ಬೆಂಗಳೂರು: ವಿಧಾನಸೌಧ ಸಿಬ್ಬಂದಿಯ ಓಡಾಟಕ್ಕೆ ಕಾರುಗಳನ್ನು ನೀಡುವ ಟೆಂಡರ್ ಸಿಕ್ಕಿದೆ ಎಂದು ನಂಬಿಸಿ ಟ್ರಾವೆಲ್ಸ್ ಏಜೆನ್ಸಿ ಮಾಲೀಕನೊಬ್ಬ, ಹಲವು ಮಂದಿ ಕಾರು ಮಾಲೀಕರಿಂದ ಹಣ ಸಂಗ್ರಹಿಸಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತು ವಂಚನೆಗೊಳಗಾದ ಗಜೇಂದ್ರ ಕುಮಾರ್ ಎಂಬುವವರು ನೀಡಿರುವ ದೂರಿನ ಅನ್ವಯ, ಹ್ಯಾಪಿ ಟು ಟ್ರಿಪ್ ಟ್ರಾವೆಲ್ಸ್ ಮಾಲೀಕ ಡಿ.ಡಿ. ಮಂಜುನಾಥ್ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಬಾಗಲಕುಂಟೆ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಧಾನಸೌಧ ಸೇವೆಗೆ ಕಾರುಗಳನ್ನು ಬಿಡುವುದಾಗಿ ನಂಬಿಸಿ 34 ಕಾರು ಮಾಲೀಕರಿಂದ ತಲಾ 30 ಸಾವಿರ ರೂ. ಪಡೆದಿದ್ದ ಆರೋಪಿ ಮಂಜುನಾಥ್, ಬಳಿಕ ಕೆಲಸವೂ ಕೊಡದೆ ಹಣವೂ ವಾಪಾಸ್ ಕೊಟ್ಟಿಲ್ಲ. ಒಟ್ಟು 10.20 ಲಕ್ಷ ರೂ. ಪಡೆದು ವಂಚಿಸಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.
ಹೆಸರಘಟ್ಟ ಮುಖ್ಯರಸ್ತೆಯ ಕಿರ್ಲೋಸ್ಕರ್ ಲೇಔಟ್‌ನಲ್ಲಿ ಹ್ಯಾಪಿ ಟು ಟ್ರಿಪ್ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಮಂಜುನಾಥ್‌ಗೆ ಗಜೇಂದ್ರಕುಮಾರ್ ಪರಿಚಯವಾಗಿತ್ತು. 2017ರ ಸೆಪ್ಟೆಂಬರ್‌ನಲ್ಲಿ ಆರೋಪಿ ಮಂಜುನಾಥ್, ವಿಧಾನಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಓಡಾಟಕ್ಕೆ ಕಾರುಗಳ ಸೇವೆ ಒದಗಿಸುವುದಕ್ಕೆ ಮೂರು ವರ್ಷಗಳ ಟೆಂಡರ್ ಏಜೆನ್ಸಿಗೆ ಸಿಕ್ಕಿದೆ.
ಇನೋವಾ ಕಾರಿಗೆ ತಿಂಗಳಿಗೆ 80 ಸಾವಿರ, ಸ್ವಿಫ್ಟ್ ಡಿಸೈರ್‌ಗೆ 71 ಸಾವಿರ ರೂ. ತಿಂಗಳ ಬಾಡಿಗೆ ಸಿಗಲಿದೆ. ಈ ಪ್ರಕ್ರಿಗೆ ಒಂದು ವಾಹನಕ್ಕೆ ಭದ್ರತಾ ಠೇವಣಿಯಾಗಿ 30 ಸಾವಿರ ರೂ.ಕಟ್ಟಬೇಕು ಎಂದು ನಂಬಿಸಿದ್ದು, ಆತನ ಬಳಿಯಿದ್ದ ಎರಡು ಕಾರುಗಳನ್ನು ಬಾಡಿಗೆಗೆ ಬಿಡುವಂತೆ ಕೇಳಿದ್ದಾನೆ.
ನಂಬಿದ ಗಜೇಂದ್ರ ತಮ್ಮ ಎರಡು ಕಾರುಗಳಿಗೆ ಭದ್ರತಾ ಠೇವಣಿಯಾಗಿ 60 ಸಾವಿರ ರೂ. ಕೊಟ್ಟಿದ್ದ. ಇದಾದ ಬಳಿಕ ಮಂಜುನಾಥ್ ಸೂಚನೆಯಂತೆ ಸ್ನೇಹಿತರಿಗೂ ವಿಷಯ ತಿಳಿಸಿ ಒಟ್ಟು 34 ಕಾರುಗಳಿಗೆ ತಲಾ 30 ಸಾವಿರ ರೂ.ಗಳನ್ನು ಕಟ್ಟಿಸಿದ್ದರು.
ಇದಾದ ಹಲವು ತಿಂಗಳು ಕಳೆದರೂ ಯಾವುದೇ ಕಾರುಗಳನ್ನು ಬಾಡಿಗೆಗೆ ಪಡೆಯದಿದ್ದಾಗ ಅನುಮಾನ ಬಂದು ಗಜೇಂದ್ರ ಸೇರಿದಂತೆ ಮತ್ತಿತರರು ವಿಧಾನಸೌಧಕ್ಕೆ ಬಂದು ವಿಚಾರಿಸಿದಾಗ ಸತ್ಯ ಹೊರಬಿದ್ದಿದೆ. ಈ ಕುರಿತು ಮಂಜುನಾಥ್‌ರನ್ನು ಪ್ರಶ್ನಿಸಿದಾಗ ಸಬೂಬು ಹೇಳಿದ್ದ. ಅಂತಿಮವಾಗಿ ದೂರುದಾಖಲಿಸಿದ್ದಾರೆ ಎಂದು ಪೊಲೀಸರು ಹೇಳಿದರು.