Advertisement

ಪುರಸಭೆಯ ಸಾಮಾನ್ಯ ಸಭೆ : ಅನುದಾನ: ಕ್ರಿಯಾ ಯೋಜನೆಗೆ ಮಂಜೂರು 

02:53 PM Mar 17, 2017 | Team Udayavani |

ಬಂಟ್ವಾಳ :  ರಾಜ್ಯ ಹಣಕಾಸು ಯೋಜನೆಯ 1.85 ಕೋಟಿ ರೂ. ಅನುದಾನದ 2017-18ನೇ ಸಾಲಿನ ಕ್ರಿಯಾ ಯೋಜನೆಗೆ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿ ನೀಡಲಾಯಿತು. 

Advertisement

ಪುರಸಭಾ ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ  ಅವರ ಅಧ್ಯಕ್ಷತೆಯಲ್ಲಿ  ಪುರಸಭೆಯ ಸಾಮಾನ್ಯ ಸಭೆ ಮಾ. 16ರಂದು  ನಡೆಯಿತು.ಕ್ರಿಯಾ ಯೋಜನೆಯಲ್ಲಿ ಪರಿಶಿಷ್ಟ ಜಾತಿ,   ಪಂಗಡ, ಹಿಂದುಳಿದ ವರ್ಗ, ಅಂಗವಿಕಲರಿಗೆ ಸೌಲಭ್ಯ ಕಲ್ಪಿಸುವ ಕಾರ್ಯಕ್ರಮ ಅನುಷ್ಠಾನಕ್ಕೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ನಡೆಸಲಾಯಿತು.

ಕಸ ವಿಲೇವಾರಿ: ಸದಸ್ಯರಿಂದ ಟೀಕೆ ಪರಿಶಿಷ್ಟ  ಜಾತಿ, ಪ. ಪಂಗಡ ಮೂಲ  ಸೌಕರ್ಯಗಳ ವಿಶೇಷ ಅನುದಾನ 2 ಕೋ.ರೂ. ಕ್ರಿಯಾ ಯೋಜನೆಯನ್ನು ಪ್ರತ್ಯೇಕ ಮಂಡಿಸಿದ್ದು 77ಲಕ್ಷ ರೂ. ಪ.ಜಾತಿ ಮನೆಗಳ ರಚನೆ, ಇತರ ಸೌಲಭ್ಯಗಳ ಬಗ್ಗೆ  ಅಭಿಪ್ರಾಯ ಕ್ರೋಢೀಕರಿಸಲಾಯಿತು. ಕಸ ವಿಲೇವಾರಿ ಬಗ್ಗೆ ಸದಸ್ಯರಿಂದ ಟೀಕೆ ವ್ಯಕ್ತವಾಗಿದ್ದು, ಸಾಕಷ್ಟು ಸಂಖ್ಯೆಯ ಸಿಬಂದಿಯನ್ನು ನೇಮಿಸಿ ಕಸ ವಿಲೇವಾರಿಗೆ ಸೂಕ್ತ ಕ್ರಮ  ಕೈಗೊಳ್ಳಬೇಕು   ಎಂದು ಸಭೆಯಲ್ಲಿ ಆಗ್ರಹ ಕೇಳಿ ಬಂತು. 

ನೀರು ಪೋಲು: ಮಂಡಳಿಯೇ ನಿರ್ವಹಣೆ 
ಕೆಯುಡಬ್ಲ್ಯುಎಸ್‌ ಯೋಜನೆಯ ಕಾಮಗಾರಿ ಅನುಷ್ಠಾನ ಸಂದರ್ಭ ಹಲವಾರು ಸಮಸ್ಯೆಗಳು ಉಂಟಾಗಿದ್ದು ಅದನ್ನು ನಿವಾರಿಸುವಂತೆ ಸಭೆಯಲ್ಲಿ ಸಂಬಂಧಪಟ್ಟ  ಎಂಜಿನಿಯರ್‌ ಅವರಲ್ಲಿ ಸದಸ್ಯರು ಆಗ್ರಹಿಸಿದರು. ಒಳಚರಂಡಿ ಮಂಡಳಿಯ ಕಾಮಗಾರಿ ಸಂದರ್ಭ ಪೈಪ್‌ ಒಡೆದು ನೀರು ಪೋಲಾದ ಸಮಸ್ಯೆಯನ್ನು ಮಂಡಳಿಯೇ ನಿರ್ವಹಿಸುವುದಾಗಿ ಇದೇ ಸಂದರ್ಭ ಎಂಜಿನಿಯರ್‌  ಅವರು ಒಪ್ಪಿಗೆ ಸೂಚಿಸಿದರು.ರಸ್ತೆ ಹಾಳಾಗಿರುವ ಕಡೆಗಳಲ್ಲಿ ಅದನ್ನು ಕೂಡ  ಮುಂದಿನ ನಾಲ್ಕು ದಿನಗಳಲ್ಲಿ ರಿಪೇರಿ ಕೆಲಸ ಮಾಡಿಸುವುದಾಗಿ  ತಿಳಿಸಿದರು. 

