Advertisement

ನಾಲ್ಕು ತಾಲೂಕುಗಳ ಅಖಾಡದಲ್ಲಿ ಗುದ್ದಾಟ

04:47 PM Apr 08, 2018 | |

ಕಲಬುರಗಿ: ಎರಡು ಹೊಸ ತಾಲೂಕು, ಆಳಂದ ಮತ್ತು ಕಲಬುರಗಿ ತಾಲೂಕಿನ ಗ್ರಾಮೀಣ ಸೇರಿದಂತೆ ಒಟ್ಟಾರೆ ನಾಲ್ಕು ತಾಲೂಕುಗಳ ಗ್ರಾಮಗಳನ್ನು ಒಳಗೊಂಡ ಕಲಬುರಗಿ ಗ್ರಾಮೀಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದೆ.

Advertisement

128 ಹಳ್ಳಿ ಹಾಗೂ 30 ತಾಂಡಾಗಳು ಸೇರಿ ಕ್ಷೇತ್ರ ಒಳಗೊಂಡಿದೆ. ಈ ಮೊದಲಿದ್ದ ಶಹಾಬಾದ ಮೀಸಲು ಹಾಗೂ ಕಮಲಾಪುರ ಮೀಸಲು ಕ್ಷೇತ್ರ ಒಗ್ಗೂಡಿ 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಗೊಂಡು ಕಲಬುರಗಿ ಗ್ರಾಮೀಣ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಮೊದಲ ಹಾಗೂ ಹಿಂದಿನ ಮೂರು ಸಲ ಸೇರಿ ಸತತ ನಾಲ್ಕು ಬಾರಿ ರೇವು ನಾಯಕ ಬೆಳಮಗಿ ಜಯ ಸಾಧಿಸಿದ್ದಾರೆ. 2013ರಲ್ಲಿ ಕಾಂಗ್ರೆಸ್‌ ನ ಜಿ. ರಾಮಕೃಷ್ಣ 40075 ಮತ ಪಡೆದು ಬೆಳಮಗಿ ಅವರನ್ನು 7209 ಮತಗಳ ಅಂತರದಿಂದ ಸೋಲಿಸಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಕಲಬುರಗಿ ತಾಲೂಕಿನ ಹಳ್ಳಿಗಳು ಹಾಗೂ ಆಳಂದ ತಾಲೂಕಿನ ಹಳ್ಳಿಗರು ಶಹಾಬಾದ-ಕಮಲಾಪುರ ನೂತನ ಎರಡು ತಾಲೂಕಿನ ಹಳ್ಳಿಗಳನ್ನು ಒಗ್ಗೂಡಿರುವ ಈ ಕ್ಷೇತ್ರದಲ್ಲಿ ಶಹಾಬಾದ ನಗರಸಭೆ ಬರುತ್ತದೆ. ಶಹಾಬಾದ, ಕಮಲಾಪುರ, ಮಹಾಗಾಂವ ಪ್ರಮುಖವಾದ ಪಟ್ಟಣಗಳು. ಎಲ್ಲ ಕ್ಷೇತ್ರಗಳಂತೆ ಇಲ್ಲೂ ಲಿಂಗಾಯಿತರ ಪ್ರಾಬಲ್ಯ ಇದೆ. ಕ್ಷೇತ್ರದಲ್ಲಿ ಲಿಂಗಾಯತರು ಸುಮಾರು 70 ಸಾವಿರ,
ಲಂಬಾಣಿ ಸುಮಾರು 32 ಸಾವಿರ, ಪರಿಶಿಷ್ಟ ಜಾತಿ ಸುಮಾರು 60 ಸಾವಿರ, ಮುಸ್ಲಿಂ ಸುಮಾರು 36 ಸಾವಿರ, ಕುರುಬ ಮತ್ತು ಕಬ್ಬಲಿಗ ಸುಮಾರು 35 ಸಾವಿರ ಹಾಗೂ ಇತರೆ ಸುಮಾರು 10 ಸಾವಿರ ಮತದಾರರಿದ್ದಾರೆ. 1994ರಿಂದ ಸತತ ನಾಲ್ಕು ಸಲ ಈ ಕ್ಷೇತ್ರದಿಂದ ರೇವು ನಾಯಕ ಬೆಳಮಗಿ ಜಯ ಸಾಧಿಸಿ 7 ವರ್ಷ ಕಾಲ ಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲಿಯೂ ಜಿ. ರಾಮಕೃಷ್ಣ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಕೆಲವು ಕೆಲಸ ಮಾಡಿದ್ದಾರೆ.

