Advertisement
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದ ಗೌಡ ಉದ್ಘಾಟಿಸಿ ಮಾತನಾಡಿ, ರಾಜ್ಯ, ರಾಷ್ಟ್ರದಲ್ಲಿ ಸಾವಿರಾರು ಭಾಷೆ, ಜನಾಂಗಗಳಿದ್ದು, ಅದರಂತೆ ಅರೆಭಾಷೆಯೂ ಒಂದಾಗಿದೆ. ಈ ಅರೆಭಾಷೆ ಸಂಸ್ಕೃತಿ ಮತ್ತು ಸಂಸ್ಕಾರವು ಸಮಾಜದ ಅಡಿಗಲ್ಲು ಆಗಿದೆ ಎಂದರು. ರಾಜ್ಯದಲ್ಲಿಯೇ ಕೊಡವ, ಅರೆಭಾಷೆ, ತುಳು, ಕೊಂಕಣಿ, ಹೀಗೆ ಒಂದೊಂದು ಸಮುದಾಯಕ್ಕೆ ಭಾಷೆ ಇದ್ದು, ಭಾಷೆ ಇದ್ದಲ್ಲಿ ಮಾತ್ರ ಸಮಾಜ ಉಳಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಗೌಡ ಸಮಾಜ ತನ್ನದೇ ಆದ ಕೊಡುಗೆ ನೀಡಿದ್ದು, 500 ವರ್ಷಗಳ ಹಿಂದೆಯೇ ಬೆಂಗಳೂರು ನಿರ್ಮಾಣ ಮಾಡಿದ ಆದರ್ಶ ಆಡಳಿತಗಾರ ಕೆಂಪೇಗೌಡ, ಸ್ವಾತಂತ್ರ್ಯ ಹೋರಾಟ ಮಾಡಿದ್ದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಹೀಗೆ ಹಲವರು ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಾಗೆಯೇ ಆದಿಚುಂಚನಗಿರಿ ಮಠ 400ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಸಮಾಜದ ಎಲ್ಲ ವರ್ಗದ ಜನರಿಗೆ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿದೆ ಎಂದರು. ಸಂಸ್ಕೃತಿ ತಿಳಿಸಿ
ಅರೆಭಾಷೆ ಎರಡನೇ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಭವಾನಿ ಶಂಕರ ಹೊದ್ದೆಟ್ಟಿ ಮಾತನಾಡಿ, ಅರೆಭಾಷೆ ಪುಸ್ತಕಗಳನ್ನು ಕೊಂಡು ಓದಬೇಕು ಎಂದು ಸಲಹೆ ಮಾಡಿದರು. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಮಕ್ಕಳು ಟಿವಿ ಹಾಗೂ ಮೊಬೈಲ್ ಗೀಳು ಬಿಡಬೇಕು. ಮಕ್ಕಳಿಗೆ ಅರೆಭಾಷೆ ಸಂಸ್ಕೃತಿಯನ್ನು ತಿಳಿಸಬೇಕು, ಕಲಿಸಬೇಕು ಮತ್ತು ಮಾತನಾಡಿಸಬೇಕು ಎಂದರು.
Related Articles
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಣ್ಣ ಸಣ್ಣ ಭಾಷೆಗಳನ್ನು ಉಳಿಸಿ ಬೆಳೆಸಬೇಕಿದೆ. ಆ ನಿಟ್ಟಿನಲ್ಲಿ ಅರೆಭಾಷೆಯನ್ನು ಉಳಿಸಬೇಕಿದೆ ಎಂದರು. ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ವತಿಯಿಂದ ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಕ್ರಮಗಳು ಜರಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸುವಂತಾಗಬೇಕು ಎಂದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಷ್ಟ್ರ ಅನೇಕತೆಯಲ್ಲಿ ಏಕತೆ ಹೊಂದಿದ್ದು, ಅರೆಭಾಷೆ ಬಗ್ಗೆ ಅಭಿಮಾನವಿರಲಿ, ಜತೆಗೆ ಸ್ವಾಭಿಮಾನವಿರಲಿ, ಆದರೆ ದುರಾಭಿಮಾನ ಬೇಡ ಎಂದರು.
