Advertisement

ಲಘುವಾಗದೆ ಗುರುವೆನಿಸಿದರು !

06:00 AM Jul 15, 2018 | |

ಇಂದು ಉಡುಪಿಯಲ್ಲಿ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ನಡೆಯುತ್ತಿದೆ. ಒಂದೂವರೆ ತರಗತಿ ಓದಿ ಐವತ್ತಕ್ಕಿಂತಲೂ ಅಧಿಕ ದೇಶಗಳಲ್ಲಿ ಓಡಾಡಿದ ಬನ್ನಂಜೆ ಸಂಜೀವ ಸುವರ್ಣರು ಕಲೆಯ ಚೌಕಟ್ಟನ್ನು ವಿಸ್ತರಿಸಿ ಸಮಾಜಮುಖಿಗಿ ಸಾಗಿದವರು. ಜರ್ಮನಿಯ ಶಿಷ್ಯೆಯೊಬ್ಬರು ಸಂಜೀವ ಸುವರ್ಣರ ಗುರುತನವನ್ನು ಗೌರವದಿಂದ ನೆನೆದಿದ್ದಾರೆ.

Advertisement

ಗುರು ಬನ್ನಂಜೆ ಸಂಜೀವ ಸುವರ್ಣರನ್ನು ನಾನು ಮೊದಲಿಗೆ ಕಂಡದ್ದು 2000ದಲ್ಲಿ ; ನನ್ನ ಪ್ರಥಮ ಭಾರತ ಭೇಟಿಯ ಸಂದರ್ಭದಲ್ಲಿ. ನನ್ನ-ಅವರ ಅಂದಿನ ಭೇಟಿ ತೀರಾ ಹೃಸ್ವವಾದದ್ದು. ಒಬ್ಬರ ಭಾಷೆ ಇನ್ನೊಬ್ಬರಿಗೆ ಅರ್ಥವಾಗದೆಯೂ ನಡೆದ ಭೇಟಿ ಅದು! ಅಂದು ನಮ್ಮ ನೆರವಿಗೆ ಬಂದದ್ದು ಮಲಯಾಳ, ಇಂಗ್ಲಿಷ್‌ನ ಕೆಲವು ಹರುಕು ಮುರುಕು ಪದಗಳನ್ನು ಬಳಸಿಕೊಂಡ ಉದ್ಗಾರಗಳು ಹಾಗೂ ಧಾರಾಳವಾಗಿ ಬಳಸಿಕೊಂಡ ಕೈ ಹಾಗೂ ಕಾಲಿನ ಸನ್ನೆಗಳು! ಆದರೆ, ಈ ಭೇಟಿಗೆ ಸಂಬಂಧಿಸಿದಂತೆ ನನಗೆ ಇನ್ನೂ ನೆನಪಿನಲ್ಲಿ  ಉಳಿದಿರುವ ಅಂಶಗಳೆಂದರೆ, ಅವರ ಮುಗುಳ್ನಗು ಮತ್ತು ಸ್ನೇಹ-ವಿಶ್ವಾಸಪೂರ್ಣ ನಡವಳಿಕೆ.

