Advertisement
ಜ. 26ರಂದು ಉದ್ಘಾಟನ ಕಾರ್ಯಕ್ರಮದ ಬಳಿಕ ಜರಗಿದ ಯಕ್ಷಗಾನ ಕೇಂದ್ರಿತ ಒಂದು ಭಿನ್ನ, ಅಪರೂಪದ ಯಕ್ಷಕಾವ್ಯ ರಚನೆ, ಯಕ್ಷಗಾಯನ ಮತ್ತು ಚಿತ್ರಣ ಕಾರ್ಯಕ್ರಮದ ಮೂಲಕ ಹಲವು ರೀತಿಯ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಸ್ಥಳದಲ್ಲೇ ಯಕ್ಷಕಾವ್ಯ ರಚಿಸಿ, ಅದನ್ನು ಹಾಡಿಸಿ, ಅದಕ್ಕೆ ಸೂಕ್ತವಾದ ಚಿತ್ರವನ್ನು ರಚಿಸುವ ಒಂದು ಭಿನ್ನ ಕಾರ್ಯಕ್ರಮವಿದು. ಕವಿಗೋಷ್ಠಿಗಳಲ್ಲಿ ಕಂಡು ಬರುತ್ತಿದ್ದ ಇಂಥ ಕಾರ್ಯಕ್ರಮದ ಪ್ರಯೋಗವನ್ನು ಇಲ್ಲಿ ಯಕ್ಷಗಾನಕ್ಕೂ ವಿಸ್ತರಿಸಲಾಗಿರುವುದು ಮತ್ತು ಅದರಲ್ಲಿ ಸಾಹಿತಿಗೆ ಹೊಸ ರೀತಿಯ ಅವಕಾಶ ನೀಡಿರುವುದು ಹೊಸತನವೇ. ಸ್ಥಳದಲ್ಲೇ ಕಾವ್ಯ ರಚನೆ ಮಾಡುವುದು ಕಡಿಮೆ ಹಾಗೂ ಬರಹಗಾರರ ಪ್ರೌಢಿಮೆಯನ್ನು ಸಾಬೀತು ಮಾಡಲು ವೇದಿಕೆ ಸಿಗುವುದು ಅಪರೂಪ. ಆದರೆ ಈ ಕಾರ್ಯಕ್ರಮದಲ್ಲಿ ಅವಧಾನಿ ವಿದ್ವಾನ್ ಮಹೇಶ್ ಭಟ್ ಹಾರ್ಯಾಡಿ ಮತ್ತು ಅವಧಾನಿ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ಸ್ಥಳದಲ್ಲೇ ಯಕ್ಷಕಾವ್ಯ ರಚಿಸಿ ಗಮನ ಸೆಳೆದರು. ತಾವು ರಚಿಸಿದ ಹಾಡುಗಳನ್ನು ಓದಿ ಅದರ ಅರ್ಥ ವಿವರಣೆಯನ್ನೂ ಅವರು ನೀಡಿದರು.
Related Articles
ಅದೇ ದಿನ ರಾತ್ರಿ ಸಿರಿಕಲಾ ಮೇಳ ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ ಚಕ್ರಚಂಡಿಕಾ ಪ್ರಸಂಗದ ಯಕ್ಷಗಾನ ಪ್ರದರ್ಶನವಿತ್ತು. ಪ್ರಸನ್ನ ಭಟ್ ಭಾಗವತಿಕೆಯಲ್ಲಿ ಮುಮ್ಮೇಳದಲ್ಲಿ ಮಹಿಳಾ ಕಲಾವಿದರೇ ಕರಾವಳಿಯ ಗಂಡುಕಲೆಗೆ ಜೀವ ತುಂಬಿದ್ದು ವಿಶೇಷವಾಗಿತ್ತು.27ರಂದು ಮಧ್ಯಾಹ್ನ ಸತ್ಯನಾರಾಯಣ ಪುಣಿಚಿತ್ತಾಯ ಭಾಗವತಿಕೆಯಲ್ಲಿ ಮೂಡಿ ಬಂದ ವಾಮನ ಚರಿತ್ರೆ ತಾಳಮದ್ದಳೆಯು ಖ್ಯಾತ ನಾಮರ ವಿದ್ವತ್‌ಪೂರ್ಣ ಅರ್ಥಗಾರಿಕೆಯಲ್ಲಿ ಖುಷಿ ಕೊಟ್ಟಿತು.
Advertisement
ವಾಮನನಾಗಿ ಪವನ್ ಕಿರಣ್‌ಕೆರೆ, ಬಲಿಯಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತು ಶುಕ್ರಾಚಾರ್ಯನಾಗಿ ಡಾ| ಎಂ. ಪ್ರಭಾಕರ ಜೋಷಿ ಅವರು ಮಾತಿನ ತೋರಣ ಕಟ್ಟಿದರು. ದಾನ, ದಾನಿ, ಅರಸ, ಆಸೆ, ಯಜ್ಞದೀಕ್ಷೆ ಮುಂತಾದವುಗಳಿಗೆಲ್ಲ ಹೊಸ ಹೊಸ ವ್ಯಾಖ್ಯಾನ, ವಿಶ್ಲೇಷಣೆಗಳು ಇಲ್ಲಿಂದ ಲಭ್ಯವಾದವು. ಜೋಷಿ ಮತ್ತು ಸುಣ್ಣಂಬಳ ನಡುವಿನ ಮಾತುಗಾರಿಕೆ ಮತ್ತೂ ಕೇಳಬೇಕೆನಿಸಿತು. ಪವನ್ ಅವರ ಅರ್ಥಗರ್ಭಿತ ತೂಕದ ಮಾತುಗಳು ಕಿವಿಗೆ ಮುದ ನೀಡಿದವು, ಮನಸ್ಸನ್ನು ಅರಳಿಸಿದವು.
ಆ ಬಳಿಕ ಹಿರಿಯ ಕಲಾವಿದರಾದ ಡಾ| ಎಂ. ಪ್ರಭಾಕರ ಜೋಷಿ ಮತ್ತು ಕುಂಬ್ಳೆ ಸುಂದರ ರಾವ್ ಅವರಿಗೆ ಸಮ್ಮಾನ ಜರಗಿತು.ಬಳಿಕ ಸತ್ಯನಾರಾಯಣ ಪುಣಿಚಿತ್ತಾಯ ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಅವರಿಂದ ಸ್ಪರ್ಧಾತ್ಮಕ ರೀತಿಯಲ್ಲಿ ಸಾಗಿದ ಯಕ್ಷಗಾಯನ ಜುಗಲ್‌ಬಂದಿ , ಆ ಬಳಿಕ ಪ್ರಫುಲ್ಲಚಂದ್ರ ಹಾಡುಗಾರಿಕೆಯಲ್ಲಿ ವಿಭೀಷಣ ನೀತಿ ತಾಳಮದ್ದಳೆ ಜರಗಿತು.
ಸಮಾರೋಪದ ದಿನವಾದ ರವಿವಾರ ಬೆಳಗ್ಗೆ ಮಂಗಳೂರು, ಉಡುಪಿ – ಕುಂದಾಪುರದ ಖ್ಯಾತನಾಮರಿಂದ ಜರಗಿದ ಹಾಸ್ಯ ರಸಮಂಜರಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಮಧ್ಯಾಹ್ನ ಸಾಲಿಗ್ರಾಮ ಮೇಳದವರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕುಶ-ಲವ ಕಾಳಗ ಮತ್ತು ರಾತ್ರಿ ಚಂದ್ರಾವಳಿ ವಿಲಾಸ ಯಕ್ಷಗಾನವೂ ಜರಗಿತು. ಈ ಸಂದರ್ಭದಲ್ಲಿ ಹಲವು ಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಮತ್ತು ಸಾಲಿಗ್ರಾಮ ಮೇಳದ ಖ್ಯಾತ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ ಶೆಟ್ಟಿ ಅವರಿಗೆ ಸಮ್ಮಾನವೂ ನೆರವೇರಿತು.
ಬೇರೆ ಬೇರೆ ರೀತಿಯ ಯಕ್ಷಪ್ರಕಾರವನ್ನು ವೇದಿಕೆಯಲ್ಲಿ ನೀಡಲಾಗಿರುವುದು ಮತ್ತು ಮೂರೂ ದಿನಗಳ ಕಾರ್ಯಕ್ರಮಗಳಲ್ಲಿ ಸಿಂಹಪಾಲು ಯಕ್ಷಗಾನಕ್ಕೇ ಮೀಸಲಿದ್ದುದು ವಿಶೇಷ. ಯಕ್ಷಗಾನದ ಹಾಡು ರಚಿಸುವುದು ಸುಲಭವೇನಲ್ಲ. ಅಂಥ ಸವಾಲಿನ ಕೆಲಸವನ್ನೂ ವಿದ್ವಾಂಸರಿಗೆ ವೇದಿಕೆಯಲ್ಲೇ ಆಶುಕಾವ್ಯ ರಚಿಸಲು ಹೇಳುವುದು ಸೇರರಿ ಈ ಕಾರ್ಯಕ್ರಮ ಹಲವು ಕಾರಣಗಳಿಂದಾಗಿ ಗಮನ ಸೆಳೆದಿದೆ, ಶ್ಲಾಘನೆಗೆ ಪಾತ್ರವಾಗಿದೆ.
ಪುತ್ತಿಗೆ ಪದ್ಮನಾಭ ರೈ