Advertisement
ಒಂದು ಹಂತದಲ್ಲಿ ತೀರಾ ಕಿರುಕುಳಕ್ಕೊಳಗಾದ ಇಂಗ್ಲೆಂಡ್ ಅಭಿಮಾನಿಯೊಬ್ಬ ಈ ಭಾರತೀಯರ ಬಳಿ ಬಂದು ತಣ್ಣಗೆ ಮನದಟ್ಟು ಮಾಡಿಸಿದ, ಇಂತಹ ಮೂರು ವಿಶ್ವಕಪ್ ಟೂರ್ನಿಗಳು ಒಮ್ಮೆಗೆ ನಡೆದರೆ ತಲಾ 12 ತಂಡಗಳಂತೆ ಒಟ್ಟು 36 ದೇಶಕ್ಕೆ ಅವಕಾಶ ಲಭಿಸುತ್ತದೆ. ಅಂತಹ ಸಂದರ್ಭದಲ್ಲಿ ಕೂಡ ನಿಮ್ಮ ದೇಶ ವಿಶ್ವಕಪ್ ಆಡಲಾಗುವುದಿಲ್ಲ! ಈ ಕತೆಯನ್ನು ಭಾರತದ ಮಾಜಿ ವಿಕೆಟ್ ಕೀಪರ್ ದೀಪ್‌ದಾಸ್ ಗುಪ್ತಾ ಒಂದೆಡೆ ಬರೆಯುತ್ತಾರೆ.
Related Articles
ನಿಜ, ಸೀನಿಯರ್ ತಂಡ ವಿಶ್ವಕಪ್ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆಯನ್ನು ಈವರೆಗೆ ಪಡೆದಿಲ್ಲ. ಈ ವರ್ಷ ವಿಶ್ವಕಪ್ 2018ರ ಅರ್ಹತಾ ಸುತ್ತಿನ ಮೊದಲ ಸುತ್ತಿನ ವಿಜಯದ ನಂತರದ ಸುತ್ತಿನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಏಳು ಪಂದ್ಯದ ಸೋಲನ್ನು ಭಾರತ ಕಾಣಬೇಕಾಯಿತು. ಭಾರತದ ವಿಶ್ವಕಪ್ ಸಾಧನೆಯ ಬಗ್ಗೆ ನಾವು ಕೇಳಿರುವುದು ಬರೀ ತಮಾಷೆಯ ಕಥೆಯೇ.
Advertisement
1950ರಲ್ಲಿ ಭಾರತ ಅದೃಷ್ಟದ ಬಲದಿಂದ ಪ್ರಧಾನ ಸುತ್ತಿಗೆ ಅರ್ಹತೆ ಪಡೆದು ಚರಿತ್ರೆ ಬರೆದಿತ್ತು. ಆ ಸಲ ಭಾರತದ ಎದುರು ಆಡಲಿಳಿಯಬೇಕಿದ್ದ ಮ್ಯಾನ್ಮಾರ್, ಇಂಡೋನೇಷಿಯಾ ಹಾಗೂ ಫಿಲಿಫೈನ್ಸ್ ಟೂರ್ನಿಯಿಂದ ಹಿಂದೆಸರಿದಿದ್ದರಿಂದ ಭಾರತಕ್ಕೆ ಅವಕಾಶ ಗಿಟ್ಟಿತ್ತು. ದುರಂತವೆಂದರೆ, ವಿಶ್ವಕಪ್ ಫೈನಲ್ ಸುತ್ತ ಆಡಲು ಬ್ರೆಜಿಲ್‌ಗೆ ತೆರಳಬೇಕಿದ್ದ ತಂಡ ಆ ಪ್ರವಾಸ ಕೈಗೊಳ್ಳಲು ಕೈಯಲ್ಲಿ ಹಣಬಲ ಇಲ್ಲದ್ದರಿಂದ ಹಿಂದೆಸರಿಯಿತು ಎಂದು ಹೇಳಲಾಯಿತು.
