Advertisement
ತಾವು ತುಂಬ ದೊಡ್ಡವರು, ಮಹತ್ಸಾಧನೆ ಮಾಡಿದವರೆಂದು ಭಾವಿಸುವವರು ಸಮುದ್ರದ ಕಿನಾರೆಯಲ್ಲಿ ಹೋಗಿ ಸ್ವಲ್ಪ ಕಾಲ ಕಳೆಯಿರಿ. ಅಲೆಗಳ ಹೊಡೆತಕ್ಕೆ ನಮ್ಮ ಅಹಂಕಾರವೆಲ್ಲ ಕೊಚ್ಚಿ ಹೋಗದಿದ್ದರೆ ಕೇಳಿ. ಎಲ್ಲವನ್ನೂ ತನ್ನೊಡಲೊಳಗೆ ತುಂಬಿಕೊಳ್ಳುವ ಸಮುದ್ರದ ವಿಸ್ತಾರ, ಗಾಂಭೀರ್ಯ, ಭೋರ್ಗರೆತ ಹಾಗೂ ಅದೇ ಮಟ್ಟಿನ ಶಾಂತ ಸ್ಥಿತಿ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ಈ ಸೃಷ್ಟಿಯ ಮುಂದೆ ನಾವೆಷ್ಟು ಚಿಕ್ಕವರು ಎಂದು ಮನವರಿಕೆ ಆಗುತ್ತದೆ.
ಅಭಿವೃದ್ಧಿಯ ಹೆಸರಿನಲ್ಲಿ ನಾವು ಎಷ್ಟು ದೊಡ್ಡ ರಸ್ತೆ, ಕಟ್ಟಡ, ಅಣೆಕಟ್ಟು, ಕಾರ್ಖಾನೆ ಇತ್ಯಾದಿಗಳನ್ನು ಕಟ್ಟುತ್ತೇವೋ ಅಷ್ಟು ದೊಡ್ಡ ಆಪತ್ತನ್ನೂ ತಂದುಕೊಳ್ಳುತ್ತೇವೆ ಎನ್ನುವುದು ಸತ್ಯ. ಅಭಿವೃದ್ಧಿ ಎನ್ನುವುದು ಪ್ರಕೃತಿಗೆ ಪೂರಕವಾಗಿರಬೇಕು. ಪ್ರಕೃತಿಗೆ ವಿರುದ್ಧವಾದ ಯಾವ ಅಭಿವೃದ್ಧಿಯೂ ಗಂಡಾಂತರಕಾರಿಯೇ ಆಗುತ್ತದೆ ಎನ್ನುವುದು ಆಗಾಗ ಸಾಬೀತು ಆಗುತ್ತಲೇ ಇರುತ್ತದೆ.
Related Articles
Advertisement
ಪ್ರಕೃತಿಗೆ ಅದರದ್ದೇ ಆದ ರೀತಿ- ರಿವಾಜುಗಳಿವೆ. ನಮ್ಮ ಕರುಣೆಯೂ ಒಮ್ಮೊಮ್ಮೆ ವಿಪತ್ತುಕಾರಕವೇ ಆಗುತ್ತದೆ ಎನ್ನುವುದನ್ನು ಸಾರುವ ಕಥೆಯೊಂದಿಗೆ.
