Advertisement

ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

12:45 PM May 23, 2019 | Suhan S |

ಶಿವಮೊಗ್ಗ: ಗುರುವಾರ ಮಧ್ಯಾಹ್ನದೊಳಗೆ ಪ್ರಕಟವಾಗುವ ಲೋಕಸಭೆ ಫಲಿತಾಂಶವು ಅಭ್ಯರ್ಥಿಗಳದಷ್ಟೇ ಅಲ್ಲದೇ ಸ್ಥಳೀಯ ಸಂಸ್ಥೆಯಿಂದ ವಿಧಾನ ಸೌಧದವರೆಗೂ ಹಲವರ ಭವಿಷ್ಯ ನಿರ್ಧರಿಸಲಿದೆ.

Advertisement

ಜಿದ್ದಾಜಿದ್ದಿನ ಕಣವಾಗಿರುವ ಶಿವಮೊಗ್ಗದಲ್ಲಿ ಗೆಲುವಿನ ಖಾತೆ ತೆರೆಯಲು ಉಭಯ ಪಕ್ಷಗಳು 45 ದಿನಗಳ ಕಾಲ ಬೆವರು ಹರಿಸಿವೆ. ಬಿಜೆಪಿ ಗೆದ್ದರೆ ಜಿಲ್ಲೆಯಲ್ಲಿ ಬಿಜೆಪಿ ಶಕ್ತಿ ಇಮ್ಮಡಿಗೊಳ್ಳಲಿದೆ. ಜೆಡಿಎಸ್‌ ಗೆದ್ದರೆ ಸೋತು ಸುಣ್ಣವಾಗಿರುವ ಕಾಂಗ್ರೆಸ್‌- ಜೆಡಿಎಸ್‌ಗೆ ಗೆಲುವಿನ ಲಯ ಸಿಗಲಿದೆ. ಬಿಜೆಪಿಯ ಬಿ.ವೈ. ರಾಘವೇಂದ್ರ, ಜೆಡಿಎಸ್‌ನ ಮಧು ಬಂಗಾರಪ್ಪ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮೈತ್ರಿಕೂಟದ ಅಸ್ತಿತ್ವ, ರಾಜ್ಯ ಸಮ್ಮಿಶ್ರ ಸರಕಾರ, ಶಿವಮೊಗ್ಗ ಜಿಲ್ಲಾ ಪಂಚಾಯತ್‌ ಅಧಿಕಾರದ ಭವಿಷ್ಯವನ್ನೂ ನಿರ್ಧಾರ ಮಾಡಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ಹಲವರಿಗೆ ಇದು ಪ್ರತಿಷ್ಠೆಯೂ ಆಗಿದೆ.

ರಾಘವೇಂದ್ರಗೆ ಸವಾಲು: ಶಿಕಾರಿಪುರ ಪುರಸಭೆ ಸದಸ್ಯರಾಗಿದ್ದ ಬಿ.ವೈ. ರಾಘವೇಂದ್ರ ಅವರು ತಮ್ಮ ತಂದೆ ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಮಯದಲ್ಲಿ ಲೋಕಸಭೆಗೆ ಸ್ಪರ್ಧಿಸಿ ಜಯ ಗಳಿಸಿದ್ದರು. ಎರಡು ಲೋಕಸಭೆ ಮತ್ತು ಒಂದು ವಿಧಾನಸಭೆ ಚುನಾವಣೆ ಎದುರಿಸಿದ ಬಳಿಕವೂ ತಂದೆಯ ಪ್ರಭಾವ, ನೆರಳಿನಿಂದ ಹೊರಬಂದು ಪಕ್ಷದೊಳಗೆ ಮತ್ತು ರಾಜಕೀಯವಾಗಿ ವೈಯಕ್ತಿಕ ವರ್ಚಸ್ಸು ಬೆಳೆಸಿಕೊಳ್ಳುವುದು ಸಾಧ್ಯವಾಗಿಲ್ಲ. ಈ ಸಮಯದಲ್ಲಿ ಹಾಲಿ ಸಂಸತ್‌ ಸ್ಥಾನ ಉಳಿಸಿಕೊಳ್ಳುವ ಮೂಲಕ ಪಕ್ಷದೊಳಗೆ ಬೆಳೆಯಬೇಕಿದೆ. ಅಕಸ್ಮಾತ್‌ ಇಲ್ಲೇನಾದರೂ ಸೋಲಾದಲ್ಲಿ ಮುಂದಿನ ವಿಧಾನಸಭೆ ಅಥವಾ ಲೋಕಸಭೆವರೆಗೆ ಅವರಿಗೆ ಅವಕಾಶವೇ ಇಲ್ಲವಾಗುತ್ತದೆ.