ಅದರ ಮುಂದಿನ ವರ್ಷ ಭಾರತಕ್ಕೆ ನಾನು ಬಂದದ್ದು, ನನ್ನ ಎಂಎ ಥೀಸಿಸ್‌ಗೊಸ್ಕರ ಅಭಿಮನ್ಯು ಕಾಳಗ ಪ್ರಸಂಗವನ್ನು ಅನುವಾದಿಸುವ ಉದ್ದೇಶದಿಂದ. ಜರ್ಮನಿಯ ತ್ಯುಬಿನ್‌ಜೆನ್‌ ಯೂನಿವರ್ಸಿಟಿಯಲ್ಲಿ ಭಾರತೀಯ ಶಾಸ್ತ್ರದ ವಿದ್ಯಾರ್ಥಿಯಾಗಿದ್ದ ನಾನು ಆ ವರ್ಷ ನಡೆಸಬೇಕಿದ್ದ ಅಧ್ಯಯನ ಪ್ರಬಂಧದ ವಸ್ತುವೆಂದು ಇದನ್ನೇ ಆಯ್ದುಕೊಂಡಿದ್ದೆ. ಕೆಲಕಾಲ ಉಡುಪಿಯ ಯಕ್ಷಗಾನ ಕೇಂದ್ರದಲ್ಲೇ ಈ ಕೆಲಸ ಮಾಡುವುದು ಒಳ್ಳೆಯದೆಂದುಕೊಂಡೆ. ಹಾಗೆ ಬಂದವಳನ್ನು ಗುರು ಸಂಜೀವರು ಮೊದಲ ದಿನದಿಂದಲೇ ಚೆನ್ನಾಗಿ ನೋಡಿಕೊಂಡರು. ನಾನು ಉಳಿದುಕೊಂಡಿದ್ದ ಲಾ ಕಾಲೇಜಿನ ಲೇಡೀಸ್‌ ಹಾಸ್ಟೆಲ್‌ನಲ್ಲಿನ ಕಪಾಟಿನ ಕೀಯನ್ನು ಒಳಗೇ ಬಿಟ್ಟಿದ್ದಾಗ ಗುರುಗಳೇ ಬಂದು ಗರಗಸದ ಸಹಾಯದಿಂದ ಬಾಗಿಲು ತೆರೆಸಿಕೊಟ್ಟಿದ್ದುಂಟು. ಎಲ್ಲಕ್ಕಿಂತ ಮುಖ್ಯವಾಗಿ, ಜರ್ಮನಿಯಲ್ಲಿನ ನನ್ನ ಪ್ರೊಫೆಸರರ ಒತ್ತಾಸೆಯಂತೆ ನಾನು, “ನಿಮಗೆ ಸಾಧ್ಯವಿದ್ದರೆ,  ಅನುಕೂಲವಾದರೆ ನನಗೆ ಕೆಲವು ಹೆಜ್ಜೆಗಳನ್ನು ಕಲಿಸಿಕೊಡುತ್ತೀರಾ?’ ಎಂದು ಕೇಳಿದಾಗ, ಅವರು ನನಗಾಗಿ ಪೂರ್ಣಪ್ರಮಾಣದ ಪಠ್ಯವೊಂದನ್ನು ತಯಾರಿಸಿದರು; ಯಕ್ಷಗಾನ ಕೇಂದ್ರದಲ್ಲಿ ಪ್ರತಿದಿನವೂ, ಬೆಳಗ್ಗಿನಿಂದ ಸಂಜೆಯ ತನಕ ಕಲಿಸುವ ವ್ಯವಸ್ಥೆ ಮಾಡಿದರು. ಅತ್ಯಂತ ತಾಳ್ಮೆಯಿಂದ ಎಲ್ಲ  ಏಳು ಬಗೆಯ ತಾಳಗಳಿಗೆ ಸಂಬಂಧಿಸಿದ ಹೆಜ್ಜೆಗತಿಗಳನ್ನು ಖುದ್ದಾಗಿ ಕಲಿಸಲಾರಂಭಿಸಿದರು. ನೃತ್ಯ ಕಲೆಯಲ್ಲಿ ಯಾವುದೇ ರೀತಿಯ ಹಿನ್ನೆಲೆಯಿಲ್ಲದವಳು ನಾನು. ಜತೆಗೆ, ಆ ವರ್ಷದ ಆರಂಭದ ದಿನಗಳಲ್ಲಿ ಬೆನ್ನುಮೂಳೆ ಮುರಿದುಹೋಗಿ ಅದು ವಾಸಿಯಾಗಿದ್ದರೂ, ಹಿಂದಕ್ಕೆ ಬಾಗಲಾರದ ಸ್ಥಿತಿಯಲ್ಲಿದ್ದವಳು. ಸಾಲದ್ದಕ್ಕೆ ಕನ್ನಡವನ್ನು ಅರ್ಥಮಾಡಿಕೊಳ್ಳುವ ಕೆಲಸವೂ ನಿಧಾನಗತಿಯಲ್ಲೇ ಸಾಗುತ್ತಿತ್ತು. ಆದರೂ ಗುರುಗಳು ಇಂಥ ಅಡ್ಡಿ ವಿಡೂxರಗಳನ್ನು ಲೆಕ್ಕಿಸದೆ ಶ್ರದ್ಧೆಯಿಂದಲೇ ಕಲಿಸಿದರು. ಇಂಥ ಪರಂಪರಾಗತ ಶಿಸ್ತನ್ನು ಅವರು ತಮ್ಮ ಪ್ರತಿ ಹೆಜ್ಜೆಯಲ್ಲಿ , ಪ್ರತಿ ಉಸಿರಿನಲ್ಲಿ ಮೈಗೂಡಿಸಿಕೊಂಡಿದ್ದರೆಂಬುದನ್ನು ನೋಡುವ ಅವಕಾಶ ಈ ರೀತಿಯಲ್ಲಿ  ನನಗೆ ಲಭಿಸಿತು. ಕಲಿಸುವ ವೇಳೆಯಲ್ಲಿ ಅವರನ್ನು ಗಮನಿಸುವುದೆಂದರೆ, ಅದೊಂದು ಸ್ವಂತ ಜ್ಞಾನವನ್ನು ಧಾರೆಯೆರೆಯುವ ಸಂಕಲ್ಪದ ಬೋಧನಾ ಪ್ರಕ್ರಿಯೆಯೇ ಹೌದು; ಅವರು ಯಕ್ಷರಂಗದ ತಂಡಕ್ಕೆ ರಿಹರ್ಸಲ್‌ ಮಾಡಿಸುತ್ತಿದ್ದ ರೀತಿ ಕೂಡ ನನಗೆ ಸ್ಫೂರ್ತಿ/ಪ್ರೇರಣೆ ನೀಡುವಂಥದ್ದಾಗಿತ್ತು. ಕ್ರವೆುàಣ ಅವರು ಪ್ರಸಂಗದಲ್ಲಿನ ಪಠ್ಯವನ್ನು ಗುರುತಿಸಿ, ದಾಖಲಿಸಿಕೊಳ್ಳುವ ಕೆಲಸದಲ್ಲಿ ಸಹಾಯ ಮಾಡಿದರು. ಇದನ್ನು ಮುಂದೆ ಎನ್‌.ಟಿ. ಭಟ್‌ರಂಥ ಸಮರ್ಥ ಅನುವಾದಕರ ನೆರವಿನಿಂದ ಅನುವಾದಿಸಿದೆ; ಅಲ್ಲದೆ, ಗೋರ್ಪಾಡಿ ವಿಟuಲ ಪಾಟೀಲರಿಂದ ಸಾಂಪ್ರದಾಯಿಕ ಮಾರ್ಗದರ್ಶಿ ಸೂತ್ರಗಳ ಪರಿಚಯ ಲಾಭ ದೊರಕಿಸಿ ಕೊಟ್ಟರು. ಇದೇ ಪ್ರಸಂಗವನ್ನು ಆ ವರ್ಷಾಂತ್ಯದ ಪ್ರದರ್ಶನಕ್ಕಾಗಿ ಆಯ್ಕೆಮಾಡಿಕೊಂಡರು ಕೂಡ! ಇದರಲ್ಲಿನ ಕೃಷ್ಣನ ಪಾತ್ರವನ್ನು ನನಗೇ ಕೊಟ್ಟರು. ತಮ್ಮ ಮನೆಯಲ್ಲೇ, ಮುಂಜಾವಿನ ವೇಳೆಯಲ್ಲಿ ಹೆಚ್ಚುವರಿ ಪಾಠಗಳನ್ನು ಬೋಧಿಸಿದರು ಜತೆಗೆ ಸ್ವಾದಿಷ್ಟ ನಾಷ್ಟಾದ ಉಪಚಾರವೂ ಇರುತ್ತಿತ್ತು. ಈ ಸುದೀರ್ಘ‌ ವಾಸ್ತವ್ಯದ ಕೊನೆ ಕೊನೆಯ ದಿನಗಳಲ್ಲಿ ಇವರ ಮನೆಯವರೊಂದಿಗೆ ಬೆರೆತು, ಮನೆಯ ಸದಸ್ಯಳಂತೆಯೇ ಆದೆ. ಆ ದಿನಗಳಲ್ಲಿ ನಾನು ಕಂಡ ಸ್ನೇಹ ವಾತ್ಸಲ್ಯಗಳ ಗಳಿಗೆಗಳು ಹಾಗೂ ಮನೆಯವರು ತೋರುತ್ತಿದ್ದ ಔದಾರ್ಯಗಳು ಇಂದಿಗೂ ತಟ್ಟನೆ ನೆನಪಾಗುತ್ತವೆ. ಈ ಸ್ನೇಹ- ಔದಾರ್ಯಗಳು ನನಗೊಬ್ಬಳಿಗೇ ಅಲ್ಲ , ನನ್ನ ಭಾವೀ ಪತಿ ಹಾಗೂ ಹೆತ್ತವರ ಭಾರತ ಭೇಟಿಯ ಸಂದರ್ಭದಲ್ಲಿ ಅವರುಗಳಿಗೂ ಲಭಿಸಿವೆ.