ಚಿಟ್ಟೆಯ ವ್ಯಥೆಚಿಟ್ಟೆಯೊಂದು ತನ್ನ ಕೋಶದಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಚಿಕ್ಕ ರಂಧ್ರವೊಂದರಿಂದ ಹುಳು ರೂಪದ ಚಿಟ್ಟೆ ಹೊರಗೆ ಬರಲು ತಾಸುಗಟ್ಟಲೆ ತೆಗೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಅದು ಪ್ರಯತ್ನವನ್ನೇ ನಿಲ್ಲಿಸಿತೇನೋ ಎನ್ನುವಂತೆ ಪೂರ್ತಿಯಾಗಿ ಸ್ತಬ್ಧವಾಯಿತು. ಈ ಪ್ರಕ್ರಿಯೆಯನ್ನು ಗಮನಿಸುತ್ತ ಕುಳಿತಿದ್ದ ಯುವಕನಿಗೆ ಕರುಣೆ ಉಕ್ಕಿ ಬಂತು. ಪಾಪ, ಆ ಚಿಟ್ಟೆ ತುಂಬ ಕಷ್ಟಪಡುತ್ತಿದೆ. ಸ್ವಲ್ಪ ಸಹಾಯ. ಮಾಡೋಣ ಎಂದು ಹೇಳಿ, ಚಿಟ್ಟೆಯ ಕೋಶದ ರಂಧ್ರವನ್ನು ಕತ್ತರಿಯಿಂದ ಸ್ವಲ್ಪ ಬಿಡಿಸಿದ. ಚಿಟ್ಟೆಯೇನೋ ಸುಲಭವಾಗಿ ಹೊರಗೆ ಬಂತು. ಆದರೆ, ಅದರ ರೆಕ್ಕೆಗಳು ಬಲಿಷ್ಠವಾಗಿ ಬೆಳೆದಿರಲಿಲ್ಲ. ದೊಡ್ಡ ದೇಹವನ್ನು ಹೊತ್ತುಕೊಂಡು ಹಾರಲು ಅದಕ್ಕೆ ಕೊನೆಗೂ ಸಾಧ್ಯವಾಗಲಿಲ್ಲ. ಆದರೆ, ಅದೇ ಚಿಟ್ಟೆ ಸ್ವಾಭಾವಿಕವಾಗಿ ಕೋಶದಿಂದ ಹೊರಗೆ ಬಂದಿದ್ದರೆ ಅದರ ರೆಕ್ಕೆಗಳು ಶಕ್ತಿ ಪಡೆದುಕೊಳ್ಳುತ್ತಿದ್ದವು. ಕೋಶದಿಂದ ಹೊರಬರುವ ಪ್ರಕ್ರಿಯೆಯಲ್ಲೇ ಈ ರಹಸ್ಯ ಅಡಗಿದೆ. ಹಾರಲಾರದ ಸ್ಥಿತಿಯಲ್ಲಿ ಚಿಟ್ಟೆ ಜೀವನ ಕಳೆಯಬೇಕಾಯಿತು. ಸವಾಲನ್ನು ಎದುರಿಸುವ ಶಕ್ತಿ
ಕಷ್ಟಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ, ಬದುಕಿಗೆ ಸಜ್ಜಾಗಿಸುತ್ತವೆ. ಕಷ್ಟ ಪಡದೆ ಸಿಗುವ ಸುಖವೂ ಸಿಗುವುದಿಲ್ಲ, ಯಶಸ್ಸೂ ನಮ್ಮದಾಗುವುದಿಲ್ಲ. ಅಡ್ಡ ದಾರಿಯಲ್ಲಿ ಪಡೆದ ಯಶಸ್ಸು, ಗಳಿಸಿದ ಹಣ ಶಾಶ್ವತವೇ? ಅದಕ್ಕೊಂದು ಕೀರ್ತಿಯೇ? ಸವಾಲುಗಳನ್ನು ಎದುರಿಸಿಯೇ ನಾವು ನಮ್ಮ ಶಕ್ತಿಯನ್ನು ಪ್ರದರ್ಶಿಸಬೇಕು, ಸಾಧನೆ ಮಾಡಬೇಕು. ಉಳಿ ಪೆಟ್ಟು ತಿಂದ ಶಿಲೆ ಶಿಲ್ಪವಾಗುತ್ತದೆ, ಕುಂಬಾರನಿಂದ ತುಳಿಸಿಕೊಂಡ ಮಣ್ಣು ಮಡಕೆಯಾಗುತ್ತದೆ, ಕುಲುಮೆಯಲ್ಲಿ ಕಾದ ಕಬ್ಬಿಣ ಬೇಕಾದ ರೂಪ ಪಡೆಯುತ್ತದೆ. ಕೆಲವು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಗಳು ನಡೆಯುತ್ತಿವೆ, ಇನ್ನುಳಿದವರಿಗೆ ಕೆಲವೇ ದಿನಗಳಲ್ಲಿ ಆರಂಭವಾಗಲಿವೆ. ವರ್ಷವಿಡೀ ಕಷ್ಟಪಟ್ಟು ಓದಿದರೆ, ಪರೀಕ್ಷೆಯಲ್ಲಿ ಚೆನ್ನಾಗಿ ಬರೆದರೆ ಮಾತ್ರ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಲು ಸಾಧ್ಯ. ಶ್ರಮದ ಫಲ ಯಾವಾಗಲೂ ಸಿಹಿಯಾಗಿಯೇ ಇರುತ್ತದೆ. ಅಂತಹ ಸಿಹಿಯ ಅನುಭವ ನಿಮಗಾಗಲಿ. -ಅನಂತ ಹುದೆಂಗಜೆ