Advertisement

ಆಟ, ಪಾಠ, ಊಟ ಎಲ್ಲವೂ ಒಂದೇ ಕೊಠಡಿಯಲ್ಲಿ!

09:31 PM Jul 14, 2019 | Lakshmi GovindaRaj |

ಹುಣಸೂರು: ಗಿರಿಜನರ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕಾಗಿ ವಿವಿಧ ಯೋಜನೆಯಡಿ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದರೂ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಹಾಡಿಗರು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿರುವುದಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೂ ಸೂಕ್ತ ವ್ಯವಸ್ಥೆ ಇಲ್ಲವಾಗಿದೆ. ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿ ಹಾಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಅಧಿಕಾರಿಗಳು ಹಾಗೂ ಜನಪ್ರತಿರ್ನಿಗಳು ಭೇಟಿ ನೀಡಿದರೆ ಯಾವ ರೀತಿ ಸೌಲಭ್ಯ ಕಲ್ಪಿಸಲಾಗಿದೆ ಎಂಬುದು ತಿಳಿಯಲಿದೆ.

Advertisement

ಶಾಲೆಗೆ ಏಕೈಕ ಕೊಠಡಿ: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಹಾಡಿಯಲ್ಲಿರುವ ಶಾಲೆಯಲ್ಲಿ ಏಕೈಕ ಕೊಠಡಿ ಮಾತ್ರ ಇದ್ದು, ಕೊಠಡಿಯ ಅರ್ಧ ಭಾಗ ಮುಖ್ಯಶಿಕ್ಷಕರ ಕಚೇರಿ ಹಾಗೂ ದಾಸ್ತಾನು ಕೊಠಡಿಯನ್ನು ಆವರಿಸಿಕೊಂಡಿದ್ದರೆ, ಉಳಿದರ್ಧ ಭಾಗ ಮತ್ತು ಕೊಠಡಿಯ ಹೊರಗಿನ ಹಜಾರದಲ್ಲಿ 43ಕ್ಕೂ ಹೆಚ್ಚು ಮಕ್ಕಳು ಪಾಠ ಕೇಳುವಂತಹ ಪರಿಸ್ಥಿತಿ ಇದೆ. ಹಜಾರದಲ್ಲಿ ಕುಳಿತ ಮಕ್ಕಳು ಬೀದಿಯಲ್ಲಿ ಹೋಗುವ ದನಕರುಗಳು, ಆಡು-ಕುರಿಗಳನ್ನು ನೋಡಿಕೊಂಡು ಪಾಠ ಕೇಳುವ ಸ್ಥಿತಿ ಇಲ್ಲಿದೆ.

ಈ ಹಾಡಿಯ ಮಂದಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಕಳೆದ 35 ವರ್ಷಗಳ ಹಿಂದೆ ಬಲವಂತವಾಗಿ ಒಕ್ಕಲೆಬ್ಬಿಸಿದಾಗ ಹೊರಬಂದು ರಾಷ್ಟ್ರೀಯ ಉದ್ಯಾನವನದಂಚಿನಲ್ಲೇ ವಾಸವಾಗಿದ್ದು, ಬಹುತೇಕರು ಮಂದಿ ಪ್ರತಿದಿನ ಕೂಲಿಗಾಗಿ ಪಕ್ಕದ ಕೊಡಗು ಜಿಲ್ಲೆಯ ವಿರಾಜಪೇಟೆ, ಗೋಣಿಗದ್ದೆ, ಗೋಣಿಕೊಪ್ಪ, ತಿತಿಮತಿ, ಬಾಳೆಲೆಯತ್ತ ತೆರಳುತ್ತಾರೆ. ಕೈಲಾಗದವರು ಹಾಡಿಯ ಅಕ್ಕಪಕ್ಕದ ಜಮೀನುಗಳಲ್ಲಿ ಕೂಲಿ, ಕುರಿ-ದನಗಾಹಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ವಾರಾಂಡದಲ್ಲಿ ಪಾಠ: ಒಂದರಿಂದ ಐದನೇ ತರಗತಿವರೆಗೆ ಸುಮಾರು 43 ಹಾಡಿಯ ಮಕ್ಕಳು ಪಾಠ ಕೇಳುವುದು, ಪಠ್ಯೇತರ ಚಟುವಟಿಕೆ, ಊಟ ಮಾಡಲು ಇರುವುದು ಒಂದು ಸಣ್ಣ ಕೊಠಡಿ ಮಾತ್ರ. ಒಂದನೇ ತರಗತಿಯಿಂದ 3ನೇ ತರಗತಿಯ ಮಕ್ಕಳು ಕೊಠಡಿಯೊಳಗೆ ಕುಳಿತು ಪಾಠ ಕೇಳಿದರೆ, ಉಳಿದ 4 ಹಾಗೂ 5ನೇ ತರಗತಿಯ ಮಕ್ಕಳಿಗೆ ಶಾಲಾ ಕೊಠಡಿಯ ಹೊರಗಿನ ಹಜಾರ(ವಾರಾಂಡ)ದಲ್ಲಿ ಪಾಠ ಮಾಡಲಾಗುತ್ತಿದೆ.

