Advertisement

94 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರ

10:58 AM May 12, 2018 | Team Udayavani |

ಕಲಬುರಗಿ: ಕಳೆದೆರಡು ವಾರಗಳಿಂದ ಪ್ರಚಾರ ಹಾಗೂ ತಂತ್ರಗಳಲ್ಲಿ ತೊಡಗಿದ್ದ ಸ್ಪರ್ಧಾ ಅಭ್ಯರ್ಥಿಗಳ ಕಸರತ್ತುಗಳಿಗೆ ತೆರೆ ಬಿದ್ದಿದ್ದು, ಶನಿವಾರ ಜಿಲ್ಲೆಯ 9 ವಿಧಾನಸಭೆ ಕ್ಷೇತ್ರಗಳ 2384 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದಕ್ಕಾಗಿ ಜಿಲ್ಲಾಡಳಿತ ವ್ಯಾಪಕ ಕ್ರಮ ಕೈಗೊಂಡಿದೆ.

Advertisement

ಜಿಲ್ಲೆಯಲ್ಲಿ ಒಟ್ಟು 2117248 ಮತದಾರರು ಮತದಾನ ಹಕ್ಕು ಪಡೆದಿದ್ದು, ಇದರಲ್ಲಿ 1073499 ಪುರುಷರು, 1043391 ಮಹಿಳೆಯರು, 358 ಇತರೆ ಮತದಾರರು ಸೇರಿದ್ದಾರೆ. ಜಿಲ್ಲೆಯಲ್ಲಿ ಕಳೆದ ಸಲ ಶೇ. 75ರಷ್ಟು ಮತದಾನವಾದ ಹಾಗೂ ರಾಜಕೀಯಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿರುವುದನ್ನು ಪರಿಗಣಿಸಿ ಜಿಲ್ಲೆಯಲ್ಲಿ 180 ಮತಗಟ್ಟೆಗಳನ್ನು ಅತ್ಯಂತ ಕ್ರಿಟಿಕಲ್‌ (ಅತಿ ಸೂಕ್ಷ್ಮ) ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ವಿಶೇಷ ಬಂದೋಬಸ್ತ್ ಕಲ್ಪಿಸಲಾಗಿದೆ.

ಕಲಬುರಗಿ ಉತ್ತರ ಕ್ಷೇತ್ರದಲ್ಲಿಯೇ 44 ಅತಿ ಸೂಕ್ಷ್ಮ ಮತಗಟ್ಟೆಗಳಿವೆ. ಚಿಂಚೋಳಿ ತಾಲೂಕಿನಲ್ಲಿ 40 ಇದ್ದರೆ ಸೇಡಂ ತಾಲೂಕಿನಲ್ಲಿ ಕೇವಲ ಒಂದು ಹಾಗೂ ಅಫಜಲಪುರದಲ್ಲಿ ಕೇವಲ ಆರು ಇದ್ದರೆ ಜೇವರ್ಗಿಯಲ್ಲಿ 18, ಚಿತ್ತಾಪುರದಲ್ಲಿ 10, ಕಲಬುರಗಿ ಗ್ರಾಮೀಣದಲ್ಲಿ 33, ಆಳಂದ ತಾಲೂಕಿನಲ್ಲಿ 12 ಮತಗಟ್ಟೆಗಳಿವೆ. ಕಲಬುರಗಿ ಗ್ರಾಮಾಂತರದಲ್ಲಿ 129054 ಪುರಷರು, 121409 ಮಹಿಳೆಯರು, 34 ಇತರೆ, ಕಲಬುರಗಿ ದಕ್ಷಿಣದಲ್ಲಿ 131637 ಪುರಷರು, 131886 ಮಹಿಳೆಯರು, 67 ಇತರೆ, ಕಲಬುರಗಿ ಉತ್ತರದಲ್ಲಿ 138797 ಪುರುಷರು, 135386 ಮಹಿಳೆಯರು ಹಾಗೂ 98 ಇತರೆ ಮತದಾರರು ಇದ್ದಾರೆ.