ಆಮೇಲೆ, ನಾನು ಭಾರತದ ವಾಸ್ತವ್ಯ ಮುಗಿಸಿ ಸ್ವದೇಶಕ್ಕೆ ಹೊರಟು ನಿಂತಾಗ ಅಚ್ಚುಕಟ್ಟಾಗಿ ರೂಪಿಸಿದ್ದ ಕಾರ್ಯಕ್ರಮದ ರೂಪುರೇಷೆ ನನ್ನ  ಬಳಿಯಿತ್ತು. ಜರ್ಮನಿಯಲ್ಲಿ  ಪ್ರದರ್ಶನ ನೀಡಲು ಅನುಕೂಲವಾಗುವಂತೆ ವಿಶೇಷವಾಗಿ ದಾಖಲಿಸಿಕೊಂಡಿದ್ದ ಹಿಮ್ಮೇಳ ಸಂಗೀತ ಹಾಗೂ ವೇಷಭೂಷಣಗಳ ಸಂಗ್ರಹದೊಂದಿಗೆ, ಸಕಲ ಸಜ್ಜಿತಳಾಗಿಯೇ ಭಾರತದಿಂದ ಬೀಳ್ಕೊಂಡೆ. ಮುಂದಿನ ಭೇಟಿಗಳಲ್ಲಿ ನಮ್ಮ ಸ್ನೇಹ ಸಂಬಂಧ ಇನ್ನಷ್ಟು ಗಾಢವಾಯಿತು. ಇಂಥ ಭೇಟಿಗಳ  ವೇಳೆ ನಾನು ಇಲ್ಲಿ  ವಾಸ್ತವ್ಯ ಹೂಡುತ್ತಿದ್ದ ಸಂದರ್ಭಗಳಲ್ಲಿ ನನ್ನ ಯಕ್ಷಗಾನ ಸಂಬಂಧಿ ವಿಷಯ ಭಂಡಾರ ಇನ್ನಷ್ಟು ವಿಸ್ತಾರಗೊಳ್ಳಲು ಅವರು ನೆರವಾದರು. ಯಕ್ಷಗಾನ ಪ್ರದರ್ಶನಕ್ಕೆ ಸಂಬಂಧಿಸಿದ ಪ್ರಾಥಮಿಕ ವಿಧಿಗಳ ಅಥವಾ ಯಕ್ಷಗಾನ ಪೂರ್ವರಂಗದ ಕಡೆಗೂ ನನ್ನ ಗಮನ ಸೆಳೆದರು; ಈ ಮಾಹಿತಿ ನನ್ನ ಪಿಎಚ್‌.ಡಿ. ಪ್ರಬಂಧದಲ್ಲಿ ಬಹು ಮುಖ್ಯವಾದ ಭಾಗವಾಗಿ ನನ್ನ ನೆರವಿಗೆ ಬಂದಿದೆ.