ಈ ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕರೇ ಬಿಸಿಯೂಟದ ಸಾಂಬಾರ ಪದಾರ್ಥ, ತರಕಾರಿ, ಗ್ಯಾಸ್‌ ಹೊತ್ತು ತರುವ ಜೊತೆಗೆ ಹಾಡಿಯ ಮಕ್ಕಳನ್ನು ಮನೆ-ಮನೆಗೆ ಹೋಗಿ ಕರೆತರುವ ಪರಿಸ್ಥಿತಿ ಇದೆ. ಹೀಗಿದ್ದರೂ ಮಕ್ಕಳಿಗೆ ಶಿಕ್ಷಣ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸುವ ಹೊಣೆ ಹೊತ್ತಿರುವ ಶಿಕ್ಷಣ ಇಲಾಖೆ ಹಾಡಿ ಮಕ್ಕಳಿಗೂ ತಮಗೂ ಸಂಬಂಧವಿಲ್ಲದಂತಿದೆ.

Advertisement

ಶೈಕ್ಷಣಿಕ ಹಿನ್ನಡೆ: ಹಾಡಿಯ ಶಾಲೆಗೆ ದಿನಕ್ಕೆರಡು ಬಾರಿ ಮಾತ್ರ ಬಸ್‌ ಹೋಗುತ್ತಿದ್ದು, ಶಾಲೆಗೆ ಬರುವ ಶಿಕ್ಷಕರು ಈ ಬಸ್‌ಗಳನ್ನೇ ಆಶ್ರಯಿಸಿರುವುದರಿಂದ ಬೆಳಗ್ಗೆ ಬರುವ ವೇಳೆ ಮಕ್ಕಳನ್ನು ಮನೆಯಿಂದ ಕರೆದೊಯ್ಯುತ್ತಾರೆ. ಸಂಜೆ 4 ಆಗುತ್ತಿದ್ದಂತೆ ಮನೆಯತ್ತ ತೆರಳುವ ತರಾತುರಿಯಲ್ಲೇ ಪಾಠ, ಆಟ, ಬಿಸಿಯೂಟ ಎಲ್ಲವೂ ನಡೆಯುವುದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೂ ಹಿನ್ನಡೆಯಾಗುತ್ತಿದೆ. ಕಾಡಂಚಿನ ಭಾಗದ ಹಾಡಿಯ ಶಾಲೆಗಳ ಪ್ರಗತಿ ಪರಿಶೀಲನೆಗೂ ಅಧಿಕಾರಿಗಳು ಇತ್ತ ತಲೆ ಹಾಕುವುದಿಲ್ಲ. ಈ ಶಾಲೆಗೆ ಕನಿಷ್ಠ ಕೊಠಡಿ ನಿರ್ಮಿಸಲು ಕೂಡ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಳಜಿವಹಿಸಿಲ್ಲ.

