ಬಾಲ್ಯ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಾಲ್ಯದ ಪ್ರತೀ ನೆನಪುಗಳು, ಪ್ರತೀ ಕ್ಷಣಗಳು ಆಗಾಗ ನಮ್ಮ ಕಣ್ಣ ಮುಂದೆ ಬಂದೇ ಬರುತ್ತದೆ. ಯಾವುದೇ ಬೇಸರದ ಸಮಯವಾಗಲಿ ನಮ್ಮ ಬಾಲ್ಯದ ನೆನಪುಗಳು ನಮ್ಮ ಬೇಸರವನ್ನೇ ಮರೆಮಾಚುತ್ತದೆ. ಮಕ್ಕಳಾಗಿದ್ದಾಗ ಬಿದ್ದು-ಎದ್ದು ಆಟವಾಡಿದ್ದು, ಗಾಯಗಳಾಗಿದ್ದು, ಬಿಸಿ ಬಿಸಿ ಕಜ್ಜಾಯವೆಂದು ತಾಯಿ ಕೊಡುತ್ತಿದ್ದ ಪಟ್ಟು ಎಲ್ಲ ನಮ್ಮ ನೆನಪಿನ ಬುತ್ತಿಯಲ್ಲಿ ಹಾಯಾಗಿ ನೆಲೆಸಿದೆ.
ಅಂತಹದ್ದೇ ಒಂದು ನೆನಪುಗಳಲ್ಲಿ ನನ್ನದು ನಾನು ಮರ ಹತ್ತಲು ಕಲಿತದ್ದು. ಅದು ಏನು ದೊಡ್ಡ ವಿಷಯ ಎಂದು ಭಾವಿಸಬಹುದು. ಆ ಭಾವನೆ ಪಕ್ಕದಲ್ಲಿಟ್ಟು ನನ್ನ ಕತೆ ಕೇಳಿ. ಬಾಲ್ಯ ಎಂದಾಗ ಹಲವು ಕುಚೇಷ್ಟೆ ಇದ್ದೇ ಇರುತ್ತದೆ. ಹಾಗೇ ನಾನು ಕೂಡ ತುಂಬಾ ತುಂಟಿ. ಅದನ್ನು ಮಾಡಬೇಡ ಎಂದರೆ ಅದನ್ನೇ ಮಾಡುವಂತಹ ಮೊಂಡಾಟ. ಅದರಲ್ಲೂ ಮಂಗವನ್ನು ನೋಡಿ ಮಂಗನಂತೆ ಹೇಗೆ ಮರ ಹತ್ತುವುದು ಎಂಬ ಕುತೂಹಲ. ಈ ಕುತೂಹಲವೇ ನನ್ನನ್ನು ಮರ ಹತ್ತಿಸಿತ್ತು.
ಒಂದು ದಿನ ನಾನು ಮತ್ತು ನನ್ನ ತುಂಟ ತಮ್ಮ ಆಡುತ್ತಾ ಮರದ ಬಳಿ ಬಂದಾಗ ದೊಡ್ಡದಾದ ಪೇರಳೆ ಹಣ್ಣು ನೋಡಿದ ತತ್‌ಕ್ಷಣ ತಿನ್ನಬೇಕು ಎಂಬ ಆಸೆ ಹುಟ್ಟಿತು. ಆದರೆ ಏನು ಮಾಡುವುದು, ಕೈಯಲ್ಲಿ ದೊಣ್ಣೆ/ಕೋಲು ಇರಲಿಲ್ಲ. ಆಗಾ ನನ್ನ ತಮ್ಮ ಒಂದು ಉಪಾಯ ನೀಡಿದ. ಮರ ಹತ್ತುವುದು ಹೇಗೆ ಎಂದು ನಾನು ಹೇಳುವೆ ನೀನು ಮರ ಹತ್ತು ಎಂದು.
ನನಗೋ ಹಣ್ಣಿನ ಆಸೆ. ಏನೂ ಮಾಡುವುದು? ದೊಡ್ಡವಳಾದ ನನಗೆ ಮರ ಹತ್ತುವುದು ಅನಿವಾರ್ಯವೆಂದೆನಿಸಿತ್ತು. ಕಷ್ಟ ಪಟ್ಟು ಮರ ಹತ್ತಲು ಆರಂಭ ಮಾಡುವಾಗ ನನ್ನ ತಮ್ಮ ನನಗೊಂದು ಸಲಹೆ ನೀಡಿದ. ಅದೇನೆಂದರೆ ಮರ ಹತ್ತುವಾಗ ನೆಲ ನೋಡಬಾರದೆಂದು. ನಾನು ಅದನ್ನು ಒಪ್ಪಿ ಮರ ಹತ್ತಿ ಹಣ್ಣನ್ನು ಕಿತ್ತು ಕೆಳಗೆ ಹಾಕುವಾಗ ನೆಲ ನೋಡಿದೆ. ಭಯವಾಗಲಾರಭಿಸಿತು, ಎತ್ತರದಲ್ಲಿದ್ದ ನನಗೆ ಬಿದ್ದರೇನು ಗತಿ, ಅಪ್ಪಿ ತಪ್ಪಿ ಬಿದ್ದರೆ ಕಲ್ಲಿನ ಹಾಸಿಗೆ ಮೇಲೆ ಬೀಳುತ್ತೇನೆಂಬುದು ಮೇಲಿಂದ ನೋಡಿದಾಗ ಖಚಿತವಾಯಿತು. ಹಾಗಾಗಿ ನಾನು ಮರದಲ್ಲಿಯೇ ಕುಳಿತೆ. ಅದೇ ಸಮಯಕ್ಕೆ ಬಂದ ಅಜ್ಜಿ ಮರದಿಂದ ನನ್ನನ್ನು ಇಳಿಸಿ, ಬೈದು ಬುದ್ಧಿ ಹೇಳಿದರು.
ಆಗ ನನಗೆ ಒಂದು ದೊಡ್ಡ ಪ್ರಶಸ್ತಿ ಬಂದಷ್ಟೇ ಖುಷಿ ನನಗಾಗಿತ್ತು. ಈಗ ಅದನ್ನು ಯೋಚಿಸಿದಾಗ ಚಿಕ್ಕ ಚಿಕ್ಕ ಶ್ರಮವು ನಮ್ಮ ಸಾಧನೆಗೆ ಮೆಟ್ಟಿಲಾಗುತ್ತದೆ ಎನ್ನುವ ಮಾತು ಸತ್ಯ ಎನಿಸುತ್ತದೆ.
ಕಾವ್ಯಾ
ಎಸ್‌ಡಿಎಂ ಕಾಲೇಜು, ಉಜಿರೆ