ಗಮನ ಸೆಳೆಯುವ ಬೂತ್‌: ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲೆಯ ಪ್ರತಿಕ್ಷೇತ್ರವೊಂದರಂತೆ ಒಟ್ಟು ಒಂಭತ್ತು ಪಿಂಕ್‌ ಮತಗಟ್ಟೆ ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಒ ಸೇರಿದಂತೆ ಐವರು ಮಹಿಳಾ ಸಿಬ್ಬಂದಿ ಇರ್ತಾರೆ. ಈ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಮಹಿಳೆಯರೇ. ಹೆಚ್ಚು ಮಹಿಳಾ ಮತದಾರರನ್ನು ಹೊಂದಿರುವ ಮತಗಟ್ಟೆ ಗುರುತಿಸಿ, ಮಹಿಳೆಯರನ್ನು ಮತದಾನ ಮಾಡಲು ಆಕರ್ಷಿಸುವ ನಿಟ್ಟಿನಲ್ಲಿ ಪಿಂಕ್‌ ಬೂತ್‌ ಸ್ಥಾಪಿಸಲಾಗಿದೆ. ಈ ಮತಗಟ್ಟೆ ಪಿಂಕ್‌ ಕಲರ್‌ನಿಂದ ಕೂಡಿದ್ದು, ಚುನಾವಣೆ ಸಿಬ್ಬಂದಿ ಸಹ ಪಿಂಕ್‌ ಉಡುಗೆ ತೊಡುತ್ತಾರೆ. ಬಲೂನ್‌ಗಳು, ಶೆಡ್‌ಗಳನ್ನು ಹಾಕಲಾಗಿದೆ.

ವ್ಯಾಪಕ ಪೊಲೀಸ್‌ ಬಂದೋಬಸ್ತ್: ಶಾಂತಿಯುತ ಹಾಗೂ ಸುಗಮ ಮತದಾನಕ್ಕಾಗಿ 60 ಫ್ಲೈಯಿಂಗ್‌ ಸ್ಕ್ವಾಡ್‌ ಜತೆಗೆ ಪ್ಯಾರಾ ಮಿಲಿಟರಿ ಫೋರ್ಸ್‌ ಬಂದಿದೆ. ಅದೇ ರೀತಿ ಸಿಆರ್‌ಪಿಎಫ್, ಸಿಐಎಸ್‌ಎಫ್, ಎಸ್‌ಎಸ್‌ಪಿ, ಐಟಿಬಿ, ಆಂಧ್ರದ ಎಸ್‌ಪಿಪಿ ಫೋರ್ಸ್‌ಗಳು ಆಗಮಿಸಿವೆ. ಆಂಧ್ರ, ತಮಿಳುನಾಡು ಸೇರಿದಂತೆ ಒಟ್ಟು 3900 ಅಧಿಕಾರಿಗಳು ಬಂದೋಬಸ್ತ್ದಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಒಟ್ಟು 2384 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ 180 ಗಂಭೀರ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನಾವಣೆ ಕಾರ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 13,360 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಚುನಾವಣೆಗಾಗಿ 237 ಬಸ್‌, ಮ್ಯಾಕ್ಸಿಕ್ಯಾಬ್‌-56, ಕ್ರೂಜರ್‌ -568, ಜೀಪು-166 ಸೇರಿದಂತೆ 1027 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

ಅಕ್ರಮ ಕಂಡು ಬಂದಲ್ಲಿ ದೂರು ನೀಡಿ: ಮತದಾನ ವೇಳೆಯಲ್ಲಿ ಯಾವುದೇ ಅಕ್ರಮ ಕಂಡುಬಂದಲ್ಲಿ ಸಾರ್ವಜನಿಕರು 9448634567 ಈ ವ್ಯಾಟ್ಸಾಪ್‌ ನಂಬರ್‌ಗೆ ದೂರು ನೀಡಬಹುದು. ಅದೇ ರೀತಿ ಕಾಲ್‌ ಸೆಂಟರ್‌ 1077 ಹಾಗೂ 1950ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ತಿಳಿಸಿದ್ದಾರೆ.

ಜಿಲ್ಲೆಯ ಒಂಭತ್ತು ವಿಧಾನಸಭೆ ಕ್ಷೇತ್ರಗಳಲ್ಲಿ 94 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಇವರೆಲ್ಲರ ಭವಿಷ್ಯ ಶನಿವಾರ ನಡೆಯುವ ಚುನಾವಣೆ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ. ಕಲಬುರಗಿ ದಕ್ಷಿಣ ಹಾಗೂ ಕಲಬುರಗಿ ಉತ್ತರ ಕ್ಷೇತ್ರದಲ್ಲಿ
ತಲಾ 15 ಅಭ್ಯರ್ಥಿಗಳು ಕಣದಲ್ಲಿದ್ದರೆ ಸೇಡಂದಲ್ಲಿ ಕೇವಲ ನಾಲ್ಕು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉಳಿದಂತೆ ಆಳಂದ, ಜೇವರ್ಗಿ ತಾಲೂಕಿನಲ್ಲಿ ತಲಾ ಏಳು, ಕಲಬುರಗಿ ಗ್ರಾಮೀಣದಲ್ಲಿ 13, ಅಫಜಲಪುರದಲ್ಲಿ 7, ಚಿತ್ತಾಪುರ 8 ಹಾಗೂ ಚಿಂಚೋಳಿ ಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next