ಆ ಕಾಲದ ಬಡತನದ ಕಾರಣ ಭಾರತ ಬರಿಗಾಲಿನಲ್ಲಿಯೇ ಅಂಕಣಕ್ಕಿಳಿಯುವ ಯೋಚನೆಯಲ್ಲಿತ್ತು. ಫಿಫಾ ಅದನ್ನು ಪ್ರತಿಬಂಧಿಸಿದ್ದರಿಂದ ಭಾರತ ಪಾಲ್ಗೊಳ್ಳುವ ಸಾಹಸ ಮಾಡಲಿಲ್ಲ ಎಂಬ ಉಪಕತೆಯೂ ಗಾಳಿಯಲ್ಲಿತ್ತು. ಹೋಗಲಿ ಬಿಡಿ, ಅವತ್ತು ಭಾರತ ಆಡಿದ್ದರೂ ಅದು ಇತಿಹಾಸದ ಒಂದು ಪುಟವಾಗುತ್ತಿತ್ತೇ ವಿನಃ ಸಾಧನೆಯಾಗುತ್ತಿರಲಿಲ್ಲ. ಹಾಗಂತ ಭಾರತದ ಫುಟಬಾಲ್ ಚರಿತ್ರೆ ನಗಣ್ಯ ಅಲ್ಲ.
1951, 62ರ ಏಷ್ಯನ್ ಗೇಮ್ಸ್ ಚಿನ್ನ, ಎಎಫ್ಸಿ ಏಷ್ಯನ್ ಕಪ್‌ನಲ್ಲಿನ ಮೂರು ಬಾರಿ ಆಡಿ 1964ರಲ್ಲಿ ರನ್ನರ್ ಅಪ್ ಆದದ್ದು, ಎಸ್‌ಎಎಫ್ಪಿಯಲ್ಲಿ ಆರು ಬಾರಿ ಜಯಭೇರಿ ಬಾರಿಸಿದ್ದು ಪುಟ್ಟ ಬೆಳ್ಳಿ ಗೆರೆ. ಪ್ರಸ್ತುತ 107ನೇ ರ್‍ಯಾಂಕಿಂಗ್‌ನಲ್ಲಿರುವ ಭಾರತ ಎವರೆಸ್ಟ್ ಶಿಖರವನ್ನೇ ಹತ್ತಬೇಕಿದೆ.
ಆ ನಿಟ್ಟಿನಲ್ಲಿ ಜೂನಿಯರ್ ವಿಶ್ವಕಪ್ ಮೊದಲ ಹೆಜ್ಜೆ. ಹೀಗೆ ಯೋಚಿಸೋಣ, ಕ್ರಿಕೆಟ್‌ನಲ್ಲಿ ಭಾರತ ಟಾಪ್ ತಂಡಗಳಲ್ಲೊಂದಾದರೂ ವಿದೇಶಗಳಲ್ಲಿ ಇಲಿಮರಿಯೇ ಆಗಿತ್ತು. ಕೇವಲ ವೇಗದ ಪಿಚ್‌ನ ಭಯ ಮಾತ್ರವಲ್ಲ, ಆಸ್ಟ್ರೇಲಿಯಾ, ವೆಸ್ಟ್‌ಇಂಡೀಸ್, ಇಂಗ್ಲೆಂಡ್, ಕೊನೆಗೆ ನ್ಯೂಜಿಲೆಂಡ್ ತಂಡದ ಆಟಗಾರರೂ ಅವರ ನೆಲದಲ್ಲಿ ಕಬ್ಬಿಣದ ಕಡಲೆಯಾಗುತ್ತಿದ್ದರು. ಮಾನಸಿಕವಾಗಿ ಭಾರತ ಕುಗ್ಗುತ್ತಿತ್ತು.
ಇಂಡಿಯನ್ ಪ್ರೀಮಿಯರ್ ಲೀಗ್ ಆ ಮಟ್ಟಿಗೆ ಬರೀ ಹಣ ತರುವ ಗಣಿಯಾಗಲಿಲ್ಲ. ವಿದೇಶಿ ಆಟಗಾರರ ಜೊತೆ ಡ್ರೆಸ್ಸಿಂಗ್ ರೂಮ್ ಶೇರ್ ಮಾಡುವ ಮೂಲಕ ಅವರ ಬಗ್ಗೆ ಇದ್ದ ಅವ್ಯಕ್ತ ಭಯ ಮಾಯವಾಯಿತು. ನಾವು ಯಾರಿಗೇನೂ ಕಡಿಮೆಯಿಲ್ಲ ಎಂಬ ಮನೋಬಲ ಶೇಖರಣೆಯಾಯಿತು. ಫಲಿತಾಂಶ ವಿದೇಶಿ ನೆಲದಲ್ಲಿ ಭಾರತದ ಪ್ರದರ್ಶನ ಉತ್ತಮಗೊಂಡಿದೆ.