ಆದರೂ ಇನ್ನೂ ಕೆಲಸ ಮಾಡಬೇಕು ಎಂಬುದನ್ನು ಕ್ಷೇತ್ರದಲ್ಲಿ ಸುತ್ತು ಹಾಕಿದಾಗ ಕಂಡು ಬರುತ್ತಿದೆ. ಶಾಸಕರ ಪುತ್ರ ವಿಜಯಕುಮಾರ ಈ ಸಲ ಕಾಂಗ್ರೆಸ್‌ ಕಣದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ಉಳಿದಂತೆ ಜಿಪಂ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಟಗಿ, ಶಾಮ ನಾಟೀಕಾರ ಸ್ಪರ್ಧಿಸುವ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ಮಾಜಿ ಸಚಿವರಾದ ರೇವು ನಾಯಕ ಬೆಳಮಗಿ, ಬಾಬುರಾವ ಚವ್ಹಾಣ, ಜಿಪಂ ಸದಸ್ಯ ಬಸವರಾಜ ಮತ್ತಿಮೂಡ, ಮುಖಂಡರಾದ ನಾಮದೇವ ರಾಠೊಡ ಕರಹರಿ ಹೆಸರು ಕೇಳಿ ಬರುತ್ತಿದೆ. ಮತ್ತಿಮೂಡ ಅವರು ಕ್ಷೇತ್ರದಲ್ಲಿ ಹಗಲಿರಳು ಸಂಚರಿಸುತ್ತಿದ್ದಾರೆ. 

ಕ್ಷೇತ್ರದ ಬೆಸ್ಟ್‌ ಏನು?
ಕ್ಷೇತ್ರ ವ್ಯಾಪ್ತಿಯಲ್ಲಿ ಶಹಾಬಾದ ಹಾಗೂ ಕಮಲಾಪುರ ಎರಡು ನೂತನ ತಾಲೂಕುಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಗಂಡೋರಿ ಕಾಲುವೆಗಳ ಆಧುನೀಕರಣಕ್ಕಾಗಿ 165 ಕೋಟಿ ರೂ. ಬಂದಿದೆ. ಶಹಾಬಾದ ನಗರಸಭೆಗೆ ನಗರೋತ್ಥಾನ ಯೋಜನೆ ಅಡಿ 14 ಹಾಗೂ 25 ಕೋಟಿ ರೂ. ಬಿಡುಗಡೆಯಾಗಿದೆ. ಕುರಿಕೋಟಾ ಬಳಿ ಬೆಣ್ಣೆತೋರಾ ಹಳ್ಳಕ್ಕೆ ಮಗದೊಂದು ಸೇತುವೆ ನಿರ್ಮಾಣಗೊಳ್ಳುತ್ತಿರುವುದು ಉತ್ತಮ ಕಾರ್ಯ ಎನ್ನಬಹುದು.