ಮಧುಗೆ ಮಾಡು ಇಲ್ಲವೇ ಮಡಿ: ಮೂರು ಬಾರಿ ವಿಧಾನಸಭೆ, ಒಮ್ಮೆ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಮಧು ಬಂಗಾರಪ್ಪ ಅವರಿಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ರಾಜಕೀಯದಲ್ಲಿ ಜೀವಂತಿಕೆ ಉಳಿಸಿಕೊಳ್ಳಲು ಈ ಚುನಾವಣೆ ನಿರ್ಣಾಯಕವಾಗಿದೆ. ಈ ಕಾರಣಕ್ಕೆ ಅವರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪ್ರಚಾರ ನಡೆಸಿದ್ದರು. ಡಿಕೆಎಸ್‌ ಸಹೋದರರನ್ನು ಕ್ಷೇತ್ರಕ್ಕೆ ಕರೆಸಿಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದರು. ಕೇವಲ 7 ತಿಂಗಳ ಅಂತರದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಉಪ ಚುನಾವಣೆಯಲ್ಲಿ ಸೋಲು ಕಂಡ ಅವರು ಇಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಇದ್ದಾರೆ.

ಯಡಿಯೂರಪ್ಪ ಪ್ರತಿಷ್ಠೆ: ಮಾಜಿ ಸಿಎಂ ಎಸ್‌. ಬಂಗಾರಪ್ಪ ಅವರ ಬಳಿಕ ರಾಜ್ಯದ ಪ್ರಭಾವಿ ರಾಜಕಾರಣಿಯಾಗಿ ಬೆಳೆದ ಯಡಿಯೂರಪ್ಪ ಅವರು ಜಿಲ್ಲೆಯ ರಾಜಕಾರಣವನ್ನೂ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಮತ್ತೂಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಅವರು ಅಧಿಕಾರಕ್ಕೆ ಏರಲಾಗದಿದ್ದರೂ ರಾಜ್ಯದಲ್ಲಿ ಪಕ್ಷಕ್ಕೆ ಅತಿ ಹೆಚ್ಚಿನ ಸ್ಥಾನಗಳನ್ನು ತಂದುಕೊಡುವುದಲ್ಲದೆ ಶಿವಮೊಗ್ಗದಲ್ಲೇ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿ ಎಲ್ಲ ಕ್ಷೇತ್ರಗಳ ಪ್ರಚಾರದ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಿದ್ದ‌ರು. ಇದರ ಮಧ್ಯದಲ್ಲಿ ತಮ್ಮ ಮಗನ ಗೆಲುವಿಗಾಗಿ ಶಿವಮೊಗ್ಗದಲ್ಲಿ ಹೆಚ್ಚು ಪ್ರಚಾರ ನಡೆಸಿದರು. ಅದರಲ್ಲೂ ಪಕ್ಷಕ್ಕೆ ಕಠಿಣ ಎನಿಸಿದ ಭದ್ರಾವತಿಯಲ್ಲಿ ಕಡೇ ಎರಡು ದಿನ ಕ್ಷೇತ್ರ ಬಿಟ್ಟು ಕದಲದೆ ಪ್ರಚಾರ ನಡೆಸಿದರು. ಪಕ್ಷದೊಳಗಿರುವವರೇ ಯಡಿಯೂರಪ್ಪ ಅವರ ಪ್ರಭಾವವನ್ನು ಕುಗ್ಗಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಅಲ್ಲದೆ ಶಿವಮೊಗ್ಗದಲ್ಲೇ ಪಕ್ಷಕ್ಕೆ ವಿರುದ್ಧವಾದ ತೀರ್ಪು ಬಂದಲ್ಲಿ ಅವರ ಮುಂದಿನ ಹಾದಿಯು ಕಠಿಣವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದರಿಂದ ಈ ಫಲಿತಾಂಶ ಅವರಿಗೆ ಪ್ರತಿಷ್ಠೆ ಎನಿಸಿದೆ.