ಆತ್ಮವಿಶ್ವಾಸ ಚಿಗುರಿದರೆ ಗೆಲುವು ಸಲೀಸು!ಫುಟ್ಬಾಲ್‌ಗೂ ಇದೇ ಮಾತನ್ನು ಅನ್ವಯಿಸಬೇಕು. ಜೂನಿಯರ್ ವಿಶ್ವಕಪ್‌ನ ಮೊದಲ ಎರಡು ಪಂದ್ಯದಲ್ಲಿ ಭಾರತ ತಂಡ ಅಮೆರಿಕಾ, ಕೊಲಂಬಿಯಾಗಳಿಗೆ ಸೋತಿರಬಹುದು. ಆತಿಥೇಯರೆಂಬ ಏಕೈಕ ಕಾರಣಕ್ಕೆ ಆಡುವ ಅವಕಾಶ ಪಡೆದ ಭಾರತ ಹೀನಾಯವಾಗೇನೂ ಪರಾಭವಗೊಳ್ಳಲಿಲ್ಲ. ಅದು ನಡೆಸಿದ ಹೋರಾಟ ಗಮನ ಸೆಳೆದಿದೆ. ಒಂದಿಷ್ಟು ಅದೃಷ್ಟ ಜೊತೆಗೂಡಿದ್ದರೆ ಪ್ರಬಲ ಕೊಲಂಬಿಯಾ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಕೂಡ ಶಕ್ತವಾಗಬಹುದಿತ್ತು. ಪ್ರತಿಷ್ಠಿತ ಸ್ಪರ್ಧೆಯ ಭಾಗ ಆಗುವುದರ ಲಾಭವನ್ನು ಸೀನಿಯರ್ ತಂಡದ ನಾಯಕ ಸುನಿಲ್ ಚೆಟ್ರಿ ಕೂಡ ತಕ್ಕಡಿಗೆ ಹಾಕುತ್ತಾರೆ. ಭಾರತ ಕಂಡ ಅತ್ಯುತ್ತಮ ಆಟಗಾರ ಬೈಚಿಂಗ್ ಭುಟಿಯಾರ ಪ್ರಕಾರ, ಇಂತಹ ಸ್ಪರ್ಧೆಗಳು ವಿಶ್ವಮಟ್ಟದ ಸ್ಪರ್ಧೆಯ ದರ್ಜೆಯನ್ನು ಅರ್ಥಮಾಡಿಸುತ್ತವೆ. ಇಂಥವರ ಜೊತೆಗಿನ ಸೆಣಸಾಟದ ಒಂದೊಂದು ನಡೆ, ಗೋಲ್ ಕೊಡುವ ಆತ್ಮವಿಶ್ವಾಸ ನಮ್ಮನ್ನು ಇನ್ನಷ್ಟು ಬೆಳೆಸುತ್ತದೆ. ವಿಶ್ವಕಪ್ ಫುಟ್ಬಾಲ್‌ನ ಪಂದ್ಯಗಳ ಫಲಿತಾಂಶ ಪಕ್ಕಕ್ಕಿರಲಿ, ಭಾರತಕ್ಕೆ ಭವಿಷ್ಯ ಉಜ್ವಲಗೊಳ್ಳುವ ಎಲ್ಲ ತಯಾರಿಯಂತೂ ಆಗಿದೆ. ವಿಶ್ವಕಪ್ ಗಾಗಿ 26 ತರಬೇತಿ ಸೈಟ್‌ಗಳು ಸಿದ್ಧಗೊಂಡಿವೆ. 15 ಖಾಸಗಿ ಒಡೆತನದ ಸ್ಟೇಡಿಯಂಗಳೂ ಸೇರಿದಂತೆ ಫುಟ್ಬಾಲ್‌ನ ಅಂಕಣ ಪಕ್ಕಾ ವಿಶ್ವಮಟ್ಟದ್ದಾಗಿದೆ. ಫಾ ಸೂಚನೆ, ಪಿಚ್ ಪ್ರಗತಿ ಸಮಿತಿಯ ಪರಿಣತರು ಭಾರತಕ್ಕೆ ಬಂದಿದ್ದು, ಅವರಿಂದ ಸ್ಟೇಡಿಯಂಗಳು ತರಬೇತಿಗೂ ಹೆಚ್ಚು ಸೂಕ್ತವಾದುದ್ದಾಗಿ ಪರಿವರ್ತನೆಯಾಗಿವೆ. ಅಷ್ಟೇ ಅಲ್ಲ, ಕಳೆದ ಏಳೆಂಟು ತಿಂಗಳಿನಿಂದ ಭಾರತ ಜೂನಿಯರ್ ವಿಶ್ವಕಪ್‌ಗಾಗಿ ಗಂಭೀರ ತರಬೇತಿ ಕಾರ್ಯಕ್ರಮ ನಡೆಸಿದೆ. 60ರಿಂದ 70 ಪ್ರತಿಭೆಗಳು ಪರಸ್ಪರ ಸ್ಪರ್ಧಿಸಿ, ಸಂವಹನ ನಡೆಸಿ ಮುಂದಿನ ಸಾಹಸಗಳಿಗೆ ತಯಾರಾಗುತ್ತಿದ್ದಾರೆ. ಇನ್ನೇನು ಬೇಕು? ಸ್ವಲ್ಪ ಕಾಯೋಣ…
