Advertisement

ರಾಜಕೀಯದೇಟಿಗೆ ಕಾಣೆಯಾಗ್ತಿವೆ ಅಡಿಗಲ್ಲುಗಳು

05:58 PM Sep 15, 2021 | Team Udayavani |

ಸಿಂಧನೂರು: ಯಾವುದೇ ಕಟ್ಟಡ ಉದ್ಘಾಟಿಸಿದ ಬಳಿಕ ಅಲ್ಲಿ ಅಡಿಗಲ್ಲು ಕಾಣಿಸುವುದು ಸಾಮಾನ್ಯ. ಈಗೀಗ ಅಡಿಗಲ್ಲುಗಳೂ ಕಾಣೆಯಾಗುತ್ತಿವೆ. ಹೌದು. ಶಿಷ್ಟಾಚಾರ ಪಾಲನೆ ಹಾಗೂ ಆಡಳಿತ ವರ್ಗದ ಪ್ರಭಾವ ಈ ರೀತಿಯ ಬೆಳವಣಿಗೆಗೆ ನಾಂದಿ ಹಾಡಿವೆ. ಇಲ್ಲಿನ ಶಹರ ಪೊಲೀಸ್‌ ಠಾಣೆ ಉದ್ಘಾಟನೆ ಸಂದರ್ಭವೂ ಇಂತಹ ಪ್ರಸಂಗ ತಲೆದೋರಿತ್ತು.

Advertisement

ಮಸ್ಕಿ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್‌ ಅವರ ಹೆಸರನ್ನು ಶಹರ ಪೊಲೀಸ್‌ ಠಾಣೆ ನೂತನ ಕಟ್ಟಡ ಉದ್ಘಾಟನೆ ಅಡಿಗಲ್ಲಿನಲ್ಲಿ ಬರೆಯಿಸಲಾಗಿತ್ತು ಎಂಬುದೇ ಚರ್ಚೆಯಾಗಿತ್ತು. ಬಳಿಕ ಅಡಿಗಲ್ಲು ನಾಪತ್ತೆಯಾಯಿತು.

ರಾಮತ್ನಾಳಲ್ಲೂ ಅದೇ ಘಟನೆ: ತಾಲೂಕಿನ ರಾಮತ್ನಾಳ ಗ್ರಾಮದಲ್ಲೂ ಕೂಡ ಸುಸಜ್ಜಿತ ಗ್ರಾಪಂ ಕಟ್ಟಡ ನಿರ್ಮಿಸಲಾಗಿದ್ದು, ಅಲ್ಲಿ ಕೂಡ ಅಡಿಗಲ್ಲು ಜಗಳ ಅಧಿ ಕಾರಿಗಳ ನೆಮ್ಮದಿ ಕದಡಿದೆ. ಪರಿಣಾಮ ಅಲ್ಲೀಗ ಅಡಿಗಲ್ಲು ಕೂಡ ಉಳಿದಿಲ್ಲ. 20 ಸಾವಿರ ರೂ. ಖರ್ಚು ಮಾಡಿ ಕೆತ್ತಿಸಿದ ಕಲ್ಲನ್ನು ವಿಳಾಸವೇ ಇಲ್ಲದಂತೆ ಕಳುಹಿಸಲಾಗಿದೆ. ಸ್ಥಳೀಯರು ಹೇಳುವ ಪ್ರಕಾರ, ಅಡಗಲ್ಲನ್ನು ಪುಡಿ ಪುಡಿ ಮಾಡಿ ಟಂಟಂನಲ್ಲಿ ತುಂಬಿಸಿ ಹೊರಗೆ ಬಿಸಾಡಲಾಗಿದೆ. ಎಲ್ಲ ಸಂದರ್ಭದಲ್ಲೂ ಸಾರ್ವಜನಿಕ ಹಣ ಪೋಲಾಗುತ್ತಿದ್ದರೂ ಕೆತ್ತಿಸಿದ ಅಡಿಗಲ್ಲುಗಳು ಉಳಿಯದಾಗಿವೆ.

