Advertisement

ನಮ್ಮ ಪಾಲಿನ ನೀರಿಗಾಗಿ ಉಗ್ರ ಹೋರಾಟ

11:58 AM Jun 04, 2019 | Suhan S |

ಜಗಳೂರು: ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ನಮ್ಮ ಪಾಲಿನ ನೀರು ನಮಗೆ ನೀಡಬೇಕು ಮತ್ತು ಶಾಖಾ ನಾಲೆ ಮಾರ್ಗ ಬದಲಾವಣೆ ಮಾಡದಂತೆ ಆಗ್ರಹಿಸಿ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳು ತಾಲೂಕಿನ ದೋಣಿಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದವು.

Advertisement

ಸೊಮವಾರ ತಾಲೂಕಿನ ದೊಣಿಹಳ್ಳಿ ಸಮಿಪವಿರುವ ರಾಷ್ಟ್ರೀಯ ಹೆದ್ದಾರಿ 50 (13) ತಡೆದು ಸುಮಾರು ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಮುಸ್ಟೂರಿನ ಹುಚ್ಚನಾಗಲಿಂಗ ಸ್ವಾಮಿ ಮಠದ ಶ್ರೀ ರುದ್ರಮುನಿಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಈ ಭಾಗಕ್ಕೆ ನೀರು ಬಂದಿಲ್ಲ. ಹಿಂದೆ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದೇವೆ. ಇಂದು ನೀರಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ರಾಜ್ಯದಲ್ಲಿಯೇ ಅತೀ ಹಿಂದುಳಿದ ತಾಲೂಕು ಇದಾಗಿದ್ದು, ಈ ಭಾಗಕ್ಕೆ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಡಿ 2.4 ಟಿಎಮ್‌ಸಿ ಅಡಿ ನೀರು ಮುಂಜೂರಾಗಿದೆ. ಆದರೆ ಮಲತಾಯಿ ಧೋರಣೆ ತೋರಿ ಆ ನೀರು ಸಹ ಸಿಗದಂತೆ ಮಾಡುವ ಹುನ್ನಾರ ನಡೆದಿದೆ. ರೈತನಿಗೆ ಸಾಲ, ಹಣ ಬೇಕಿಲ್ಲ. ಆತನಿಗೆ ಬೇಕಿರುವುದು ನೀರು. ಆ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದರು.

ಸರಕಾರ ಇತ್ತ ಗಮನ ಹರಿಸಿ ನಮ್ಮ ಪಾಲಿನ ನೀರನ್ನು ನಮಗೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಜೈಲ್ ಭರೋ ಚಳವಳಿ ಮಾಡುತ್ತೇವೆ. ನಾವು ರಕ್ತ ಬೇಕಾದರೂ ಕೊಡುತ್ತೇವೆ. ನೀರು ಮಾತ್ರ ಬಿಡುವುದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಭದ್ರಾ ಮೇಲ್ದಂಡೆ ನೀರಾವರಿ ಹೊರಾಟ ಸಮಿತಿ ಕಾರ್ಯದರ್ಶಿ ಓಬಳೇಶ್‌ ಮಾತನಾಡಿ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯಲ್ಲಿ ಜಗಳೂರು ತಾಲೂಕಿಗೆ ದೊರೆಯಬೇಕಾದ 2.4 ಟಿಎಮ್‌ಸಿ ನೀರು ದೊರೆಯಬೇಕು. ಮತ್ತು ಶಾಖಾ ಕಾಲುವೆಯ ಮಾರ್ಗ ಬದಲಾವಣೆ ಮಾಡಬಾರದು. ಇದಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ದೇಸಾಯಿ ಸಮಿತಿಯನ್ನು ಮುಂದುವರಿಸಬೇಕು. ಇಲ್ಲದಿದ್ದರೆ ಜೂ. 16 ರಂದು ಚಿತ್ರದುರ್ಗದಲ್ಲಿರುವ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಶಾಸಕ ಎಸ್‌.ವಿ ರಾಮಚಂದ್ರ ಮಾತನಾಡಿ ಸುಮಾರು ವರ್ಷಗಳಿಂದ ನೀರಿಗಾಗಿ ಹೋರಾಟ ನಡೆದಿದ್ದು, ಈ ಭಾಗಕ್ಕೆ ದೊರೆಯಬೇಕಾದ ನೀರು ಬರಬೇಕು. ನಾವು ಇಲ್ಲಿ ಮಾತನಾಡಿದರೆ ಪ್ರಯೋಜನವಾಗುವುದಿಲ್ಲ. ಬೆಂಗಳೂರು ಚಲೋ ಹಮ್ಮಿಕೊಳ್ಳಬೇಕು ಎಂದರು.

ನಿಮ್ಮ ಸಮಸ್ಯೆಗಳ ಕುರಿತು ನಾನು ಈಗಾಗಲೇ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಜೂ. 15ರಂದು ಸಮಿತಿಯ ಸಭೆ ಆಯೋಜಿಸುವಂತೆ ಕ್ರಮ ವಹಿಸಲು ಮುಖ್ಯ ಇಂಜಿಯರ್‌ ಇಂದು ಬೆಂಗಳೂರಿಗೆ ತೆರಳಿದ್ದಾರೆ. ಹೀಗಾಗಿ ಇಂದಿನ ಪ್ರತಿಭಟನೆಯನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪಿದ ಪ್ರತಿಭಟನಾಕಾರರು ಜೂ.15 ರಂದು ಸಮಿತಿಯ ಸಭೆ ಕರೆಯದಿದ್ದರೆ, 16 ರಂದು ಚಿತ್ರದುರ್ಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆ ಕೊನೆಗೊಳಿಸಿದರು.

ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಮುಖಂಡರಾದ ನಾಗಲಿಂಗಪ್ಪ, ಲಿಂಗರಾಜ್‌, ಕಲ್ಲೇರುದ್ರೇಶ್‌, ವೀರಸ್ವಾಮಿ, ಮಹಾಲಿಂಗಪ್ಪ, ಪ್ರಕಾಶರೆಡ್ಡಿ, ತಿಮ್ಮಾರೆಡ್ಡಿ, ಮಹಾಲಿಂಗಪ್ಪ, ಪ್ರಕಾಶ, ಪುಟ್ಟಣ್ಣ, ಎಸ್‌.ಕೆ. ರಾಮರೆಡ್ಡಿ, ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್‌, ಚಿರಂಜೀವಿ, ಬಡಯ್ಯ, ತಾಪಂ ಮಾಜಿ ಅಧ್ಯಕ್ಷ ಸಣ್ಣ ಸೂರಯ್ಯ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next