Advertisement

ಸಾಮರಸ್ಯ ಕ್ಷೇತ್ರ ಸಂಪರ್ಕದ “ಸೌಹಾರ್ದ ಸೇತುವೆ’ಕಾಮಗಾರಿ ಶುರು

10:29 PM May 14, 2019 | Team Udayavani |

ಬಂಟ್ವಾಳ: ಸಾಮರಸ್ಯದ ಪ್ರತೀಕವಾಗಿ ಗುರುತಿಸಿಕೊಂಡಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾಗಿರುವ ಬಂಟ್ವಾಳ ತಾಲೂಕಿನ ಅಜಿಲ ಮೊಗರು ಹಾಗೂ ಕಡೇಶ್ವಾಲ್ಯವನ್ನು ಸಂಪರ್ಕಿ ಸುವ ನಿಟ್ಟಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುವ “ಸೌಹಾರ್ದ ಸೇತುವೆ’ಯ ಕಾಮಗಾರಿ ಆರಂಭ ಗೊಂಡಿದ್ದು, ಮುಂದಿನ 2 ವರ್ಷಗಳಲ್ಲಿ ಸೇತುವೆ ಸಂಚಾರಕ್ಕೆ ಲಭ್ಯವಾಗಲಿದೆ.

Advertisement

ಅಂದಿನ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಪ್ರಸ್ತಾವನೆಯಂತೆ ಸೇತುವೆಗೆ ಅನುದಾನ ಮಂಜೂರುಗೊಂಡಿದ್ದು, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಸೇತುವೆ ಕಾಮಗಾರಿ ನಿರ್ವ ಹಿಸಲಿದೆ. ಸೇತುವೆಗಾಗಿ 19.84 ಕೋ. ರೂ. ಅನುದಾನ ಮಂಜೂರಾಗಿದೆ.

ಜೀವನದಿ ನೇತ್ರಾವತಿಯ ತಟ ದಲ್ಲಿರುವ ಅಜಿಲಮೊಗರಿನಲ್ಲಿ ಮಸೀದಿ ಹಾಗೂ ಕಡೇಶ್ವಾಲ್ಯದಲ್ಲಿ ದೇವಾಲಯ ವೊಂದಿದ್ದು, ಸಾಮರಸ್ಯದ ಕೇಂದ್ರಗಳಾಗಿ ಪ್ರಸಿದ್ಧಿ ಪಡೆದಿವೆ. ಆದರೆ ಈ ಎರಡು ಕ್ಷೇತ್ರಗಳನ್ನು ಸಂಪರ್ಕಿಸಬೇಕಾದರೆ ಜನತೆ ಸುತ್ತು ಬಳಸಿ ಸಾಗಬೇಕಾದ ಸ್ಥಿತಿ ಇದೆ. ಹೀಗಾಗಿ ಇಲ್ಲಿ ಸೇತುವೆ ನಿರ್ಮಾಣ ವಾಗಬೇಕು ಎಂಬುದು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿತ್ತು.

ಹೀಗಾಗಿ ಅಂದಿನ ಉಸ್ತುವಾರಿ ಸಚಿವರು ಸೇತುವೆಗಾಗಿ ಕ್ರೀಯಾ ಯೋಜನೆಯೊಂದನ್ನು ಸಿದ್ಧಪಡಿಸು ವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳಿಗೆ ಸೂಚಿಸಿದ್ದು, ಬಳಿಕ ಅನುದಾನ ಬಿಡುಗಡೆ ಗೊಂಡಿತ್ತು. ಪ್ರಸ್ತುತ ಈ ಸೇತುವೆಯಿಂದಾಗಿ ಬಂಟ್ವಾಳ ತಾ|ನ ನಾವೂರು, ಮಣಿ ನಾಲ್ಕೂರು, ಸರಪಾಡಿ, ಕಡೇ ಶ್ವಾಲ್ಯ, ಮಾಣಿ, ಬುಡೋಳಿ, ಬರಿಮಾರು, ಪುತ್ತೂರು ತಾ|ನ ಉಪ್ಪಿನಂಗಡಿ, ಬೆಳ್ತಂಗಡಿ ತಾ|ನ ತೆಕ್ಕಾರು, ಬಾರ್ಯ, ತಣ್ಣೀರುಪಂತ ಮೊದಲಾದ ಭಾಗಗಳ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಪ್ರಸ್ತುತ ನೇತ್ರಾವತಿ ನದಿಯಲ್ಲಿ ನೀರು ತೀರಾ ಕಡಿಮೆ ಇರುವುದರಿಂದ ಕಾಮಗಾರಿ ಹೆಚ್ಚಿನ ವೇಗದಲ್ಲಿ ಸಾಗಲಿದ್ದು, ಮುಂದಿನ ಮಳೆಗಾಲದಲ್ಲಿ ಕಾಮಗಾರಿ ನಿರ್ವ ಹಿಸುವುದು ಕಷ್ಟವಾಗಲಿದೆ. ಹೀಗಾಗಿ ನದಿ ಯಲ್ಲಿ ಹೆಚ್ಚಿನ ಪ್ರಮಾಣದ ನೀರು ಆಗಮಿ ಸುವುದಕ್ಕಿಂತ ಮುಂಚಿತವಾಗಿ ಕಾಮಗಾರಿ ಯನ್ನು ವೇಗದಲ್ಲಿ ನಡೆಸಬೇಕಿದೆ.

