ಬೆಂಗಳೂರು: ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ “ಘನಿ’ ಚಂಡಮಾರುತದ ಪರಿಣಾಮ ರಾಜ್ಯದ ಮೇಲೆ ಹೆಚ್ಚಾಗಿರುವುದಿಲ್ಲ. ಆದರೆ, ಏ.28ರ ಬಳಿಕ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಉಂಟಾಗಿದ್ದ ಕಡಿಮೆ ಒತ್ತಡ ಪ್ರದೇಶದಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತ ಸೃಷ್ಟಿಯಾಗಿದೆ. ಅದರಂತೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಕರಾವಳಿ ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದ್ದು, ಏ.28ರ ಬಳಿಕ ರಾಜ್ಯದ ಕರಾವಳಿಯಲ್ಲಿ ಮಳೆಯಾಗಲಿದೆ.
ಚಂಡಮಾರುತದ ನೇರ ಪ್ರಭಾವ ರಾಜ್ಯದ ಮೇಲೆ ಆಗದಿದ್ದರೂ, ಚಂಡಮಾರುತ ತಮಿಳುನಾಡು ಹಾಗೂ ಆಂಧ್ರ ಕರಾವಳಿ ಮೂಲಕ ಚಲಿಸುವುದರಿಂದ ಗಾಳಿಯ ವೇಗ ಹಾಗೂ ಸಮುದ್ರದ ಅಲೆಗಳ ಏರೀಳಿತ ಹೆಚ್ಚಾಗಲಿದೆ. ಪರಿಣಾಮ ಕರಾವಳಿ ಮತ್ತು ಮಳೆನಾಡು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಜತೆಗೆ ಮೇ ತಿಂಗಳ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಬೆಂಗಳೂರು ಸೇರಿದಂತೆ ಹಲವೆಡೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಹಾಗೂ ಗಾಳಿಯ ಒತ್ತಡ ಕಡಿಮೆಯಾದ ಪರಿಣಾಮ ರಾಜ್ಯದ ಉತ್ತರ ಒಳನಾಡಿನಲ್ಲಿ ಶುಭ್ರ ಆಕಾಶವಿದ್ದು, ಮೋಡಗಳು ರೂಪುಗೊಳ್ಳುವುದಿಲ್ಲ. ಇದರಿಂದ ರಾಜ್ಯದ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮೇ 1ರವರೆಗೆ ವಾಡಿಕೆಗಿಂತ ಎರಡು ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಾಗಿರಲಿದ್ದು, ಒಳನಾಡಿನ ಕೆಲವೆಡೆ ಮಳೆಯಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.