Advertisement

ನಾವು ಮರೆತ ಆಟ: ಚಿನ್ನಿ ದಾಂಡು

05:01 AM Jun 16, 2020 | Lakshmi GovindaRaj |

ಒಂದು ರುಪಾಯಿಯ ಖರ್ಚೂ ಆಗದಿದ್ದ, ಟೈಮ್‌ಪಾಸ್‌ ಮತ್ತು ಮನರಂಜನೆಯ ಆಟವೆಂದರೆ ಬಹುಶಃ ಇದೇ ಇರಬೇಕು…

Advertisement

ಚಿಕ್ಕಂದಿನಲ್ಲಿ ಎಲ್ಲಾ ಗಂಡು ಮಕ್ಕಳೂ ಆಡುತ್ತಿದ್ದ ಆಟಗಳಲ್ಲಿ ಚಿನ್ನಿ ದಾಂಡು ಆಟಕ್ಕೆ ಅಗ್ರಸ್ಥಾನ. ಇದನ್ನು ಗಿಲ್ಲಿ ದಾಂಡು/ ಚಿನ್ನಿ ಕೋಲು ಎಂದೂ ಕರೆಯುವುದುಂಟು. ಗ್ರಾಮೀಣ ಭಾಗದ ಮಕ್ಕಳು ಈ ಆಟ ಆಡದೇ ಇರಲು ಸಾಧ್ಯವೇ  ಇಲ್ಲ ಎನ್ನುವಷ್ಟರಮಟ್ಟಿಗೆ, ಇದು ಹಳ್ಳಿಗಳಲ್ಲಿ ಜನಪ್ರಿಯ ಆಗಿತ್ತು. ಎಷ್ಟೋ ಹಳ್ಳಿಗಳಲ್ಲಿ, ಹುಡುಗಿಯರು ಕೂಡ, ಹುಡುಗರಿಗೆ ಸರಿಸಮನಾಗಿ ಈ ಆಟ ಆಡುತ್ತಿದ್ದರು. ಆದರೀಗ, ಕ್ರಿಕೆಟ್‌ನ ಮೋಹ ಹಳ್ಳಿಗಳನ್ನೂ ಆವರಿಸಿಕೊಂಡಿರುವ ಕಾರಣದಿಂದ, ಹಳ್ಳಿಗಳಲ್ಲಿ ಚಿನ್ನಿ ದಾಂಡು ಆಟ ಮರೆಯಾಗುತ್ತಿದೆ.

ಅರ್ಧ ಅಡಿ ಉದ್ದದ, ಎರಡೂ ತುದಿಗಳು ಚೂಪಾಗಿರುವ ಒಂದು ಗಟ್ಟಿಯಾದ ಕೋಲಿನ ತುಂಡು (ಇದೇ ಚಿನ್ನಿ ಅಥವಾ ಗಿಲ್ಲಿ), ಇದರ ಮೂರು ಪಟ್ಟು ಉದ್ದವಿರುವ  ರೂಲರ್‌ ಆಕಾರದ ಇನ್ನೊಂದು ಗಟ್ಟಿಯಾದ ಕೋಲು (ಇದೇ ದಾಂಡು)- ಈ ಆಟಕ್ಕೆ ಅಗತ್ಯವಿರುವ ಸಲಕರಣೆಗಳು ಇಷ್ಟೇ. ಊರ ಹೊರಗಿನ/ ಶಾಲೆಯ ಮೈದಾನ ಅಥವಾ ಮನೆಯ ಎದುರಿನ ವಿಶಾಲ ಅಂಗಳದಲ್ಲಿ ಈ ಆಟ  ಆಡಲಾಗುತ್ತಿತ್ತು. ಇಬ್ಬರಿದ್ದರೂ ಆಡಬಹುದು. 8-10 ಜನರ ತಂಡವಿದ್ದರೆ, ಆಗ ಎರಡು ಟೀಮ್‌ ಮಾಡಿಕೊಂಡು ಆಡಬಹುದು. ಇದು, ಚಿನ್ನಿ ದಾಂಡು ಆಟದ ವಿಶೇಷ.

