“ಯಾರಾದರೂ ಬರ್ರೂ, ಏನೋ ಗೆಜ್ಜೆ ಶಬ್ದ ಕೇಳ್ತಾ ಇದೆ’ ಅಂತ ಜೋರಾಗಿ ಅಳ್ಳೋದು ಕೇಳಿಸಿತು. ಮೊದಲೇ ಹೇಳಿದ ಹಾಗೆ ಯಾರೊಬ್ಬರೂ ಅವನ ಸಹಾಯಕ್ಕೆ ಹೋಗಲಿಲ್ಲ.
ಬಿಎಡ್ ಓದುವಾಗ ನನಗೊಬ್ಬ ಫ್ರೆಂಡ್ ಇದ್ದ. ಅವನ ಹೆಸರು ವಿನಯ್. ರ್‍ಯಾಂಕ್ ಸ್ಟೂಡೆಂಟ್. ಹಾಸ್ಟೆಲ್ ಬಿಡಿ, ಜೀವನದಲ್ಲಿ ಒಮ್ಮೆಯೂ ಒಬ್ಬನೇ ಹೋಗಿ ಸಂಬಂಧಿಕರ ಮನೆಯಲ್ಲಿ ಎಂಟತ್ತು ದಿನ ಇದ್ದು ಬಂದವನಲ್ಲ. ತಂದೆ- ತಾಯಿಗೆ ಒಬ್ಬನೇ ಮಗ ಅಂತ, ತುಂಬಾ ಮುದ್ದಿನಿಂದ ಸಾಕಿದ್ದರು.
ಕಾಲೇಜ್‌ನಲ್ಲಿ ಅಸೈನ್‌ಮೆಂಟ್ ಜಾಸ್ತಿ ಕೊಡುತ್ತಿದ್ದಾರೆ. ಲೆಸನ್ ಪ್ಲಾನ್ ಹತ್ತು ಸಾರಿ ಬರೆದರೂ ಅನುಮೋದನೆ ಮಾಡಲಿಲ್ಲ… ಅಂತ ಯಾರಾದರೂ ಉಪನ್ಯಾಸಕರ ಬಗ್ಗೆ ಗೊಣಗಿಕೊಂಡರೂ ಅದನ್ನು ನೇರವಾಗಿ ತೆಗೆದುಕೊಂಡು ಹೋಗಿ ಅವರಿಗೆ ಹೇಳಿಬಿಡುತ್ತಿದ್ದ. ಹೀಗಾಗಿ ನಮ್ಮಂಥ ಅನೇಕರಿಗೆ ಅವನು ಇಷ್ಟವಾಗುತ್ತಿರಲಿಲ್ಲ. ಹೇಗಾದರೂ ಮಾಡಿ ಅವನಿಗೆ ತಕ್ಕ ಪಾಠ ಕಲಿಸಬೇಕು ಅಂತ ತೀರ್ಮಾನಿಸಿದೆವು.
ಅವನು ತುಂಬಾ ಹೆದರುಪುಕ್ಕಲ. ಹಾಸ್ಟೆಲ್‌ನಲ್ಲಿ ನಾವು ವಾಸಿಸುತ್ತಿದ್ದ ರೂಂನಿಂದ ಸ್ವಲ್ಪ ದೂರದಲ್ಲಿ ಬಾತ್‌ರೂಂ ಇತ್ತು. ಅಲ್ಲಿಗೆ ಹೋಗಬೇಕಾದರೂ ಅವನ ಜೊತೆಯಲ್ಲಿ ಯಾರಾದರೊಬ್ಬರು ಇರಲೇಬೇಕಿತ್ತು. ಅದೇ ವಿನಯ್‌ನ ವೀಕೆ°ಸ್ ಅಂತ ನಮಗೆ ಗೊತ್ತಿತ್ತು. ನಾವೆಲ್ಲಾ ಸೇರಿ ಒಂದು ಉಪಾಯ ಮಾಡಿದೆವು. ರಾತ್ರಿ ಸಮಯದಲ್ಲಿ ಅವನನ್ನು ಹೆದರಿಸಬೇಕು ಅಂದುಕೊಂಡೆವು. ನನ್ನ ಸೇಹಿತ ಹುಚ್ಚಪ್ಪ ಈ ಕೆಲಸ ಮಾಡಿ ಮುಗಿಸುವ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡ.
