ಉಡುಪಿ: ಕೋವಿಡ್ ವಿರುದ್ಧ ರವಿವಾರದಂದು ಘೋಷಿಸಲಾಗಿದ್ದ ಸಂಪೂರ್ಣ ಲಾಕ್‌ಡೌನ್‌ಗೆ ನಾಗರಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಬಹುತೇಕ ಯಶಸ್ವಿಯಾಗಿದೆ. ಅಂಗಡಿ ಮುಗ್ಗಟ್ಟು ಗಳು ಸಂಪೂರ್ಣ ಬಂದ್ ಆಗಿತ್ತು. ವಾಹನಗಳು ರಸ್ತೆಗೆ ಇಳಿಯದೇ ಓಡಾಟ ನಿಲ್ಲಿಸಿದ್ದವು. ಕೆಎಸ್‌ಆರ್‌ಟಿಸಿ, ಭಾರತಿ ಖಾಸಗಿ ಸಂಸ್ಥೆಯ ಬಸ್‌ಗಳು ಓಡಾಟ ನಡೆಸಿರಲಿಲ್ಲ. ಹೊರ ಜಿಲ್ಲೆಗಳಿಗೂ ಸಾರಿಗೆ ಬಸ್ ಓಡಾಟವಿರಲಿಲ್ಲ. ಅಟೋರಿಕ್ಷಾ, ಖಾಸಗಿ ವಾಹನಗಳು ರಸ್ತೆಗಿಳಿದಿರಲಿಲ್ಲ. ದಿನಸಿ ಅಂಗಡಿಗಳು, ಮದ್ಯದಂಗಡಿ, ಸೆಲೂನ್ ಅಂಗಡಿಗಳು ತೆರೆದಿರಲಿಲ್ಲ. ತರಕಾರಿ, ಹಣ್ಣುಹಂಪಲು ಮಾರುಕಟ್ಟೆಗಳು ಇರಲಿಲ್ಲ. ಹಾಲು, ಪೇಪರ್, ಮೆಡಿಕಲ್ ಶಾಪ್ ಮತ್ತು ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಉಡುಪಿ ಜಿಲ್ಲಾಸ್ಪತ್ರೆ, ಕೆಎಂಸಿ ಆಸ್ಪತ್ರೆಗಳು ತೆರೆದಿತ್ತು. ತುರ್ತು ಚಿಕಿತ್ಸೆಗಾಗಿ ಮಾತ್ರ ಜನ ಆಗಮಿಸುತ್ತಿದ್ದರು.
ಕರ್ಪ್ಯೂ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು. ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ಅನಗತ್ಯ ವಾಹನಗಳ ಓಡಾಟಕ್ಕೆ ತಡೆ ನೀಡಿದ್ದರು. ಪೊಲೀಸರು ಗಸ್ತು ತಿರುಗುತ್ತ ಕರ್ಫ್ಯೂ ಬಗ್ಗೆ ಪರಿಶೀಲನೆ ನಡೆಸಿದರು.
ಉಡುಪಿ: 27 ಮದುವೆ
ಲಾಕ್‌ಡೌನ್ ನಡುವೆ ರವಿವಾರ ಅನುಮತಿಯೊಂದಿಗೆ ಜಿಲ್ಲೆಯಾದ್ಯಂತ ಒಟ್ಟು 27 ಮದುವೆ ನಡೆದಿದ್ದು, ಉಡುಪಿಯಲ್ಲಿ 4, ಕಾಪುವಿನಲ್ಲಿ 3, ಬ್ರಹ್ಮಾವರದಲ್ಲಿ 4, ಕುಂದಾಪುರದಲ್ಲಿ 4, ಬೈಂದೂರು ಹಾಗೂ ಕಾರ್ಕಳದಲ್ಲಿ ತಲಾ 6 ಮದುವೆ ಸೇರಿದಂತೆ ಒಟ್ಟು 27 ಮದುವೆ ನಡೆದಿದೆ.
ಜಿಲ್ಲೆಯ ವಿವಿಧ ಕಡೆಯಲ್ಲಿ ಅನುಮತಿಯೊಂದಿಗೆ ಮದುವೆ ಸಮಾರಂಭ ನಡೆದಿದೆ. ಸಾರ್ವಜನಿಕರಿಂದ ಇದುವರೆಗೆ ಸಮಾರಂಭದಲ್ಲಿ ಸರಕಾರ ವಿಧಿಸಿದ ಷರತ್ತು ಹಾಗೂ ನಿಯಮ ಉಲ್ಲಂಘನೆ ಕುರಿತು ದೂರು ಬಂದಿಲ್ಲ.
-ಸದಾಶಿವ ಪ್ರಭು, ಅಪರ ಜಿಲ್ಲಾಧಿಕಾರಿ, ಉಡುಪಿ