ಹೊಸಕಟ್ಟಡ ಭರವಸೆ: ಈ ಹಿಂದೆ ನಿರ್ಮಿಸಿದ್ದ ಹೆಂಚಿನ ಎರಡು ಕೊಠಡಿಗಳು ಶಿಥಿಲವಾಗಿದ್ದರಿಂದ ಐದು ವರ್ಷಗಳ ಹಿಂದೆಯೇ ಕೆಡವಿ ಹಾಕಲಾಗಿತ್ತು, ನಂತರದಲ್ಲಿ ಈ ಸ್ಥಳದಲ್ಲಿ ಹೊಸ ಕೊಠಡಿ ನಿರ್ಮಾಣದ ಕನಸಿಗೆ ಗ್ರಹಣ ಹಿಡಿದಂತಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಪ್ರಕಾರ, ಈ ಶಾಲೆಗೆ ಒಂದು ಕೊಠಡಿ ಮಂಜೂರಾಗಿದೆ, ಆದರೆ, ಕಟ್ಟಡ ಮೇಲೇಳ್ಳೋದು ಯಾವಾಗ ಎಂಬ ಪ್ರಶ್ನೆ ಹಾಡಿಯ ಮಂದಿಯದ್ದಾಗಿದೆ. ಇಲ್ಲಿನ ಜನಪ್ರತಿನಿಧಿಗಳಿಗೆ ಹಾಡಿಯ ಸಮಸ್ಯೆ ತಿಳಿದಿದ್ದರೂ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಶಾಲೆಯಲ್ಲಿ ಇತ್ತೀಚೆಗೆ ಅಡುಗೆ ಕೋಣೆ ನಿರ್ಮಿಸಿಕೊಟ್ಟಿರುವುದು ತುಸು ಸಮಾಧಾನಕರ ಸಂಗತಿಯಾಗಿದೆ.

ಆರೋಗ್ಯ ನಿರ್ಲಕ್ಷ್ಯ: ಈ ಹಾಡಿಯ ಬಹುತೇಕ ಮಕ್ಕಳಲ್ಲಿ ಕಜ್ಜಿ ತುರಿಕೆ ಕಾಣಿಸಿಕೊಂಡಿದ್ದು ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಹಾಗೂ ಸಿಬ್ಬಂದಿ ಹಾಡಿಯ ಎಲ್ಲರಿಗೂ ತಪಾಸಣೆ, ಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ, ಆದಿವಾಸಿಗಳ ಆರೋಗ್ಯಕ್ಕೆಂದೇ ಮೀಸಲಿರುವ ಗಿರಿಜನ ಸಂಚಾರ ಆರೋಗ್ಯ ಘಟಕವು ಗಿರಿಜನ ಆರೋಗ್ಯ ಕಾಪಾಡುವಲ್ಲಿ ವಿಫಲವಾಗಿದೆ.

ಕಳೆದ ಐದು ವರ್ಷಗಳಿಂದ ಮಕ್ಕಳು ಶಾಲೆಯ ಹಜಾರದಲ್ಲಿ ಪಾಠ ಕೇಳುವಂತಹ ಪರಿಸ್ಥಿತಿ ಇದೆ. ಮಳೆಗಾಲದಲ್ಲಂತೂ ಮಕ್ಕಳ ಸ್ಥಿತಿ ಹೇಳತೀರದು. ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡುವ ಭರವಸೆಗಳನ್ನು ನಂಬಿಕೊಂಡಿದ್ದೇವೆ. ಆದರೆ, ಈ ಶಾಲೆಯ ಸಮಸ್ಯೆಯನ್ನು ಮಾತ್ರ ಯಾರೊಬ್ಬರೂ ಬಗೆಹರಿಸಲು ಮುಂದಾಗಿಲ್ಲ.
-ಶಾಂತಿ, ಎಸ್‌ಡಿಎಂಸಿ ಅಧ್ಯಕ್ಷ, ಬಿಲ್ಲೇನಹೊಸಹಳ್ಳಿ

ಹನಗೋಡು ಹೋಬಳಿಯ ಬಿಲ್ಲೇನಹೊಸಹಳ್ಳಿ ಹಾಡಿಯಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಶಾಲಾಭಿವೃದ್ಧಿ ಸಮಿತಿ ತಮ್ಮ ಗಮನಕ್ಕೆ ತಂದಿದೆ. ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮವಹಿಸಲಾಗಿದೆ. ಅಲ್ಲೇ ಈ ಶಾಲೆಗೆ ಮತ್ತೂಂದು ಕೊಠಡಿ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿದೆ.
-ಟಿ.ಸಂತೋಷ್‌ ಕುಮಾರ್‌, ಕ್ಷೇತ್ರ ಸಮನ್ವಯಾಧಿಕಾರಿ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next