ಬೆಂಗಳೂರು: ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಸತ್‌ನ ಮುಂದೆ ಮಂಡಿಸಿರುವ ಹಣಕಾಸಿನ ನಿರ್ಣಯ ಮತ್ತು ಠೇವಣಿ ವಿಮಾ ಮಸೂದೆಯು (ಎಫ್ಆರ್‌ಡಿಐ) ಜನಸಾಮಾನ್ಯರಿಗೆ ಮಾರಕವಾಗಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕಿರೆ ಇಡೀ ದೇಶದ ಆರ್ಥಿಕ ವ್ಯವಸ್ಥೆ ಅಲ್ಲೋಕ ಕಲ್ಲೋಲವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕಾಯ್ದೆಯಡಿ ಗ್ರಾಹಕರು ಇಟ್ಟಿರುವ ಠೇವಣಿ ಹಾಗೂ ಉಳಿತಾಯ ಖಾತೆಯಲ್ಲಿರುವ ಹಣವನ್ನು ಬ್ಯಾಂಕುಗಳು ತಮಗೆ ಬೇಕಾದಂತೆ ಬಳಸಿಕೊಳ್ಳುವ ಅಧಿಕಾರ ಸಿಗಲಿದೆ. ಒಂದು ಹಂತದಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವೂ ಲಭ್ಯವಾಗಲಿದೆ . ಹೀಗಾಗಿ, ಇದೊಂದು ಆತಂಕಕಾರಿ ವಿಚಾರ ಎಂದು ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ಅಮಾನ್ಯ ಮೂಲಕ ಇಡೀ ದೇಶದ ಜನರ ಬಳಿಯಿದ್ದ ದುಡ್ಡು ಬ್ಯಾಂಕುಗಳಲ್ಲಿ ತುಂಬುವಂತೆ ಮಾಡಿದ ಕೇಂದ್ರ ಸರ್ಕಾರ ಇದೀಗ ಆ ಹಣವನ್ನು ಬ್ಯಾಂಕುಗಳು ತಮಗೆ ಬೇಕಾದಂತೆ ಬಳಕೆ ಮಾಡಿಕೊಂಡು ಗ್ರಾಹಕರಿಗೆ ಷೇರು ಸರ್ಟಿಫಿಕೇಟ್ ಕೊಟ್ಟು ಇಂತಿಷ್ಟು ವರ್ಷದ ನಂತರ ಮರಳಿ ಪಡೆಯಬಹುದು ಎಂಬ ಷರತ್ತು ವಿಧಿಸುವ ಸಾಧ್ಯತೆಯೂ ಇರಲಿದೆ ಎಂದು ತಿಳಿಸಿದರು.
ನೋಟು ಅಮಾನ್ಯ ಹಾಗೂ ಜಿಎಸ್‌ಟಿಯಂತ ಕ್ರಮಗಳನ್ನು ಹೊಗಳಿಕೊಂಡಂತೆ ಈ ಕ್ರಮವನ್ನೂ ಹೊಗಳಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಬ್ಯಾಂಕುಗಳಲ್ಲಿ ಜನಸಾಮಾನ್ಯರ ಹಣಕ್ಕೆ ಖಾತರಿಯೇ ಇರುವುದಿಲ್ಲ. ಇದು ಮತ್ತೂಂದು ರೀತಿಯ ದರೋಡೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದರಿಂದ ಬ್ಯಾಂಕುಗಳು ಸಂಕಷ್ಟದಲ್ಲಿದ್ದು ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಾಗಿದೆ. 2012-13 ರಲ್ಲಿ 45849 ಕೋಟಿ ರೂ. ಲಾಭದಲ್ಲಿದ್ದ ಬ್ಯಾಂಕುಗಳು 2016-17 ರಲ್ಲಿ 474 ಕೋಟಿ ರೂ. ಲಾಭಕ್ಕೆ ಇಳಿದಿದೆ. ಬಿಜೆಪಿ ಸರ್ಕಾರ ಬಂದ ನಂತರ ಉದ್ಯಮಿಗಳ 2 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ.
ಇದೀಗ ಬ್ಯಾಂಕುಗಳನ್ನು ಉಳಿಸಲು ಪ್ರಾಧಿಕಾರ ರಚನೆ ಮಾಡಿ ಜನಸಾಮಾನ್ಯರ ಹಣದ ಬಗ್ಗೆ ಆ ಪ್ರಾಧಿಕಾರ ತೀರ್ಮಾನ ಕೈಗೊಳ್ಳುವಂತೆ ಮಾಡುವ ಹುನ್ನಾರ ನಡೆದಿದೆ. ಬ್ಯಾಂಕುಗಳ ಮೇಲೆ ಆರ್‌ಬಿಐ ನಿಯಂತ್ರಣವನ್ನೂ ತಪ್ಪಿಸುವ ಹುನ್ನಾರ ಇದರ ಹಿಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭೆಯಲ್ಲಿ ಸಂಖ್ಯಾ ಬಲ ಇರುವುದರಿಂದ ಒಪ್ಪಿಗೆ ಪಡೆದು ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಗದಿದ್ದರೂ ಜಾರಿ ಮಾಡುವ ಹಿಟ್ಲರ್ ಧೋರಣೆಯನ್ನು ಪ್ರಧಾನಿ ನರೇಂದ್ರಮೋದಿ ತೋರುತ್ತಿದ್ದಾರೆ ಎಂದು ಕಿಡಿ ಕಾರಿದರು. ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಲಿದ್ದು ರಾಜ್ಯದ ಎಲ್ಲ ಸಂಸದರು ಸಂಸತ್‌ನಲ್ಲಿ ವಿರೋಧ ವ್ಯಕ್ತಪಡಿಸಲು ಸೂಚನೆ ನೀಡಲಿದೆ ಎಂದು ಹೇಳಿದರು.