ಕುಡಿಯುವ ನೀರಿನ ಸರಬರಾಜು ಕೆಯುಡಬು ಎಸ್‌ ಯೋಜನೆಯ ಪ್ರಥಮ ಹಂತದ ಕೆಲಸ ಮಾ. 31ಕ್ಕೆ ಮುಕ್ತಾಯವಾಗುತ್ತಿದ್ದು ಪರಿಶೀಲನೆ ಕೆಲಸವನ್ನು ಮುಗಿಸಿ ಹಸ್ತಾಂತರ ಕ್ರಮ ಕೈಗೊಳ್ಳುವುದಾಗಿ  ಮಾಹಿತಿ ನೀಡಿದರು.

Advertisement

ಕಸಾಪ ಸಮ್ಮೇಳನಕ್ಕೆ ಅನುದಾನ 
ಸಿದ್ದಕಟ್ಟೆಯಲ್ಲಿ ನಡೆಯುವ ಬಂಟ್ವಾಳ ತಾ|  ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 5,000 ರೂ.  ಅನುದಾನ ಮಂಜೂರಾತಿ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರಾದ ವಾಸು ಪೂಜಾರಿ, ಪ್ರವೀಣ್‌ ಬಿ., ಗಂಗಾಧರ, ವಸಂತಿ ಚಂದಪ್ಪ, ಚಂಚಲಾಕ್ಷಿ, ಸಂಜೀವಿ, ದೇವದಾಸ ಶೆಟ್ಟಿ,  ಭಾಸ್ಕರ ಟೈಲರ್‌, ಸುಗುಣಾ ಕಿಣಿ, ಮಹಮ್ಮದ್‌ ಶರೀಫ್‌, ಯಾಸ್ಮಿನ್‌, ಬಿ. ಮೋಹನ್‌, ಸದಾಶಿವ ಬಂಗೇರ, ಸಂಧ್ಯಾ,  ಜಗದೀಶ ಕುಂದರ್‌,  ಪ್ರಭಾ ಆರ್‌. ಸಾಲ್ಯಾನ್‌, ಜಸಿಂತಾ ಡಿ’ಸೋಜಾ, ಮುನಿಶ್‌ ಅಲಿ, ಮಹಮ್ಮದ್‌ ಇಕ್ಬಾಲ್‌, ಮಮ್ತಾಜ್‌ ಮತ್ತು ನಾಮನಿರ್ದೇಶನ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಎಂ.ಎಚ್‌. ಸುಧಾಕರ ಸ್ವಾಗತಿಸಿ ಪ್ರಸ್ತಾವನೆ ನೀಡಿದರು.

ತ್ಯಾಜ್ಯನೀರು ತಡೆಗಟ್ಟಿಲ್ಲ
ಘನ ತ್ಯಾಜ್ಯ ವಿಲೇವಾರಿ ಕುರಿತ ಪಟ್ಟಿ  ಪುರಸಭೆಗೆ ಬಂದ ಪಟ್ಟಿಯೇ ಬೇರೆ, ಕೆಲಸ ಮಾಡಿದವರೇ ಬೇರೆ. ಕಾರ್ಮಿಕರಿಗೆ ಪಿಎಫ್, ಇಎಫ್‌ ಇಲ್ಲ.  ಟೆಂಡರ್‌ನಲ್ಲಿ 2.40 ಲ.ರೂ. ಹೆಚ್ಚುವರಿ ಪಾವತಿಯಾಗಿದ್ದು,  5 ಲ.ರೂ.ನ ಸ್ಪಷ್ಟನೆ ನೀಡಿ. ಹಣ ಎಲ್ಲಿಗೆ ಹೋಗಿದೆ ? ತೋಡಿನ ತ್ಯಾಜ್ಯನೀರು ನದಿಯನ್ನು ಸೇರುತ್ತಿದೆ. ಇದನ್ನು ತಡೆಗಟ್ಟಲು ಕಳೆದ ಸಭೆಯಲ್ಲಿ ಕೇಳಿತ್ತು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ .
– ದೇವದಾಸ ಶೆಟ್ಟಿ

ಸಾಮಾನ್ಯ ಸಭೆಯ ಮೊದಲು  ಏಳು  ದಿನದೊಳಗೆ ಸದಸ್ಯರಿಗೆ ನೋಟಿಸ್‌  ನೀಡಬೇಕು. ನಿರ್ದಿಷ್ಟ ಸಮಯದೊಳಗೆ  ಇದು ಬಂದಿಲ್ಲ. ಸಭೆಗೆ ಗೈರಾದ ಎ. ಗೋವಿಂದ ಪ್ರಭುಗಳು   ಆಕ್ಷೇಪಣೆ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next