Advertisement

ಕ್ಷೇತ್ರದ ದೊಡ್ಡ ಸಮಸ್ಯೆ?
ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸ ಸರಡಗಿ ಬಳಿ ವಿಮಾನ ನಿಲ್ದಾಣ ಪೂರ್ಣಗೊಂಡು ವಿಮಾನ ಹಾರಾಟ ಶುರುವಾಗದಿರುವುದು, ಕ್ಷೇತ್ರ ನಾಲ್ಕು ತಾಲೂಕುಗಳಿಗೆ ಹರಿದು ಹಂಚಿ ಹೋಗಿ ಆಡಳಿತ್ಮಾಕವಾಗಿ ತೊಂದರೆಗೆ ಒಳಗಾಗುವುದು, ಕ್ಷೇತ್ರದಲ್ಲಿ ಇನ್ನೂ ರಸ್ತೆಗಳು ಗುಣಮಟ್ಟದಲ್ಲಿ ಅಭಿವೃದ್ಧಿಯಾಗದಿರುವುದು ಕ್ಷೇತ್ರದ ದೊಡ್ಡ ಸಮಸ್ಯೆಗಳಾಗಿವೆ.

ಶಾಸಕರು ಏನಂತಾರೆ?
ನೂತನ ತಾಲೂಕುಗಳು ಅಸ್ತಿತ್ವಕ್ಕೆ ಬಂದಿರುವುದು ಆಡಳಿತಾಭಿವೃದ್ಧಿಗೆ ಪೂರಕವಾಗಿದೆ. ಗಂಡೋರಿ ನಾಲಾ ಅಭಿವೃದ್ಧಿಗೆ ಚಾಲನೆ ನೀಡಿರುವುದು, ಕುರಿಕೋಟಾ ಬಳಿ ಮಗದೊಂದು ಸೇತುವೆ ನಿರ್ಮಾಣಗೊಂಡಿರುವುದು. ಶಹಾಬಾದ್‌ ನಗರಸಭೆಗೆ ನಗರೋತ್ಥಾನ ಯೋಜನೆ ಅಡಿಅಭಿವೃದ್ಧಿಗೊಳ್ಳುತ್ತಿರುವುದು ಸೇರಿದಂತೆ ಇತರ ಹತ್ತಾರು ಕಾರ್ಯಗಳು ಕ್ಷೇತ್ರದಲ್ಲಾಗಿವೆ. 
ಜಿ. ರಾಮಕೃಷ್ಯ

ಕ್ಷೇತ್ರ ಮಹಿಮೆ
ದೇವನ ತೆಗನೂರಿನ ಶಿವಯೋಗೇಶ್ವರ, ಶಹಾಬಾದ ಶರಣಬಸವೇಶ್ವರ, ಹಳೇ ಶಹಾಬಾದನ ರಮಣಾದೇವಿ, ಮರತೂರಿನ ಮಿತಾಕ್ಷರ, ಮುತ್ಯಾನ ಬಬಲಾದಮಠ, ನರೋಣಾ ಕ್ಷೇಮಲಿಂಗೇಶ್ವರ ಕ್ಷೇತ್ರ, ಮಹಾಗಾಂವ ವಾಡಿಯ ಕಂಟಿ ಹನುಮಾನ ದೇವಸ್ಥಾನ, ಕನ್ನಡಗಿ ಮಲ್ಲಿಕಾರ್ಜುನ ದೇವಾಲಯಗಳು ಕ್ಷೇತ್ರದ ವ್ಯಾಪ್ತಿಯಲ್ಲಿವೆ