Advertisement

ಸಿಎಂರಿಂದ ಶಿಲಾನ್ಯಾಸ
ವಿವಿಧ ಕಾಮಗಾರಿಗಳ ಉದ್ಘಾಟನೆಗಾಗಿ ಜಿಲ್ಲೆಗೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು 2017ರ ಅ. 22ರಂದು ಕಡೇಶ್ವಾಲ್ಯ – ಅಜಿಲಮೊಗರು ಸಂಪರ್ಕಿಸುವ ಸೌಹಾರ್ದ ಸೇತುವೆಯ ನಿರ್ಮಾಣಕ್ಕೆ ಬಿ.ಸಿ. ರೋಡ್‌ನ‌ಲ್ಲಿ ಶಿಲಾನ್ಯಾಸ ನೆರವೇರಿಸಿದ್ದರು.

19.84 ಕೋ. ರೂ. ಅನುದಾನ
ಸೇತುವೆಯ ನಿರ್ಮಾಣದ ಕಾರ್ಯವನ್ನು ಕೆಆರ್‌ಡಿಸಿಎಲ್‌ ನಿರ್ವಹಿಸಲಿದ್ದು, ಚೆನ್ನೈನ ಎಸ್‌ಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಕಂಪೆನಿಯು ನಿರ್ಮಾಣದ ಗುತ್ತಿಗೆಯನ್ನು ವಹಿಸಿಕೊಂಡಿದೆ. 19.84 ಕೋ. ರೂ.ಗಳಿಗೆ ಗುತ್ತಿಗೆ ನೀಡಲಾಗಿದ್ದು, 24 ತಿಂಗಳ ಅವಧಿಯಲ್ಲಿ ಸೇತುವೆ ಪೂರ್ಣಗೊಳ್ಳಲಿದೆ. 312 ಮೀಟರ್‌ ಉದ್ದದ ಸೇತುವೆಯು 10.50 ಮೀ.ಅಗಲದಲ್ಲಿ ನಿರ್ಮಾಣವಾಗಲಿದೆ. ಜತೆಗೆ 378 ಮೀ. ಉದ್ದದ ಸಂಪರ್ಕ ರಸ್ತೆಯೂ ನಿರ್ಮಾಣವಾಗಲಿದೆ ಎಂದು ಕೆಆರ್‌ಡಿಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

 24 ತಿಂಗಳಲ್ಲಿ ಪೂರ್ಣ
ಸೇತುವೆಯ ಕಾಮಗಾರಿ ಆರಂಭಗೊಂಡು ಪ್ರಸ್ತುತ ಮಣ್ಣು ಪರೀಕ್ಷೆ ಕಾರ್ಯ ಪ್ರಗತಿಯಲ್ಲಿದೆ. 24 ತಿಂಗಳಲ್ಲಿ (2 ವರ್ಷ) ಸೇತುವೆಯ ಕಾಮಗಾರಿ ಪೂರ್ಣಗೊಳ್ಳಲಿದ್ದು, ನಿಗದಿತ ಸಂಪರ್ಕ ರಸ್ತೆಗಳೂ ಇದೇ ಕಾಮಗಾರಿಯಲ್ಲಿ ನಡೆಯಲಿದೆ.
– ಆರ್‌. ಮಂಜುನಾಥ್‌, ವಿಭಾಗೀಯ ಎಂಜಿನಿಯರ್‌,
ಕೆಆರ್‌ಡಿಸಿಎಲ್‌, ಹಾಸನ ವಿಭಾಗ

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next