Advertisement

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಕುತೂಹಲದ ಕಣ

08:52 AM Sep 26, 2019 | mahesh |

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಸೆ.17ರಿಂದ ಆರಂಭವಾಗಿದೆ. ಭಾರತಕ್ಕೆ ಈ ಬಾರಿಯ ಅಧಿವೇಶನ ಮಹತ್ವದ್ದಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನ ಮತ್ತು ಭಾರತದ ನಡುವೆ ಜಟಾಪಟಿ ನಡೆಯುತ್ತಿದೆ. ಈ ಬಾರಿ ವಿಶ್ವ ಸಂಸ್ಥೆಯಲ್ಲಿ ಪ್ರಧಾನಿ ಮೋದಿ ಸೆ.27ರಂದು ಭಾಷಣ ಮಾಡಲಿದ್ದಾರೆ. ಅದೇ ದಿನ ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಸಾಮಾನ್ಯ ಅಧಿವೇಶನದಲ್ಲಿ ಮಾತನಾಡಲಿದ್ದಾರೆ. ಇಬ್ಬರೂ ಕಾಶ್ಮೀರ ವಿಚಾರ ಪ್ರಸ್ತಾಪ ಮಾಡುವುದು ಖಚಿತವಾಗಿದೆ. ಕೆಲ ದಿನಗಳ ಹಿಂದಷ್ಟೇ “ಹೌಡಿ ಮೋದಿ’ ಭಾಷಣದಲ್ಲಿ ಪರೋಕ್ಷವಾಗಿ ಪಾಕಿಸ್ಥಾನದ ಮೇಲೆ ಮೋದಿ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿಯವರ ಭಾಷಣದ ಮೇಲಂತೂ ಜಗತ್ತಿನ ಕುತೂಹಲದ ದೃಷ್ಟಿ ಇರಲಿದೆ…

Advertisement

ಏನಿದು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ?
ಭಾರತವೂ ಸೇರಿದಂತೆ ವಿಶ್ವದ 193 ರಾಷ್ಟ್ರಗಳು ವಿಶ್ವಸಂಸ್ಥೆಯನ್ನು 1945ರಲ್ಲಿ ರೂಪಿಸಿದವು. ಎಲ್ಲಾ ರಾಷ್ಟ್ರಗಳ ಪ್ರಾತಿನಿಧಿಕ ಸಂಸ್ಥೆಯಾಗಿ ವಿಶ್ವಸಂಸ್ಥೆ ರಚಿಸಲು ನಿರ್ಧಾರವಾಗಿತ್ತು. ಪ್ರತಿ ವರ್ಷದ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಎಲ್ಲಾ ಸದಸ್ಯ ರಾಷ್ಟ್ರಗಳ ಸರ್ಕಾರಿ ಮುಖ್ಯಸ್ಥರು ಸಭೆ ಸೇರುತ್ತಾರೆ. ವಿಶ್ವಕ್ಕೆ ಸಂಬಂಧಿಸಿದ ಶಾಂತಿ, ಭದ್ರತೆ, ವಿಶ್ವಸಂಸ್ಥೆಗೆ ಹೊಸ ರಾಷ್ಟ್ರಗಳ ಸೇರ್ಪಡೆ ಮತ್ತು ಇತರ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಎಲ್ಲಾ ಅಂಶಗಳನ್ನು ಮಂಡಿಸಿ ಚರ್ಚಿಸಲಾಗುತ್ತದೆ. ನಮ್ಮ ವಿಧಾನಸಭೆ, ಸಂಸತ್‌ನಲ್ಲಿ ಮೂರನೇ ಎರಡರಷ್ಟು ಅಂಶದಷ್ಟು ಮತ ಬಂದಂತೆ ಅಲ್ಲಿಯೂ ಕೂಡ ಯಾವುದೇ ಅಂಶ ಮಂಡನೆಯಾಗಿ ಅನುಮೋದನೆಗೊಳ್ಳಬೇಕಾದರೆ ಅದೇ ಮಾದರಿ ಅನುಸರಿಸಲಾಗುತ್ತದೆ. ಪ್ರಸಕ್ತ ಸಾಲಿನಲ್ಲಿ ಈಕ್ವಡಾರ್‌ನ ವಿದೇಶಾಂಗ ಸಚಿವೆಯಾಗಿದ್ದ ಮಾರಿಯಾ ಫ‌ರ್ನಾಂಡಾ ಎಸ್ಪಿನೋಸಾ ಸಾಮಾನ್ಯ ಸಭೆಯ ಅಧ್ಯಕ್ಷೆ.

ಕನ್ನಡದಲ್ಲಿ ಮಾತನಾಡಿದ್ದ ಅನಂತಕುಮಾರ್‌
ಕೇಂದ್ರದ ಮಾಜಿ ಸಚಿವ ದಿ.ಅನಂತಕುಮಾರ್‌ ವಿಶ್ವಸಂಸ್ಥೆಯ 67ನೇ ಸಾಮಾನ್ಯ ಅಧಿವೇಶನದಲ್ಲಿ , ಅಂದರೆ 2012 ಅ.15ರಂದು ಕನ್ನಡದಲ್ಲಿ ಮಾತನಾಡಿ ದಾಖಲೆ ನಿರ್ಮಿಸಿದ್ದರು.

