ಬೆಂಗಳೂರು: ಇತ್ತೀಚೆಗೆ ಹುಕ್ಕಾ ಉತ್ಪನ್ನಗಳ ಮಾರಾಟ, ಸಂಗ್ರಹ ಹಾಗೂ ಜಾಹೀರಾತಿಗೆ ರಾಜ್ಯ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಗರದಲ್ಲಿ ಅಕ್ರಮ ಹುಕ್ಕಾ ಉತ್ಪನ್ನಗಳ ಮಾರಾಟಗಾರರು ಹಾಗೂ ವಿತರಕರ ಮೇಲೆ ದಾಳಿ ನಡೆಸಿ 1.5 ಕೋಟಿ ರೂ. ಮೌಲ್ಯದ ತಂಬಾಕು/ನಿಕೋಟಿನ್ ಉತ್ಪನ್ನಗಳನ್ನು ಜಪ್ತಿ ಮಾಡಿದೆ. ಹಾಗೆಯೇ 9 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಮೈಸೂರು ಮೂಲದ ಮುರಳೀಧರ್(59), ಇ. ಆಂಥೋಣಿ(59),ಬೆಂಗಳೂರಿನ ಎಸ್.ಆರ್.ನಗರ ನಿವಾಸಿ ವಿಶ್ವನಾಥ್ ಪ್ರತಾಪ್ ಸಿಂಗ್ (26), ಭರತ್(29), ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕಂಡಿಬೇಡಳ ಮಧು (36), ಹರಿಕೃಷ್ಣ(35), ಚಿರಕೂರಿ ರಮೇಶ್(30), ದಿವಾಕರ್ ಚೌಧರಿ(30), ಮಹದೇವಪುರ ಮಧು (38) ಬಂಧಿತರು. ಆರೋಪಿಗಳಿಂದ 1.45 ಕೋಟಿ ರೂ. ಮೌಲ್ಯದ ತಂಬಾಕು/ನಿಕೋಟಿನ್ ಉತ್ಪನನಗಳು, 11 ಮೊಬೈಲ್‌ಗಳು, 1,10 ಲಕ್ಷ ರೂ. ನಗದು, ಒಂದು ಟಾಟಾ ಏಸ್ ಗೂಡ್ಸ್ ವಾಹನ, ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಮೊದಲ ನಾಲ್ವರು ಆರೋಪಿಗಳ ವಿರುದ್ಧ ಚಾಮರಾಜಪೇಟೆ ಠಾಣೆ, ಇತರೆ ನಾಲ್ವರ ವಿರುದ್ಧ ರಾಮಮೂರ್ತಿನಗರ ಠಾಣೆ ಮತ್ತು ಒಬ್ಬನ ವಿರುದ್ಧ ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತರು ಹೇಳಿದರು.
ಬೆಳ್ಳಿ, ಚಿನ್ನದ ನಾಣ್ಯ ಉಡುಗೊರೆ: ಆರೋಪಿ ಮುರಳೀಧರ್ ಅಥವಾ ಇತರೆ ಆರೋಪಿಗಳಿಂದ ಹತ್ತಾರು ಹುಕ್ಕಾ ಉತ್ಪನ್ನಗಳನ್ನು ಖರೀದಿಸಿದರೆ, ಉಡುಗೊರೆಯಾಗಿ ಚಿನ್ನ ಮತ್ತು ಬೆಳ್ಳಿಯ ನಾಣ್ಯ ಗಳನ್ನು ಉಡುಗೊರೆಯಾಗಿ ಕೊಡಲಾಗುತ್ತಿತ್ತು. ಜತೆಗೆ ಕೂಪನ್ ಕೂಡ ಕೊಟ್ಟು, ಅದನ್ನು ಸಾðಚ್ ಮಾಡಿದಾಗ ಅದರಲ್ಲಿರುವ ಗಿಫ್ಟ್ಗಳನ್ನು ವ್ಯಾಪಾರಸ್ಥರಿಗೆ ಕೊಡಲಾಗುತ್ತಿತ್ತು. ಈ ಮೂಲಕ ಹುಕ್ಕಾ ಉತ್ಪನ್ನಗಳ ಮಾರ್ಕೆಟಿಂಗ್ ಮಾಡುತ್ತಿದ್ದರು. ಪ್ರಕರಣದಲ್ಲಿ ಇತರೆ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ದುಬೈ ಮೂಲದ ಉತ್ಪನ್ನ, ಮಾಸಿಕ 25 ಕೋಟಿ ರೂ. ವಹಿವಾಟು! :
ಆರೋಪಿಗಳ ಪೈಕಿ ಮೈಸೂರು ಮೂಲದ ಮುರಳೀಧರ್ ಚಾಮರಾಜಪೇಟೆಯಲ್ಲಿ ಹುಕ್ಕಾ ಉತ್ಪನ್ನಗಳ ಮಾರಾಟ ಮಳಿಗೆ ಹೊಂದಿದ್ದು, ಬೆಂಗಳೂರಿಗೆ ಪ್ರಮುಖ ವಿತರಕನಾಗಿದ್ದಾನೆ. ಇತರೆ ಆರೋಪಿಗಳು ಉಪ ವಿತರಕರಾಗಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನಿಷೇಧ ಇರುವ ಹುಕ್ಕಾ ಉತ್ಪನ್ನಗಳನ್ನು ಆರೋಪಿ ಮುರಳೀಧರ್, ದುಬೈನಿಂದ ತರಿಸುತ್ತಿದ್ದ. ಪ್ರಮುಖವಾಗಿ ಅಫjಲ್ ಎಂಬ ಹೆಸರಿನ ಮೊಲಾಸಿನ್ ಮತ್ತು ತಂಬಾಕು ಉತ್ಪನ್ನ ಇರುವ ದಿಲ್‌ಬಾಗ್, ಜೆಡ್ ಎಲ್-01, ಆಕ್ಷನ್-7, ಬಾದ್ ಷಾ, ಮಹಾರಾಯಲ್ 717ಹಾಗೂ ಇತರೆ ಉತ್ಪನ್ನಗಳ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದ. ಈ ವ್ಯವಹಾರದಲ್ಲೇ ಪ್ರತಿ ತಿಂಗಳು 25 ಕೋಟಿ ರೂ. ವಹಿವಾಟು ನಡೆಸುತ್ತಿದ್ದ. ಈ ಮಾಹಿತಿ ಮೇರೆಗೆ ಫೆ.9ರಂದು ಆರೋಪಿಗಳ ಗೋಡೌನ್‌ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.