ಮಿನಿ ವಿಧಾನಸೌಧಕ್ಕೂ ಇಲ್ಲ ಅಡಿಗಲ್ಲು:
ಮಾನ್ವಿ ಶಾಸಕರು ಕೂಡ ತಮ್ಮ ತಾಲೂಕಿನಲ್ಲಿ ಮಿನಿ ವಿಧಾನಸೌಧ ಇಲ್ಲವೆಂದು ವೇದನೆ ತೋಡಿಕೊಂಡು ಸಿಂಧನೂರಿನ ಮಿನಿ ವಿಧಾನಸೌಧವನ್ನು ಸುಪ್ರೀಂಕೋರ್ಟ್‌ ಮಾದರಿ ಕಟ್ಟಡವೆಂದು ಬಣ್ಣಿಸಿದ್ದರು. ಅಂತಹ ಕಟ್ಟಡಕ್ಕೂ ಕೂಡ ಅಡಿಗಲ್ಲು ಇಲ್ಲವಾಗಿದೆ. ಯಾರ ಹೆಸರನ್ನು ಕೆತ್ತಿಸಬೇಕು ಎಂಬುದು ರಾಜಕೀಯ ವಲಯದಲ್ಲಿ ಗೊಂದಲ ಸೃಷ್ಟಿಸಿದೆ. ಆ ಕಟ್ಟಡ ಉದ್ಘಾಟಿಸಿದ ದಿನ ಯಾರು ಅಧಿಕಾರದಲ್ಲಿದ್ದರೂ ಎಂಬುದನ್ನು ಹುಡುಕಾಡಬೇಕಿದೆ. ಸುಲಭವಾಗಿ
ಶಾಸಕರು ಯಾರೆಂದು ಗೊತ್ತಾಗುತ್ತದೆ. ಇಲ್ಲಿ ಪ್ರಶ್ನೆ ಏರ್ಪಡುತ್ತಿರುವುದೇ ಶಿಷ್ಟಾಚಾರ. ಇದೇ ಕಾರಣಕ್ಕೆ ತಾಲೂಕಿನ ಬಹುತೇಕ ಕಟ್ಟಡಗಳು ಅಡಿಗಲ್ಲು ಶೂನ್ಯವಾಗುತ್ತಿವೆ. ರಾಜಕಾರಣಿಗಳು ಸಾಧನೆಯ ಅಡಿಗಲ್ಲು ಎಂದು ಭಾವಿಸಬೇಕಾದ ರೀತಿಯಲ್ಲಿ ಇರಬೇಕಿದ್ದ ಕಲ್ಲುಗಳು ಕಾಣೆಯಾಗುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಕಟ್ಟಡಗಳಲ್ಲಿಲ್ಲ ಉದ್ಘಾಟಕರ ವಿಳಾಸ 
ರಾಜಕೀಯ ಜಿದ್ದಾಜಿದ್ದಿ ಪರಿಣಾಮವಾಗಿ ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳಿಗೆ ವಿಳಾಸವೇ ಇಲ್ಲದಂತಾಗಿದೆ. ಆದರೆ ಈ ಹಿಂದೆ ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಉದ್ಘಾಟನೆಯಾದ ಅಡಿಗಲ್ಲುಗಳು ಕಟ್ಟಡದ ಇತಿಹಾಸ ಹೇಳುತ್ತಿವೆ. ಅಡಿಗಲ್ಲು, ಉದ್ಘಾಟನೆಯ ದಿನ ಹಾಕುವ ಕಲ್ಲಿಗೂ ಮಹತ್ವ ಇಲ್ಲದಂತಾಗಿರುವ ಪರಿಣಾಮ ರಾಜಕೀಯ ಏಟಿಗೆ ಕಲ್ಲುಗಳು ಕಾಣೆಯಾಗುತ್ತಿವೆ.

Advertisement

ಅಡಿಗಲ್ಲು ಮಾಡಿಸಲಾಗಿತ್ತು. 20 ಸಾವಿರ ರೂ. ಖರ್ಚಾಗಿತ್ತು. ಯಾವುದೋ ಕಾರಣಕ್ಕೆ ಅದನ್ನು ಪ್ರತಿಷ್ಠಾಪನೆ ಮಾಡಿಲ್ಲ. ಅದು ತುಂಡಾದ ಹಿನ್ನೆಲೆಯಲ್ಲಿ ಎಲ್ಲೋ ಹೋಗಿದೆ.
ಆಶಾ, ಪಿಡಿಒ, ರಾಮತ್ನಾಳ ಗ್ರಾಪಂ

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next