ಜೇವರ್ಗಿ: ಡಾ| ಬಾಬಾಸಾಹೇಬ ಅಂಬೇಡ್ಕರ್ ಕಷ್ಟಪಟ್ಟು ಸಂವಿಧಾನ ಬರೆದು ದೇಶದ 138 ಕೋಟಿ ಜನರ ಭವಿಷ್ಯ ರೂಪಿಸಿದ್ದಾರೆ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಪಟ್ಟಣದಲ್ಲಿ ನಿರ್ಮಿಸಿದ ಡಾ| ಬಾಬಾಸಾಹೇಬ ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ 131ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಬಾಬಾಸಾಹೇಬರು ಕಾರಣ. ಈ ದೇಶದಲ್ಲಿ ಸಂವಿಧಾನ ಹಾಳು ಮಾಡುವ ಹಾಗೂ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಕೆಲವು ಜನ ಹುಟ್ಟಿದ್ದಾರೆ. ಅವರಿಗೆ ಪಾಠ ಕಲಿಸಬೇಕಾದರೇ ತಾವೆಲ್ಲರೂ ಡಾ| ಅಂಬೇಡ್ಕರ್ ಅವರ ಮಾರ್ಗದಲ್ಲಿ ನಡೆಯಬೇಕು ಎಂದರು.
ಸಾಮಾಜಿಕ ಸಮಾನತೆ, ಆರ್ಥಿಕ ಬಲ ತುಂಬಿದ ಬಾಬಾಸಾಹೇಬರ ಕೊಡುಗೆ ಅಪಾರವಾ ಗಿದೆ. ಈ ದೇಶದ ಮಣ್ಣಿನ ಮಕ್ಕಳ ರಕ್ಷಣೆಗೆ ಬಾಬಾಸಾಹೇಬ ಅವತರಿಸಿ ಬಂದಿದ್ದಾರೆ. ಈ ದೇಶ ಗುಲಾಮಗಿರಿಯಲ್ಲಿ ಇರಬೇಕಾದರೇ ಮನುಸ್ಮೃತಿ ಕಾರಣ. ಮನುವಿನಿಂದ ಈ ದೇಶ ಹಾಳಾಗಿ ಹೋಗಿದೆ. ಕಟ್ಟೆ ಮೇಲೆ ಕುಳಿತು ಮಾತನಾಡುವುದರಿಂದ ಸಮಾಜ ಮುಂದೇ ಬರಲು ಸಾಧ್ಯವಿಲ್ಲ. ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಮುಂದೇಬರಬೇಕು. ನಿಮ್ಮ ಹಕ್ಕಿಗಾಗಿ ನೀವೇ ಹೋರಾಟ ಮಾಡಬೇಕು, ಎಲ್ಲಾ ಧರ್ಮದವರ ಜತೆ ಸೌಜನ್ಯದಿಂದ ಕೂಡಿ ಬಾಳಬೇಕು ಎಂದರು.
ಶಾಸಕ ಡಾ| ಅಜಯಸಿಂಗ್ ಮಾತನಾಡಿ, 224 ಕ್ಷೇತ್ರಗಳಲ್ಲಿ ಜಾತ್ಯಾತೀತ ಕ್ಷೇತ್ರ ಜೇವರ್ಗಿ ಕ್ಷೇತ್ರ ಪ್ರಸಿದ್ಧಿಯಾಗಿದೆ. ಬಾಬಾಸಾಹೇಬರು ಕೇವಲ ಒಂದು ಜಾತಿಗೆ ಸೀಮಿತವಲ್ಲ ಎಂಬುದು ಕಾರ್ಯಕ್ರಮದ ಮೂಲಕ ಸಾಬೀತಾಗಿದೆ. ಎಲ್ಲ ಜಾತಿ ಜನಾಂಗದದವರು ಸೇರಿ ಅಭೂತಪೂರ್ವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ. ದಿ.ಧರಂಸಿಂಗ್ ಅವರು ನೂತನ ಭವನಕ್ಕೆ ಅಡಿಗಲ್ಲು ಹಾಕಿ, ಇಂದು ಡಾ| ಖರ್ಗೆ ಅವರಿಂದ ಲೋಕಾರ್ಪಣೆಗೊಂಡಿದ್ದು ಸಂತಸದ ವಿಷಯ ಎಂದರು.
ಡಾ| ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಹರನಾಳ, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಾಯಪ್ಪ ಬಾರಿಗಿಡ ಅಧ್ಯಕ್ಷತೆ ವಹಿಸಿದ್ದರು. ಬೀದರನ ಅಣದೂರ ಬುದ್ಧವಿಹಾರದ ವರಜ್ಯೋತಿ ಬಂತೇಜಿ, ಕಲಬುರಗಿ ಬುದ್ಧವಿಹಾರದ ಸಂಘಾನಂದ ಬಂತೇಜಿ, ಮೈಸೂರಿನ ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರಿಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ| ಅಪ್ಪುಗೆರೆ ಸೋಮಶೇಖರ ಮುಖ್ಯಭಾಷಣ ಮಾಡಿದರು.
ಅಫಜಲಪುರ ಶಾಸಕ ಎಂ.ವೈ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅಲ್ಲಮಪ್ರಭು ಪಾಟೀಲ, ಕೇದಾರಲಿಂಗಯ್ಯ ಹಿರೇಮಠ, ಗೊಲ್ಲಾಳಪ್ಪ ಯಾತನೂರ, ಪುರಸಭೆ ಅಧ್ಯಕ್ಷೆ ಶರಣಮ್ಮ ತಳವಾರ, ಶಿವಾನಂದ ಪಾಟೀಲ ಮರತೂರ, ಜಗದೇವ ಗುತ್ತೇದಾರ, ಜಿ.ಪಂ. ಮಾಜಿ ಸದಸ್ಯರಾದ ಶಾಂತಪ್ಪ ಕೂಡಲಗಿ, ಮರೆಪ್ಪ ಬಡಿಗೇರ, ಮುಖಂಡರಾದ ಸುಭಾಸ ಚನ್ನೂರ, ಪುಂಡಲೀಕ ಗಾಯಕವಾಡ, ಮಲ್ಲಣ್ಣ ಕೊಡಚಿ, ಭೀಮರಾಯ ನಗನೂರ, ಶಾಂತಪ್ಪ ಯಲಗೋಡ, ಸಿದ್ರಾಮ ಕಟ್ಟಿ, ಶ್ರೀಹರಿ ಕರಕಿಹಳ್ಳಿ, ಶ್ರೀಮಂತ ಧನಕರ್, ಬೆಣ್ಣೆಪ್ಪ ಕೊಂಬಿನ್, ಶರಣಬಸವ ಕಲ್ಲಾ, ಹಯಾಳಪ್ಪ ಗಂಗಾಕರ್, ಸಂಗಮೇಶ ಕೊಂಬಿನ್, ದವಲಪ್ಪ ಮದನ್, ರವಿ ಕುರಳಗೇರಾ, ಸಿದ್ಧಪ್ಪ ಆಲೂರ, ರಾಜಶೇಖರ ಶಿಲ್ಪಿ ಹಾಗೂ ಸಹಸ್ರಾರು ಜನ ಭಾಗವಹಿಸಿದ್ದರು.