ಅವತ್ತೂಂದು ದಿನ ರಾತ್ರಿ ಹನ್ನೆರಡು ಗಂಟೆ. ಹುಚ್ಚಪ್ಪ ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ವಿನಯನ ರೂಂ ಸುತ್ತ ಸುತ್ತಾಡ್ತಾ ಇದ್ದ. ಆ ಸದ್ದು ಕೇಳಿ ನಮಗೂ ಭಯವಾಗಿತ್ತು. ನಿಜವಾಗ್ಲೂ ದೆವ್ವ ಏನಾದ್ರೂ ಬಂದುಬಿಡ್ತೇನೋ ಅಂತ. ನಮಗೇ ಈ ರೀತಿ ಅನಿಸಿದರೆ ಅಲ್ಲಿ ವಿನಯನ ಸ್ಥಿತಿ ಏನಾಗಿರಬೇಡ? “ಯಾರಾದರೂ ಬರ್ರೂ, ಏನೋ ಗೆಜ್ಜೆ ಶಬ್ದ ಕೇಳ್ತಾ ಇದೆ’ ಅಂತ ಜೋರಾಗಿ ಅಳ್ಳೋದು ಕೇಳಿಸಿತು. ಮೊದಲೇ ಹೇಳಿದ ಹಾಗೆ ಯಾರೊಬ್ಬರೂ ಅವನ ಸಹಾಯಕ್ಕೆ ಹೋಗಲಿಲ್ಲ. ಬೆಳಗ್ಗೆ ಹೋಗಿ ನೋಡಿದರೆ ಅವನು ಜ್ವರದಿಂದ ನರಳ್ತಾ ಇದ್ದ. ಎಲ್ಲರಿಗೂ ಒಳಗೊಳಗೇ ಖುಷಿಯಾಗಿತ್ತು.
ಅವನನ್ನು ಅಷ್ಟಕ್ಕೇ ಬಿಡದೆ ಮೂರು ದಿನಗಳ ಕಾಲ ಹೆದರಿಸಿದೆವು. ಸುಮಾರು ಆರಡಿ ಎತ್ತರದ ಅಜಾನುಬಾಹು ದೇಹದ ವಿನಯ್ ಕೇವಲ ಮೂರೇ ಮೂರು ದಿನಗಳಲ್ಲಿ ನಿಸ್ತೇಜನಾಗಿ ಹಾಸಿಗೆ ಹಿಡಿಯುವಂತಾದ. ಮೈ ಮೇಲೆ ಕೈ ಇಟ್ಟರೆ ಕೆಂಡದಂಥ ಜ್ವರ. ಅಪ್ಪಾ! ಅಮ್ಮಾ..! ಅಯ್ಯೋ…. ! ಅಂತ ನರಳ್ತಾ ಇದ್ದ. ಅವನನ್ನು ಈ ಸ್ಥಿತಿಯಲ್ಲಿ ನೋಡಿದ ನಮಗೆ ಪಾಪಪ್ರಜ್ಞೆ ಕಾಡೋಕೆ ಶುರುವಾಯ್ತು. ಕೊನೆಗೂ ಅವನ ಮುಂದೆ ತಪ್ಪೊಪ್ಪಿಕೊಂಡೆವು. ಅದು ಭೂತ, ದೆವ್ವದ ಕಾಟ ಅಲ್ಲವೆಂದು ಗೊತ್ತಾದ ಮೇಲೆ ವಿನಯ್ ನಿರಾಳನಾಗಿದ್ದ. ಆಮೇಲೆ ನಾವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದೆವು. ಮುಂದೆಂದೂ, ಯಾರಿಗೂ ಈ ರೀತಿ ಮಾಡಬಾರದು ಅಂತ ಅವತ್ತೇ ನಿರ್ಧರಿಸಿದೆವು. ಈಗಲೂ ವಿನಯ್ ಈ ವಿಷಯ ನೆನಪಿಸಿಕೊಂಡು ಸಿಕ್ಕಿದಾಗೆಲ್ಲಾ ಬೈಯ್ತಾನೆ.
ವೀರೇಶ್ ಮಾಡ್ಲಾಕನಹಳ್ಳಿ