ನಮ್ಮದು ಕೃಷಿ ಕುಟುಂಬ. ಮನೆಯಲ್ಲಿ ಎಮ್ಮೆ ಸಾಕಿದ್ದೆವು. ಸಾಬರ ಹುಡುಗ ಬಾಬು, ನನ್ನ ಆತ್ಮೀಯ ಸ್ನೇಹಿತನಾಗಿದ್ದ. ಅವರ ಮನೆಯಲ್ಲೂ ಎಮ್ಮೆ, ಮೇಕೆ ಸಾಕಿದ್ದರು. ರಜಾ ದಿನಗಳಲ್ಲಿ ಎಮ್ಮೆ ಮೇಯಿಸುವುದು, ನಮ್ಮ ಸಂತೋಷದ ಕೆಲಸವಾಗಿತ್ತು. ನಮ್ಮ ಜಮೀನಿನ ಬದು, ರಸ್ತೆಯ ಬದಿ, ಕೆರೆಯ ಅಂಗಳ, ಕಾಡು, ಗುಡ್ಡ… ಇವೆಲ್ಲವೂ ನಮ್ಮ ಅಲೆದಾಟದ ಜಾಗಗಳಾಗಿದ್ದವು. ಗುಡ್ಡಕ್ಕೆ ಹೋದಾಗ, ಅಲ್ಲಿನ ಎತ್ತರದ ಬಂಡೆಗೆ ಸೊಪ್ಪು ಹಾಕಿ, ಮೇಲಿಂದ ಜಾರುತ್ತಿದ್ದೆವು.
ಕಾಡಿನಲ್ಲಿ ಸಿಗುವ ಬಿಕ್ಕೆ, ನೇರಳೆ, ಕಾರೆ, ಸೀತಾಫಲದ ಹಣ್ಣುಗಳನ್ನು ತಿನ್ನುವುದು, ಮಧ್ಯಾಹ್ನದ ವೇಳೆಯಲ್ಲಿ ಮರದ ಕೆಳಗೆ ಸೊಪ್ಪು ಹರಡಿ ಮಲಗುವುದು ನಮ್ಮ ನಿತ್ಯದ ಕೆಲಸವಾಗಿತ್ತು. ಸಂಜೆ ನಾಲ್ಕರ ತನಕ ಎಮ್ಮೆ ಮೇಯಿಸಿ, ನೀರಿಗಾಗಿ ಕೆರೆಗೆ ಹೊಡೆದುಕೊಂಡು ಬರುತ್ತಿದ್ದೆವು. ಎಮ್ಮೆ ಮೇಯಿಸಲು ಹೋದಾಗ ನಾನು- ಬಾಬು ಎಮ್ಮೆಯ ಮೇಲೆ ಸವಾರಿ ಮಾಡು ತ್ತಿದ್ದರೆ, ಎಲ್ಲರೂ ನಮ್ಮನ್ನೇ ನೋಡುತ್ತಿದ್ದರು.
ಆಗ- “ಎಮ್ಮೇ ನಿನಗೆ ಸಾಟಿ ಇಲ್ಲ…’ ಅಂತ ರಾಜ್ಕುಮಾರ್ ಹಾಡನ್ನು ಹೇಳುತ್ತಿದ್ದೆವು. ನವೆಂಬರ್- ಡಿಸೆಂಬರ್ ಅಂದರೆ, ಸಾಮಾನ್ಯವಾಗಿ ಖುಷ್ಕಿ ಬೆಳೆಗಳ ಕಟಾವಿನ ಕಾಲ. ನೆಲಗಡಲೆ, ಜೋಳದ ತೆನೆ, ರಾಗಿ ತೆನೆ, ಸರು, ಅಲಸಂದಿಯನ್ನು ಬೆಳೆಯುತ್ತಿದ್ದೆವು. ಸಂಜೆಯ ವೇಳೆ ಹೊಲಗಳಿಗೆ ಹೋಗಿ, ನೆಲಗಡಲೆ/ ಜೋಳದ ತೆನೆ ಕಿತ್ತು, ಅಲ್ಲಿ ಬಿದ್ದಿರುತ್ತಿದ್ದ ಕಡ್ಡಿಗಳನ್ನು ಒಟ್ಟುಗೂಡಿಸಿ ಸುಡುತ್ತಿದ್ದೆವು. ಮನೆಯಿಂದ ತೆಗೆದುಕೊಂಡು ಹೋದ ಉಪ್ಪು, ಹಸಿಮೆಣಸಿನಕಾಯೊಂದಿಗೆ ಅದನ್ನು ತಿನ್ನುತ್ತಿದ್ದೆವು.