ಭಾರತೀಯ ಕ್ರಿಕೆಟಿಗರಾದ ಯುವರಾಜ್ ಸಿಂಗ್, ಇರ್ಫಾನ್ ಪಠಾಣ್‌ರ ಮೊದಲ ಯಶಸ್ಸು ಇದ್ದದ್ದು ಜೂನಿಯರ್ ವಿಶ್ವಕಪ್‌ಗ್ಳಲ್ಲಿ. ಹಾಕಿಯಲ್ಲೂ ಭಾರತ ವಿಶ್ವದರ್ಜೆಯ ಪೈಪೋಟಿಯಲ್ಲಿದೆ. ಇಲ್ಲೂ ಜೂನಿಯರ್ ಪ್ರತಿಭೆಗಳ ಅಡಿಪಾಯ ಗಟ್ಟಿಯಾಗಿದೆ. 2016ರಲ್ಲಿ ಜೂನಿಯರ್ ವಿಶ್ವಕಪ್ ಹಾಕಿ ಗೆದ್ದ ತಂಡದಲ್ಲಿದ್ದ ರ್ಮನ್‌ಪ್ರೀತ್ ಸಿಂಗ್ ಹಾಗೂ ದಿಪ್ಸನ್ ಟಿರ್ಕಿ ಜೂನಿಯರ್ ತಂಡಕ್ಕೆ ಆಡುವುದನ್ನೇ ತಮ್ಮ ಗುರಿಯನ್ನಾಗಿಸಿಕೊಂಡಿದ್ದರು. ಫಲಿತಾಂಶಗಳು ಅದೃಷ್ಟವನ್ನು ಬದಲಿಸುತ್ತವೆ. ಮೊನ್ನೆ ಮೊನ್ನೆ ಸೀನಿಯರ್ ಹಾಕಿ ತಂಡದ ಫಿಕಿಂಗ್ ಸ್ಟೆಷಲಿಸ್ಟ್ ರೂಪೀಂದರ್ ಪಾಲ್ ಸಿಂಗ್ ಈಗ ನಡೆದಿರುವ ಏಷ್ಯಾ ಕಪ್ ನಲ್ಲಿ ಪಾಲ್ಗೊಳ್ಳಲಾಗದು ಎಂಬುದು ನಿರ್ಧಾರವಾದಾಗ ಜೂನಿಯರ್ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ನಿರ್ವಹಿಸಲು ರಾಷ್ಟ್ರ ತಂಡದ ಬುಲಾವ್ ಪಡೆದಿದ್ದಾರೆ. ಕ್ರಿಕೆಟ್, ಹಾಕಿಯಲ್ಲಿ ಆದ ಸಕಾರಾತ್ಮಕ ಘಟನೆಗಳು ಫುಟ್ಬಾಲ್‌ನಲ್ಲೂ ಆಗಲಿ ಎಂದು ಪ್ರಾಥಿಸೋಣ, ಹಾರೈಸೋಣ. -ಸೀನಿಯರ್ ತಂಡ ವಿಶ್ವಕಪ್ ಪ್ರಧಾನ ಸುತ್ತಿನಲ್ಲಿ ಆಡುವ ಅರ್ಹತೆಯನ್ನು ಈವರೆಗೆ ಪಡೆದಿಲ್ಲ. ಈ ವರ್ಷ ವಿಶ್ವಕಪ್ 2018ರ ಅರ್ಹತಾ ಸುತ್ತಿನ ಮೊದಲ ಸುತ್ತಿನ ವಿಜಯದ ನಂತರದ ಸುತ್ತಿನಲ್ಲಿ ಆಡಿದ ಎಂಟು ಪಂದ್ಯಗಳಲ್ಲಿ ಏಳು ಪಂದ್ಯದ ಸೋಲನ್ನು ಭಾರತ ಕಾಣಬೇಕಾಯಿತು. ಭಾರತದ ವಿಶ್ವಕಪ್ ಸಾಧನೆಯ ಬಗ್ಗೆ ನಾವು ಕೇಳಿರುವುದು ಬರೀ ತಮಾಷೆಯ ಕಥೆಯೇ. * ಮಾ.ವೆಂ.ಸ.ಪ್ರಸಾದ್