ಭಾರತ ಮತ್ತು ಸಾಮಾನ್ಯ ಅಧಿವೇಶನ
1947 48ರ ಬಳಿಕ ವಿಶ್ವಸಂಸ್ಥೆಯ ಅಧಿವೇಶನಗಳಲ್ಲಿ ಭಾರತ ಸಕ್ರಿಯವಾಗಿ ಭಾಗವಹಿಸಲು ಆರಂಭಿಸಿತು. ವರ್ಣಬೇಧ ನೀತಿ, ವಸಾಹತುಶಾಹಿ ನೀತಿ ವಿರುದ್ಧ ಧ್ವನಿಯೆತ್ತಲು ಆರಂಭಿಸಿತು.

1953ರಲ್ಲಿ ದೇಶದ ನಾಯಕಿ ವಿಜಯಲಕ್ಷ್ಮೀ ಪಂಡಿತ್‌ ಸಾಮಾನ್ಯ ಸಭೆಯ ಮೊದಲ ಮಹಿಳಾ ಅಧ್ಯಕ್ಷೆಯಾಗಿ ನೇಮಕಗೊಂಡಿದ್ದರು. ಅವರು 8ನೇ ಅಧ್ಯಕ್ಷೆ.

Advertisement

1946ರಲ್ಲಿ ಬೆಲ್ಜಿಯಂನ ಪೌಲ್‌ ಹೆನ್ರಿ ಸ್ಪಾಕ್‌ ಮೊದಲ ಅಧ್ಯಕ್ಷರಾಗಿದ್ದರು.

1942 ಜ.1 “ವಿಶ್ವಸಂಸ್ಥೆ’ ಅಥವಾ “ಯುನೈಟೆಡ್‌ ನೇಷನ್ಸ್‌’ ಎಂಬ ಹೆಸರು ಅಂಗೀಕಾರ

1945 ಅ.24 ಅಧಿಕೃತವಾಗಿ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಇಂಗ್ಲಿಷ್‌ ಅಕ್ಷರ ಮಾಲೆಗೆ ತಕ್ಕಂತೆ ಅಲ್ಲಿ ರಾಷ್ಟ್ರಗಳಿಗೆ ಆಸನ ಒದಗಿಸಲಾಗುತ್ತದೆ.

ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಮುಖರು
ವಿಜಯಲಕ್ಷ್ಮೀ ಪಂಡಿತ್‌, ಜವಾಹರ್‌ಲಾಲ್‌ ನೆಹರೂ, ಬೆನೆಗಲ್‌ ನರಸಿಂಗ ರಾವು, ವಿ.ಕೆ.ಕೃಷ್ಣ ಮೆನನ್‌, ಸರ್ವಪಳ್ಳಿ ರಾಧಾಕೃಷ್ಣನ್‌, ಬೀರೇಂದ್ರ ನಾರಾಯಣ ಚಕ್ರವರ್ತಿ, ಸರ್ದಾರ್‌ ಸ್ವರ್ಣ ಸಿಂಗ್‌, ಇಂದಿರಾ ಗಾಂಧಿ, ದಿನೇಶ್‌ ಸಿಂಗ್‌, ವೈ.ಬಿ.ಚವಾಣ್‌, ಅಟಲ್‌ ಬಿಹಾರಿ ವಾಜಪೇಯಿ, ಎಸ್‌.ಎನ್‌.ಮಿಶ್ರಾ, ಪಿ.ವಿ.ನರಸಿಂಹ ರಾವ್‌, ಆರ್‌.ಮಿರ್ಧಾ, ರಾಜೀವ್‌ ಗಾಂಧಿ, ಕೆ.ನಟವರ್‌ ಸಿಂಗ್‌, ಐ.ಕೆ.ಗುಜ್ರಾಲ್‌, ಪಿ.ವಿ.ನರಸಿಂಹ ರಾವ್‌, ಪ್ರಣಬ್‌ ಮುಖರ್ಜಿ, ಡಾ.ಮನಮೋಹನ್‌ ಸಿಂಗ್‌, ಎಸ್‌.ಎಂ.ಕೃಷ್ಣ, ನರೇಂದ್ರ ಮೋದಿ, ಸುಷ್ಮಾ ಸ್ವರಾಜ್‌

ಆರು ಪ್ರಧಾನ ಅಂಗಗಳು
01 ಸಾಮಾನ್ಯ ಸಭೆ (ಜನರಲ್‌ ಅಸೆಂಬ್ಲಿ)
02 ಭದ್ರತಾ ಮಂಡಳಿ (ಸೆಕ್ಯುರಿಟಿ ಕೌನ್ಸಿಲ್‌)
03 ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ಇಕನಾಮಿಕ್‌ ಆ್ಯಂಡ್‌ ಸೋಶಿಯಲ್‌ ಕೌನ್ಸಿಲ್‌)
04 ಟ್ರಸ್ಟೀಶಿಪ್‌ ಕೌನ್ಸಿಲ್‌
05 ಅಂತಾರಾಷ್ಟ್ರೀಯ ನ್ಯಾಯಾಲಯ (ಇಂಟರ್‌ನ್ಯಾಷಲ್‌ ಕೋರ್ಟ್‌ ಆಫ್ ಜಸ್ಟಿಸ್‌)
06 ಸೆಕ್ರೆಟೇರಿಯಟ್‌
17 ಸೆಪ್ಟೆಂಬರ್‌ 74ನೇ ಸಾಮಾನ್ಯ ಅಧಿವೇಶನ ಶುರು
30 ಸೆಪ್ಟೆಂಬರ್‌ ಸಾಮಾನ್ಯ ಅಧಿವೇಶನ ಮುಕ್ತಾಯ

Advertisement

Udayavani is now on Telegram. Click here to join our channel and stay updated with the latest news.

Next