ಮೊದಲು, ಗಿಲ್ಲಿ ಇಡಬೇಕಾದ ಜಾಗವನ್ನು ಮಾರ್ಕ್‌ ಮಾಡುವುದು. ನಂತರ ಯಾರು ಮೊದಲು ಆಡುವುದೆಂದು ನಿರ್ಧರಿಸುವುದು, ಆಮೇಲೆ, ನೆಲದ ಮೇಲೆ ಗಿಲ್ಲಿ ಇಟ್ಟು, ಚೂಪಾಗಿರುವ ಅದರ ತುದಿಗೆ ದಾಂಡಿನಿಂದ ಹೊಡೆಯಬೇಕು. ಗಿಲ್ಲಿ  ಮೇಲೆ ಚಿಮ್ಮಿದ ತಕ್ಷಣ, ಅದನ್ನು ದೂರ ಹೋಗುವಂತೆ ಹೊಡೆಯಬೇಕು. ಮೇಲೆ  ಚಿಮ್ಮಿದಾಗೆಲ್ಲಾ ದಾಂಡಿನ ಹೊಡೆತಕ್ಕೆ ಚಿನ್ನಿ ಸಿಗುವುದಿಲ್ಲ. ಇಲ್ಲಿ ಮೂರು ಬಾರಿ ಮಾತ್ರ ದಾಂಡು ಬೀಸಲು ಅವಕಾಶ ಇರುತ್ತದೆ. ಮೂರು ಬಾರಿಯೂ ಚಿನ್ನಿ ಹೊಡೆತಕ್ಕೆ ಸಿಗಲಿಲ್ಲ ಅಂದರೆ, ಆಟಗಾರನ ಪಾಳಿ  ಮುಗಿದಂತೆ.

ಇದು ಚಿನ್ನಿ ದಾಂಡು ಆಟದ ಸ್ವರೂಪ. ಹೀಗೆ ಹೊಡೆದಾಗ, ಚಿನ್ನಿಯನ್ನು ನೆಲಕ್ಕೆ ಬೀಳುವ ಮೊದಲೇ ಎದುರಾಳಿ  ತಂಡದವರು ಕ್ಯಾಚ್‌ ಹಿಡಿದರೆ,  ದಾಂಡು ಹಿಡಿದಿದ್ದವ ಔಟ್‌ ಎಂದು ಅರ್ಥ. ಒಂದು ವೇಳೆ ಕ್ಯಾಚ್‌ ಹಿಡಿಯಲು ಆಗದಿದ್ದರೆ,  ಚಿನ್ನಿಯನ್ನು ಬಿದ್ದ ಸ್ಥಳದಿಂದ ದಾಂಡು ಹಿಡಿದ ಆಟಗಾರ ಇರುವ ಕಡೆಗೆ ಎಸೆಯಬೇಕು. ಆಗೇನಾದರೂ ಆ ಚಿನ್ನಿ ಮೊದಲೇ ಮಾರ್ಕ್‌ ಮಾಡಿದ್ದ ಸ್ಥಳಕ್ಕೇ ಹೋಗಿ ಬಿದ್ದರೆ, ಆಗಲೂ ಆಟಗಾರ ಔಟ್‌ ಎಂದೇ  ಅರ್ಥ. ಆ ಚಿನ್ನಿ ತನ್ನೆಡೆಗೆ ಹಾರಿ ಬರುವಾಗಲೇ, ಅದನ್ನು ದಾಂಡಿನ   ನೆರವಿನಿಂದ ತಡೆಯಲು ಆಟಗಾರ ಪ್ರಯತ್ನಿಸುತ್ತಾನೆ.

Advertisement

ಹೀಗೆ ಮುಂದುವರಿಯುತ್ತದೆ ಚಿನ್ನಿ ದಾಂಡು ಆಟ. ಅಲರ್ಟ್‌ ಆಗಿ ನಿಲ್ಲುವುದು, ಗುರಿಯಿಟ್ಟು ಹೊಡೆಯುವುದು, ಓಡುವುದು,  ಜೋರಾಗಿ ಕೈ ಬೀಸುವುದು… ಇದೆಲ್ಲವೂ ಚಿನ್ನಿ ದಾಂಡು ಆಟದಿಂದ ಸಾಧ್ಯವಾಗುತ್ತಿತ್ತು. ಮುಖ್ಯವಾಗಿ, ಮನೆಯ ಎದುರಿನ ಯಾವುದಾದರೂ ಮರದಲ್ಲಿನ ರೂಲರ್‌ ಗಾತ್ರದ ರೆಂಬೆ ಸಿಕ್ಕಿದರೆ ಸಾಕು; ಚಿನ್ನಿ ದಾಂಡು ಆಟಕ್ಕೆ ಅಗತ್ಯವಿದ್ದ  ವಸ್ತುಗಳು ಸಿಕ್ಕಿಬಿಡುತ್ತಿದ್ದವು. ಬಹಳ ಕಡಿಮೆ ಖರ್ಚಿನ, ಅಥವಾ ಒಂದು ರುಪಾಯಿ ಯ ಖರ್ಚೂ ಆಗದಿದ್ದ, ಟೈಮ್‌ ಪಾಸ್‌ ಮತ್ತು ಮನ ರಂಜನೆಯ ಆಟವೆಂದರೆ ಬಹುಶಃ ಇದೇ ಇರಬೇಕು.

Advertisement

Udayavani is now on Telegram. Click here to join our channel and stay updated with the latest news.

Next