಗೆ ಅಕ್ರಮವಾಗಿ ಪಾಸ್‌ಪೋರ್ಟ್ ಮತ್ತು ಮೀಸಾ ಪಡೆದು ಬಂದಿದ್ದರು. ನಂತರ ಇಲ್ಲಿನ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
ಬಳಿಕ ಸ್ಥಳೀಯ ಮಧ್ಯವರ್ತಿಯೊಬ್ಬನಿಗೆ ಹಣದ ಆಮಿಷವೊಡ್ಡಿ ಆಧಾರ್ ಕಾರ್ಡ್ ಸೇರಿದಂತೆ ಎಲ್ಲ ಮಾದರಿಯ ಗುರುತಿನ ಚೀಟಿ ಮಾಡಿಸಿಕೊಂಡಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆರು ತಿಂಗಳ ಹಿಂದೆ ಸಿಹಾಬ್, ಈತನ ಪತ್ನಿ ಸಮೀರಾ ಹಾಗೂ ಈಕೆಯ ಇಬ್ಬರು ಸಂಬಂಧಿಕರನ್ನು ನಕಲಿ ಆಧಾರ್ ಕಾರ್ಡ್ ಹಾಗೂ ಅಕ್ರಮ ವಲಸೆ ಆರೋಪದ ಮೇಲೆ ಬಂಧಿಸಿ ಜೈಲಿಗೆ ಕಳುಹಿಸಿದ್ದರು.