ಸಂಜೆಯ ಚಳಿಗೆ, ಇದು ಬಹಳ ರುಚಿ ಅನಿಸುತ್ತಿತ್ತು. ಪ್ರೌಢಶಾಲೆಗೆ, ನಮ್ಮೂರಿನಿಂದ ಹೋಬಳಿ ಕೇಂದ್ರ ಮಂಚೇನಹಳ್ಳಿಗೆ ನಡೆದುಕೊಂಡು ಹೋಗಬೇಕಿತ್ತು. ಆಗ ಮಂಚೇನಹಳ್ಳಿಯ ಸುತ್ತಮುತ್ತಲೂ, ಹೇರಳವಾಗಿ ಕಬ್ಬು ಬೆಳೆಯುತ್ತಿದ್ದರು. ಸಾಕಷ್ಟು ಆಲೆಮನೆಗಳಿದ್ದವು. ಶಾಲೆ ಮುಗಿಸಿ ಬರುವಾಗ ಕಬ್ಬು, ಬಿಸಿ ಬೆಲ್ಲವನ್ನು ಕೇಳಿ ಪಡೆದು ದಾರಿಯುದ್ದಕ್ಕೂ ತಿನ್ನುತ್ತ ಬರುತ್ತಿದ್ದೆವು. ಆರು ಕಿ.ಮೀ. ದೂರ ಸವೆಸುವಷ್ಟರಲ್ಲಿ, ಕಾಲುಗಳು ಸೋತು ಹೋಗುತ್ತಿದ್ದವು. ಏನಾದರೂ ಶಬ್ದವಾದರೆ, ಆಸೆ ಕಂಗಳಿಂದ, ಹಿಂದೆ ನೋಡುತ್ತಿದ್ದೆವು ಎತ್ತಿನಗಾಡಿ, ಟ್ರಾಕ್ಟರ್, ಬೈಕ್… ಹೀಗೆ ಏನಾದರೂ ಬರುತ್ತದೆಯಾ ಎಂದು. ಯಾರಾದರೂ ಹತ್ತಿಸಿಕೊಂಡು ಹೋಗುತ್ತಾರೆಂದು..!
ಮಳೆಗಾಲದಲ್ಲಿ, ಹಲವು ಬಾರಿ ನೆನೆದುಕೊಂಡು ಶಾಲೆಗೆ ಹೋಗಿದ್ದಿದೆ, ಹಾಗೇ, ನೆನೆದುಕೊಂಡು ಮನೆಗೆ ಬಂದದ್ದಿದೆ.ಚಳಿಗಾಲದಲ್ಲಿ, ಕೊರೆವ ಚಳಿ. ದೇಹಕ್ಕೆ ಶಾಖವೇರಲಿ ಅಂದುಕೊಂಡು ಎಷ್ಟು ಬಾರಿ ಕೈ ಉಜ್ಜಿದರೂ ಸಾಲದು. ಬೇಸಿಗೆ ಬಂದರೆ, ಬಯಲು ಸೀಮೆಯ ರಣ ಬಿಸಿಲು. ಹೀಗಾಗಿ, ಮೈಗೆ ನಿತ್ಯವೂ ಬೆವರಿನ ಸ್ನಾನ..! ಹೀಗೆ ಮಳೆಯಲ್ಲಿ ನೆಂದು, ಚಳಿಯಲ್ಲಿ ನಡುಗಿ, ಬಿಸಿಲಿನಲಿ ಬೆವರಿ ವರ್ಷಗಳು ಕಳೆದದ್ದೇ ಗೊತ್ತಾಗಲಿಲ್ಲ. ಈಗ ಮಳೆ ಬರಲಿ, ಬಿಸಿಲು ಸುಡಲಿ, ಕಷ್ಟ ಅನಿಸುವುದಿಲ್ಲ. ಆದರೆ, ಹಳೆಯ ದಿನಗಳ ನೆನಪುಗಳು, ಮನಃಪಟಲದ ಮುಂದೆ,ಚಿತ್ರಕತೆಯಂತೆ ಹಾದು ಹೋದಾಗ, ಮನಸ್ಸು ಭಾರವಾಗುತ್ತದೆ.
* ಎಚ್.ಎನ್. ಕಿರಣ್ ಕುಮಾರ್, ಹಳೇಹಳ್ಳಿ.