Advertisement

ಇಂಧನ ಇಲಾಖೆಗೂ ಮಳೆ ಅಭಾವ ಬಿಸಿ

02:45 AM Jul 12, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಈ ಬಾರಿಯೂ ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ರೈತರಲ್ಲಿ
ಮಾತ್ರ ವಲ್ಲದೇ ಇಂಧನ ಇಲಾಖೆಯಲ್ಲೂ ಆತಂಕ ಸೃಷ್ಟಿಸಿದೆ. ಸದ್ಯ ವಿದ್ಯುತ್‌ ಖರೀದಿಸದೆ ಪರಿಸ್ಥಿತಿ ನಿಭಾಯಿಸುತ್ತಿರುವ
ಇಂಧನ ಇಲಾಖೆಯು ಮುಂದೆ ವಿದ್ಯುತ್‌ ಖರೀದಿಸಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿದೆ.

Advertisement

ಜುಲೈ 20ರ ನಂತರ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು,
ಆ ಮಳೆಯ ಆಧಾರದ ಮೇಲೆ ವಿದ್ಯುತ್‌ ಖರೀದಿ ಬಗ್ಗೆ ಅಂತಿಮ ತೀರ್ಮಾನವಾಗಲಿದೆ. ತೀರಾ ತುರ್ತು ಅಗತ್ಯಬಿದ್ದರೆ 9
ತಿಂಗಳು ಇಲ್ಲವೇ 1 ಒಂದು ವರ್ಷದ ಅವಧಿಗೆ ನಿತ್ಯ 1000 ಮೆ.ವ್ಯಾ.ನಂತೆ ಅಲ್ಪಾವಧಿ ವಿದ್ಯುತ್‌ ಖರೀದಿ ಬಗ್ಗೆ ಚಿಂತನೆ
ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಸಿಎಂ ನೇತೃತ್ವದಲ್ಲಿ ಸಭೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ವಿದ್ಯುತ್‌ ಸ್ಥಿತಿಗತಿ ಬಗ್ಗೆ ಸಭೆ ನಡೆಯಲಿದ್ದು, ವಿದ್ಯುತ್‌ ಖರೀದಿ
ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಉತ್ತಮ ಮಳೆಯಾದರೆ ಕೃಷಿ ಪಂಪ್‌ ಬಳಕೆ
ಕಡಿಮೆಯಾಗಲಿದ್ದು, ವಿದ್ಯುತ್‌ ಬೇಡಿಕೆ ಗಣನೀಯವಾಗಿ ಇಳಿಕೆಯಾಗಲಿದೆ. ಜತೆಗೆ ಜಲಾಶಯಗಳಲ್ಲೂ ನೀರಿನ ಸಂಗ್ರಹ
ಹೆಚ್ಚಾಗಿ ಜಲವಿದ್ಯುತ್‌ ಉತ್ಪಾದನೆಗೂ ಸಹಕಾರಿಯಾಗಲಿದೆ. ಸದ್ಯಕ್ಕೆ ಶೇ.50ರಷ್ಟು ಕೃಷಿಪಂಪ್‌ಗ್ಳಿಗೆ ಮಳೆಗಾಲದಲ್ಲೂ
ವಿದ್ಯುತ್‌ ಪೂರೈಸಬೇಕಿದೆ. ಇನ್ನೊಂದೆಡೆ ಜಲಾಶಯಗಳಿಗೆ ನೀರು ಹರಿದು ಬಾರದ ಕಾರಣ ಜಲವಿದ್ಯುತ್‌ ಉತ್ಪಾದನೆಗೂ ಹಿನ್ನಡೆಯಾಗುವುದರಿಂದ ಇಂಧನ ಇಲಾಖೆ ಆತಂಕಕ್ಕೆ ಒಳಗಾಗಿದೆ.

ಈ ವರ್ಷ ಉತ್ತಮ ಮಳೆಯಾಗುವ ನಿರೀಕ್ಷೆ ಮೂಡಿತ್ತು. ಶೇ.96ರಷ್ಟು ಮಳೆಯಾಗುವ ಮೂಲಕ ವಾಡಿಕೆ ವರ್ಷಧಾರೆ
ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಸಹಜವಾಗಿಯೇ ಉತ್ತಮ ಮಳೆಯ ನಿರೀಕ್ಷೆಯಿದೆ. ಆದರೆ ಜೂನ್‌ ಮೊದಲ ವಾರದಿಂದ ಜುಲೈ ಮೊದಲ ವಾರದವರೆಗೆ ವಾಡಿಕೆಗಿಂತ ಶೇ.21ರಷ್ಟು ಮಳೆ ಕೊರತೆಯಾಗಿದೆ. ಶೇ.19ರಷ್ಟು ಕೊರತೆಯು ಸರಾಸರಿ ಎನಿಸಿದ್ದು, ಈ ಪ್ರಮಾಣಕ್ಕಿಂತ ಶೇ.2ರಷ್ಟು ಹೆಚ್ಚುವರಿ ಕೊರತೆ ಕಾಣಿಸಿಕೊಂಡಿರುವುದು ತುಸು ಆತಂಕಕ್ಕೆ ಕಾರಣವಾಗಿದೆ.

ರಾಜ್ಯಾದ್ಯಂತ ಮುಂಗಾರಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಈವರೆಗೆ ಮಳೆಯಾಗದಿದ್ದರೂ ಉತ್ತರ ಒಳನಾಡಿನಲ್ಲಿ ಉತ್ತಮ
ಮಳೆಯಾಗಿದೆ. ಇದರಿಂದಾಗಿ ಒಟ್ಟಾರೆ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್‌ ಬೇಡಿಕೆಯಲ್ಲಿ ಶೇ.50ರಷ್ಟು ತಗ್ಗಿದೆ. ರಾಜ್ಯದಲ್ಲಿ ಬಳಕೆ ಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ.30ರಷ್ಟು ಕೃಷಿ ಪಂಪ್‌ಸೆಟ್‌ಗೆ ಬಳಕೆಯಾಗಲಿದೆ.

Advertisement

ಶೇ.50ರಷ್ಟು ಬಳಕೆ ತಗ್ಗಿರುವುದರಿಂದ 1,500 ಮೆ.ವ್ಯಾ.ವಿದ್ಯುತ್‌ಗೆ ಬೇಡಿಕೆ ಇಳಿಕೆಯಾಗಿರುವುದರಿಂದ ಒತ್ತಡ ತಾತ್ಕಾಲಿಕವಾಗಿ ನಿವಾರಣೆಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next