Advertisement

ಮೈತ್ರಿಕೂಟದ ಜೀವಂತಿಕೆ: ಬಿಜೆಪಿಯನ್ನು ಅದರ ಶಕ್ತಿಕೇಂದ್ರದಲ್ಲೇ ಸೋಲಿಸಬೇಕೆಂಬ ಕಾರಣಕ್ಕೆ ಕ್ಷೇತ್ರ ಬಿಟ್ಟುಕೊಟ್ಟರೂ ಪರವಾಗಿಲ್ಲ ಎಂದು ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ನ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸಿದ್ದರು. ಹೀಗಾಗಿ ಲೋಕಸಭೆ ಚುನಾವಣೆಗೆ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಅಂತಿಮವಾಗುವ ಮುನ್ನವೇ ಶಿವಮೊಗ್ಗದಲ್ಲಿ ಮಧು ಮೈತ್ರಿಕೂಟದ ಅಭ್ಯರ್ಥಿಯಾಗುವುದು ಅಂತಿಮಗೊಂಡಿತ್ತು. ರಾಜ್ಯದ ಬೇರೆಲ್ಲಾ ಕ್ಷೇತ್ರಗಳಲ್ಲಿ ಮೈತ್ರಿಕೂಟದ ಮಿತ್ರರ ನಡುವೆ ಜಗಳಗಳು ನಡೆದಿದ್ದವು. ಅದರೆ, ಶಿವಮೊಗ್ಗದಲ್ಲಿ ಮಾತ್ರ ಮಿತ್ರ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟು ಪ್ರದರ್ಶಿಸಿ ಪ್ರಚಾರ ನಡೆಸಿದ್ದರು. ಇಲ್ಲೇನಾದರೂ ಮಧು ಬಂಗಾರಪ್ಪ ಜಯ ಗಳಿಸಿದಲ್ಲಿ ಜಿಲ್ಲೆಯಲ್ಲಿ ಮೈತ್ರಿ ಮತ್ತಷ್ಟು ಗಟ್ಟಿಯಾಗುತ್ತದೆ. ಇಲ್ಲವಾದಲ್ಲಿ ಮೈತ್ರಿಯೊಳಗೆ ಬಿರುಕು ಬಿಡುವುದಂತೂ ಖಚಿತ ಎಂದು ಹೇಳಲಾಗುತ್ತಿದೆ.

ಸ್ಥಳೀಯ ಸಂಸ್ಥೆ ಮೇಲೂ ಎಫೆಕ್ಟ್: ಮೇ 29ರಂದು ನಡೆಯಲಿರುವ ಜಿಲ್ಲೆಯ 5 ಸ್ಥಳೀಯ ಸಂಸ್ಥೆ ಚುನಾವಣೆ ಮೇಲೂ ಫಲಿತಾಂಶ ಪ್ರಭಾವ ಬೀರಲಿದೆ. ಭದ್ರಾವತಿ ಹೊರತುಪಡಿಸಿ ಎಲ್ಲ ಕಡೆ ಬಿಜೆಪಿ ಶಾಸಕರೇ ಇರುವುದರಿಂದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಮೂಲಕ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಫಲಿತಾಂಶ ಯಾರ ಪರವಾಗಿರಲಿದೆ ಎಂಬುದರ ಮೇಲೆ ಸ್ಥಳೀಯ ಸಂಸ್ಥೆ ಅಭ್ಯರ್ಥಿಗಳ ಮೇಲೂ ಪ್ರಭಾವ ಬೀರಲಿದೆ.

•ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next