ಕಳೆದ ಇಷ್ಟು ವರ್ಷಗಳಲ್ಲಿ ಅವರ ಸರ್ವಾರ್ಪಣಭಾವದ ಕಲಾ ಕಸುಬುಗಾರಿಕೆ ಹಾಗೂ ಸಂಶೋಧನೆಯ ಕಾಯಕ ಕುರಿತ ಅವರ ಬದ್ಧತೆಗೆ ನ್ಯಾಯವಾಗಿಯೇ ಸಲ್ಲಬೇಕಾದ ಮನ್ನಣೆ, ಗೌರವಗಳು ಅವರಿಗೆ ದೊರಕಿರುವುದನ್ನು ಕಂಡು ಸಂತಸಪಟ್ಟಿದ್ದೇನೆ. ಆರ್ಥಿಕ ಸವಲತ್ತುಗಳಿಂದ ವಂಚಿತವಾದ ಹಿನ್ನೆಲೆಯಿಂದ ಬಂದಿರುವವರು ಅವರು; ಕಷ್ಟಕಾರ್ಪಣ್ಯಗಳ ಬಾಲ್ಯವನ್ನು ಕಂಡವರು. ಅಳಿವಿನ ಅಥವಾ ವಿಸ್ಮತಿಯ ಅಂಚಿನಲ್ಲಿರುವ ಸಾಂಪ್ರದಾಯಿಕ ಯಕ್ಷಗಾನ ಕಲೆಯ ವಿವಿಧ ವೈಶಿಷ್ಟéಗಳನ್ನು , ಹಾಗೂ ಮೂಲಲಕ್ಷಣಗಳನ್ನು ಮರಳಿ ಉಳಿಸಿಕೊಳ್ಳುವುದಕ್ಕಾಗಿ ಅವರು ಹಿರಿಯ ಯಕ್ಷಗಾನ ಕಲಾವಿದರೊಂದಿಗೆ ನಡೆಸುತ್ತಿರುವ ದಾಖಲೀಕರಣ ಹಾಗೂ ಸುಧಾರಣಾ ಪ್ರಯತ್ನಗಳ ಬಗ್ಗೆ ಅಗಾಧವಾದ ಗೌರವವಿದೆ ನನಗೆ. ನತದೃಷ್ಟ ಊನಾಂಗಿ ಮಕ್ಕಳೂ ಸೇರಿದಂತೆ ಭಿನ್ನವಿಭಿನ್ನ ಹಿನ್ನೆಲೆಗಳಿಂದ ಬಂದ ಎಷ್ಟೋ ಮಕ್ಕಳಿಗೆ ಯಕ್ಷಗಾನ ಕಲಿಕೆಯ ಸದವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅವರು ಅವಿರತವಾಗಿ ಶ್ರಮಿಸುತ್ತ ಬಂದಿರುವುದು ನಿಜಕ್ಕೂ ಶ್ಲಾಘನೀಯ. ಹೆಣ್ಣು ಮಕ್ಕಳಿಗೆ/ಮಹಿಳೆಯರಿಗೆ ಯಕ್ಷಗಾನ ಕಲಿಸುವ ನಿಟ್ಟಿನಲ್ಲಿ ಅವರು ತೋರುತ್ತಿರುವ ಬದ್ಧತೆ ನಿಜಕ್ಕೂ ಆದರ್ಶಪ್ರಾಯ. ಆದರೆ ಗುರು ಸಂಜೀವರು, ನನ್ನ ದೃಷ್ಟಿಯಲ್ಲಿ ನೈಜ ಯಕ್ಷಗಾನ ಕಲಾವಿದ ಮಾತ್ರವಲ್ಲ ; ಯಾವುದೇ ಗಡಿಬಿಡಿ- ಚಡಪಡಿಕೆಯಿಲ್ಲದೆ ಅವರು ಕಟ್ಟಡಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ; ಹೂಗಿಡಗಳಿಗೆ ನೀರುಣಿಸುತ್ತಾರೆ; ವಿದ್ಯಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ; ಸಂದರ್ಶಕರನ್ನು ಬರಮಾಡಿಕೊಳ್ಳುತ್ತಾ¤ರೆ. ಇಂಥ ಕೆಲಸಗಳು ಎಷ್ಟೋ ಇರುತ್ತವೆ. ಅವರೊಡನೆ ಯಕ್ಷಗಾನ ಪ್ರದರ್ಶನಗಳಲ್ಲಿ ಪಾತ್ರ ಮಾಡುವ ಅವಕಾಶಗಳೂ ನನಗೆ ದೊರೆತಿವೆ. ನನ್ನ ಮದುವೆ ಸಮಾರಂಭಕ್ಕೆಂದು ಅವರು ಕುಟುಂಬಸಹಿತರಾಗಿ ಜರ್ಮನಿಗೆ ಬಂದಿದ್ದ ಸಂದರ್ಭದಲ್ಲಿ ನಮಗಾಗಿ ಜಾಂಬವತಿ ಕಲ್ಯಾಣ ಪ್ರಸಂಗವನ್ನು ಸಿದ್ಧಪಡಿಸಿದ್ದರು. ಹಾಗೆಯೇ ಮುಂದೆ ಬ್ರಿಟನ್‌ಗೆ ಬಂದಿದ್ದ ಸಂದರ್ಭದಲ್ಲೂ ಅವರೊಂದಿಗೆ ಪಾತ್ರ ನಿರ್ವಹಿಸುವ ಅವಕಾಶ ಲಭಿಸಿತ್ತು. ರಿಹರ್ಸಲ್‌ನ ಅಗತ್ಯವಿಲ್ಲದೆಯೇ ಅಥವಾ ಪದಗಳ ಅಗತ್ಯವಿಲ್ಲದೆಯೆ ಕಡೆಗಣ್ಣ ನೋಟ ಮಾತ್ರದಿಂದ ಪಾತ್ರ ಚಲನೆಯಲ್ಲಿ ಸಾಮರಸ್ಯ ಸಾಧಿಸುವಂತೆ ನಿರ್ದೇಶನವೀಯಬಲ್ಲ ಸಾಮರ್ಥ್ಯ ಅವರಿಗಿದೆ. ಇಂಥ ಅದ್ಭುತ ಕಲಾವಿದನ ಎದುರಲ್ಲಿ ಪಾತ್ರ ನಿರ್ವಹಿಸುವ ಅವಕಾಶ ನನಗೆ ಒದಗಿದೆ; ಇಂಥ ಸುವರ್ಣಾವಕಾಶ ನನ್ನ ಜೀವಮಾನಪರ್ಯಂತ ಸ್ಫೂರ್ತಿ ನೀಡಬಲ್ಲ ವಿದ್ಯಮಾನವಾಗಿ ಪರಿಣಮಿಸಿದೆ. ಗುರು ಸಂಜೀವ ಸುವರ್ಣರ ಬಗ್ಗೆ ಹೀಗೆ ಹೇಳುವವಳು ನಾನೊಬ್ಬಳೇ ಅಲ್ಲ , ಅನೇಕರಿದ್ದಾರೆ ಎಂಬುದೂ ನನಗೆ ಗೊತ್ತಿದೆ.

Advertisement

ಕತ್ರೀನ್‌ ಬೈಂದರ್‌, ಜರ್ಮನಿ
(ಕನ್ನಡಕ್ಕೆ : ಜಯರಾಮ ಕಾರಂತ)

Advertisement

Udayavani is now on Telegram. Click here to join our channel and stay updated with the latest news.

Next