Advertisement

ವಿಳಂಬಿಸಲಿದೆ ಎಂಆರ್‌ಪಿಎಲ್‌ ನಾಲ್ಕನೇ ಹಂತ ವಿಸ್ತರಣೆ

09:08 AM Mar 05, 2020 | mahesh |

ಮಂಗಳೂರು: ಭೂಸ್ವಾಧೀನ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ್ದರಿಂದ ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ವಿಸ್ತರಣೆಗೆ ಒಟ್ಟು 1,050 ಎಕರೆ ಭೂಮಿ ಅಗತ್ಯವಿದ್ದು, ಭೂಸ್ವಾ ಧೀನ ಮಾಡಿಕೊಡುವಂತೆ ಎಂಆರ್‌ಪಿಎಲ್‌ ಸರಕಾರವನ್ನು ಕೋರಿತ್ತು. ಪೆರ್ಮುದೆ, ಕುತ್ತೆತ್ತೂರು, ತೆಂಕಎಕ್ಕಾರು, ಮೂಳೂರು ಮತ್ತು ಕಂದಾವರ ಗ್ರಾಮಗಳ 963 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಕೆಐಎಡಿಬಿಯು ಕಾರ್ಯ ಆರಂಭಿಸಿತ್ತು. ಆದರೆ ಹಲವು ಭೂಮಾಲಕರು ನ್ಯಾಯಾಲಯದ ಮೊರೆ ಹೊಕ್ಕಿರುವುದರಿಂದ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

Advertisement

ಮಾರ್ಚ್‌ ಗುರಿ ಅಸಾಧ್ಯ
20 ಸಾವಿರ ಕೋ.ರೂ. ವೆಚ್ಚದಲ್ಲಿ ನಾಲ್ಕನೇ ಯೂನಿಟ್‌ ಆರಂಭಿಸಲು ಎಂಆರ್‌ಪಿಎಲ್‌ 2016ರಲ್ಲಿಯೇ
ನಿರ್ಧರಿಸಿತ್ತು. ಭೂಸ್ವಾಧೀನದ ಬಳಿಕ ಕೇಂದ್ರ ಸರಕಾರದ ಅನುಮೋದನೆ ಪಡೆದು ಹೊಸ ಯೂನಿಟ್‌ ಆರಂಭವಾಗಲಿದೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಹೊಸ ಯೂನಿಟ್‌ ಕಾರ್ಯಾರಂಭಿಸಲಿದ್ದು, ಇದರಲ್ಲಿ ಹೊಸ ಸೌಲಭ್ಯಗಳ ನಿರ್ಮಾಣ, ಶೇ. 33ರಷ್ಟು ಹಸಿರುವನ ಅಭಿವೃದ್ಧಿ ಮತ್ತು ಪುನರ್ವಸತಿ ಸೌಕರ್ಯ ಇರಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ 2020ರ ಮಾರ್ಚ್‌ ಒಳಗೆ ಉದ್ದೇಶಿತ ಗುರಿ ಸಾಧನೆ ಬಹುತೇಕ ಕಷ್ಟಸಾಧ್ಯ ಎಂದು ಮೂಲಗಳು ತಿಳಿಸಿವೆ.

ರೈತರ ವಿರೋಧ
ವಿಸ್ತರಣೆಗೆ ಅಗತ್ಯವಿರುವ ಭೂಮಿ ನೀಡಲು ರೈತರು ವ್ಯಾಪಕ ವಿರೋಧ ವ್ಯಕ್ತಪಡಿಸಿ ಹೋರಾಟ, ಪ್ರತಿಭಟನೆ ನಡೆಸಿದ್ದರು. ಕೆಲವರು ಭೂಮಿ ನೀಡಲು ಸಿದ್ಧವಾಗಿದ್ದರೆ ಇನ್ನು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಧಿಸೂಚಿತ 862 ಎಕರೆ ಖಾಸಗಿ ಭೂಮಿಯಲ್ಲಿ 463 ಎಕರೆ ಭೂಸ್ವಾಧೀನ ಪೂರ್ಣಗೊಂಡಿದ್ದು, ಇದರಲ್ಲಿ 246 ಎಕರೆ ಭೂಮಿಯವರಿಗೆ ಪರಿಹಾರ ವಿತರಿಸಲಾಗಿದೆ. ಉಳಿದವರಿಗೆ ಇನ್ನಷ್ಟೇ ಸಿಗಬೇಕಿದೆ. ಕೃಷಿ ಭೂಮಿ ಸಂರಕ್ಷಣ ಸಮಿತಿ ಕಾರ್ಯದರ್ಶಿ ಲಾರೆನ್ಸ್‌ ಡಿ’ಕುನಾನ್ಹ, ಅವರು “ಉದಯವಾಣಿ’ ಜತೆಗೆ ಮಾತನಾಡಿ, ವಿಷಕಾರಕ ಕಂಪೆನಿ ನಮ್ಮ ಕೃಷಿ ಭೂಮಿಗೆ ಬರಲು ಬಿಡಲಾರೆವು’ ಎಂದು ತಿಳಿಸಿದ್ದಾರೆ.

ಎಂಆರ್‌ಪಿಎಲ್‌ನ ನಾಲ್ಕನೇ ಹಂತದ ವಿಸ್ತರಣೆಗೆ 963 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯ ವರೆಗೆ 463 ಎಕರೆ ಭೂಮಿ ಸ್ವಾಧೀನವಾಗಿದೆ. ಪರಿಹಾರ ವಿತರಣೆ ನಡೆಯುತ್ತಿದೆ.
– ಗೋಕುಲ್‌ದಾಸ್‌ ನಾಯಕ್‌, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ-ದ.ಕ.

– ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next