ಶಹಾಬಾದ ನಗರದ ಮುಖ್ಯರಸ್ತೆಗಳು ಡಾಂಬರೀಕರಣಗಳಾಗಿ ಚಿತ್ರಣ ಬದಲಾಗಿದೆ. ಆದರೆ ಹೊನಗುಂಟಾ ವೃತ್ತದಿಂದ-ನಿಜಾಮ ಬಜಾರನವರೆಗೆ ರಸ್ತೆ ಹದಗೆಟ್ಟು ಹೋದರೂ ನಿರ್ಮಾಣ ಮಾಡುವಲ್ಲಿ ಎಡವಿದ್ದಾರೆ. ನಗರದಲ್ಲಿ ಒಂದು ಸಾರ್ವಜನಿಕ, ಮೂತ್ರಾಲಯ ಹಾಗೂ ಶೌಚಾಲಯ ನಿರ್ಮಾಣವಾಗಿಲ್ಲ. ಇದರ ಕಡೆ ಶಾಸಕರು ಲಕ್ಷ್ಯ ವಹಿಸಿದರೆ ಚೆನ್ನಾಗಿರುತ್ತಿತ್ತು. ಇದಲ್ಲದೇ ಬಹುತೇಕ ಕಡೆ ಶಾಸಕರ ಬೆಂಬಲಿಗರು ಗುತ್ತಿಗೆ ಪಡೆದಿರುವುದರಿಂದ ಕಾಮಗಾರಿಗಳು ಕಳಪೆ ಮಟ್ಟದಾಗಿವೆ.
ಶರಣಗೌಡ ಪಾಟೀಲ

ಹಲವು ದಶಕಗಳ ಬೇಡಿಕೆಯಾಗಿದ್ದ ತೊನಸನಹಳ್ಳಿ(ಎಸ್‌) ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪ್ರಾರಂಭವಾಗಿಲ್ಲ. ನಗರದಲ್ಲಿ ನಗರೋತ್ಥಾನ ಯೋಜನೆಯಲ್ಲಿಬಹಳಷ್ಟು ಕಾಮಗಾರಿಗಳಾಗಿವೆ. ನೂತನ ಪೊಲೀಸ್‌ ಠಾಣೆ, ಡಿವೈಎಸ್‌ಪಿ ಕಚೇರಿ ನಿರ್ಮಾಣವಾಗಿವೆ.
ಚಂದ್ರಕಾಂತ ನಾಟೇಕಾರ

ಮಹಾಗಾಂವಕ್ಕೆ ಹತ್ತಿಕೊಂಡಂತಿರುವ ಚಂದ್ರಾನಗರಕ್ಕೆ ರಸ್ತೆಯೇ ಇರಲಿಲ್ಲ. ಈಗಿನ ಶಾಸಕರು ಮಾಡಿಸಿದ್ದಾರೆ. ರಸ್ತೆಗಳ ಅಭಿವೃದ್ಧಿಯಾಗಿವೆ. ಆದರೆ ಗ್ರಾಮಾಂತರ ಭಾಗದಲ್ಲಿ ಶೌಚಾಲಯ ನಿರ್ಮಾಣವಾದರೆ ಅಭಿವೃದ್ಧಿಗೆ ಮತ್ತಷ್ಟು ಪೂರಕವಾಗುತ್ತದೆ. 
ಗುರಣ್ಣ ದಂಡಗುಲಕರ್‌

ಸ್ವಾತಂತ್ರ್ಯ ಪೂರ್ವದಿಂದ ನಮ್ಮ ಅಂಬಲಗಾ ತಾಂಡಾಕ್ಕೆ ರಸ್ತೆಯೇ ಇರಲಿಲ್ಲ. ತಾಂಡಾದ ನಿವಾಸಿಗಳೆಲ್ಲರೂ ತೀವ್ರ ತೊಂದರೆ ಅನುಭವಿಸುತ್ತಿದ್ದೇವು. ಈಗ ಡಾಂಬರ್‌ ರಸ್ತೆಯಾಗಿದೆ. ಇದರಿಂದ ಬಸ್‌ ಸೌಕರ್ಯ ಕಾಣುವಂತಾಗಿದೆ. ಅದೇ ರೀತಿ ಕಂಟಿ ಹನುಮಾನ ಮಂದಿರಕ್ಕೂ ರಸ್ತೆಯಾಗಿದೆ.
ಸಂಜುಕುಮಾರ ಚವ್ಹಾಣ 

ಹಣಮಂತರಾವ ಭೈರಾಮಡಗಿ 

Advertisement

Udayavani is now on Telegram. Click here to join our channel and stay updated with the latest news.

Next