Advertisement
ಸಮ್ಮೇಳನ ಸ್ಫೂರ್ತಿದಾಯಕಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ದೇಶದಲ್ಲಿ ಸಾಕಷ್ಟು ಭಾಷೆ, ಉಪ ಭಾಷೆಗಳಿದ್ದು, ಅದರಲ್ಲಿ ಅರೆಭಾಷೆಯೂ ಒಂದಾಗಿದೆ. ಅಕಾಡೆಮಿ ಕಾರ್ಯ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಕಥೆ, ಕಾವ್ಯ, ನಾಟಕ ಮತ್ತಿತರ ಚಟುವಟಿಕೆಯಿಂದ ಕೂಡಿರುತ್ತವೆ. ಇದರಿಂದ ಸಾಹಿತ್ಯ ಸಮ್ಮೇಳನ ಸ್ಫೂರ್ತಿದಾಯಕವಾಗಿರುತ್ತದೆ. ಇದರಿಂದ ಭಾಷೆ ಉಳಿಸಿ ಬೆಳೆಸಲು ಸಾಧ್ಯ ಎಂದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಪಿ.ಸಿ. ಜಯರಾಮ ಮಾತನಾಡಿ, ಈ ಹಿಂದಿನ ಅವಧಿಯಲ್ಲಿ 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಆಲೂರು ಸಿದ್ದಾಪುರದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು, ಅದರಂತೆ ಊರಿನ ಜನರ ಮನವಿಯಂತೆ ಈಗಿನ ಅಧ್ಯಕ್ಷರು ಇಲ್ಲಿಯೇ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅರೆಭಾಷೆ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಕೆ.ಆರ್. ಗಂಗಾಧರ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಒಂದು ನಾಣ್ಯದ ಎರಡು ಮುಖವಿದ್ದಂತೆ, ಆದ್ದರಿಂದ ಅರೆಭಾಷೆಯನ್ನು ಮಾತನಾಡಬೇಕು, ಬರೆಯಬೇಕು ಮತ್ತು ಓದಬೇಕು ಎಂದವರು ಸಲಹೆ ಮಾಡಿದರು. ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿದರು. ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷೆ ಸರೋಜಮ್ಮ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಆಲೂರು ಸಿದ್ದಾಪುರ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಿನ್ನಸ್ವಾಮಿ ಉಪಸ್ಥಿತರಿದ್ದರು. ಕಡ್ಯದ ಶ್ಯಾಮಲಾ ತಾರಣಯ್ಯ ಪ್ರಾರ್ಥಿಸಿದರು. ಅಕಾಡೆಮಿ ಸದಸ್ಯರಾದ ಧನಂಜಯ ಅಗೋಳಿಕಜೆ ಸ್ವಾಗತಿಸಿದರು, ಪಟ್ಟಡ ಲೀಲಾ ಕುಮಾರ್ ಮತ್ತು ಕಡ್ಲೆರ ತುಳಸಿ ಮೋಹನ್ ಅವರು ನಿರೂಪಿಸಿದರು. ಡಾ| ಕೂಡಕಂಡಿ ದಯಾನಂದ ಅವರು ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಅಮ್ಮಾಜೀರ ಕಿರಣ್ ಅವರು ಸ್ಮರಣ ಸಂಚಿಕೆ ಸಂಪಾದಕರ ನುಡಿಗಳನ್ನಾಡಿದರು. ಕುಯ್ಯಮುಡಿ ಜಯಕುಮಾರ್ ವಂದಿಸಿದರು. ಗಮನ ಸೆಳೆದ ಮೆರವಣಿಗೆ
ಸಂಗಯ್ಯನಪುರ ಗ್ರಾಮದೇವತೆ ದೇವಸ್ಥಾನದಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭವಾನಿಶಂಕರ ಹೊದ್ದೆಟ್ಟಿ ಅವರನ್ನು ಸಾಂಪ್ರದಾಯಿಕವಾಗಿ ಮೆರವಣಿಗೆ ಮೂಲಕ ಕರೆತರಲಾಯಿತು. ಕೆದಂಬಾಡಿ ಈರಪ್ಪ ಉದ್ಘಾಟಿಸಿದರು. ನಿವೃತ್ತ ಯೋಧ ಹುಲಿಮನೆ ಬೋಪಯ್ಯ ನಡೆಸಿಕೊಟ್ಟರು. ಸಮ್ಮೇಳನ ದ್ವಾರವನ್ನು ಹುಲಿಮನೆ ಮಾದಪ್ಪ ಉದ್ಘಾಟಿಸಿದರು. ರಾಷ್ಟ್ರ ಧ್ವಜಾರೋಹಣವನ್ನು ಗಣಗೂರು ಗ್ರಾ.ಪಂ. ಅಧ್ಯಕ್ಷೆ ಸವಿತಾ ಸುಕುಮಾರ್, ಸಮ್ಮೇಳನದ ಧ್ವಜಾರೋಹಣವನ್ನು ಆಲೂರು ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ವೀಣಾ ರಮೇಶ್ ನೆರವೇರಿಸಿದರು. ಪುಸ್ತಕ ಪ್ರದರ್ಶನವನ್ನು ಗೋಪಾಲಪುರ ತಾ.ಪಂ. ಕ್ಷೇತ್ರದ ಸದಸ್ಯೆ ಲೀಲಾವತಿ ಮಹೇಶ್, ವಸ್ತು ಪ್ರದರ್ಶನ ಮಳಿಗೆಗಳನ್ನು ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿ ಅಧ್ಯಕ್ಷೆ ಸರೋಜಮ್ಮ ಉದ್ಘಾಟಿಸಿದರು. ಪುಸ್ತಕಗಳ ಬಿಡುಗಡೆ
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಲಾಗುತ್ತಿರುವ ಹಿಂಗಾರ ತ್ತೈಮಾಸಿಕ ಪುಸ್ತಕ, ಐಂಬರ, ಎನ್.ಜಿ. ಕಾವೇರಮ್ಮ ಅವರು ಬರೆದಿರುವ ಅರೆಭಾಷೆ ಕಾದಂಬರಿ ಪುಂಸ್ತ್ರೀ, ಸಂಗೀತ ರವಿರಾಜ್ ಅವರು ಬರೆದಿರುವ ಕಲ್ಯಾಣ ಸ್ವಾಮಿ, ಕಟ್ರತನ ಲಲಿತಾ ಅಯ್ಯಣ್ಣ ಅವರು ಬರೆದಿರುವ ಅರೆಭಾಷೆ ಕಥಾ ಸಂಕಲನ ಅಪೂರ್ವ ಸಂಗಮ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.