ವಿಶ್ವದ ಅತ್ಯಂತ ಪುರಾತನವಾದ ಭಾರತೀಯ ಸಂಸ್ಕೃತಿಯಲ್ಲಿ 21ನೇ ಶತಮಾನದ ಈ ಕಾಲದಲ್ಲೂ ಕೂಡ ಅವಿಭಕ್ತ ಕುಟುಂಬಗಳು ದೇಶದ ಯಾವ ಮೂಲೆಗಳಲ್ಲಿ ಹುಡುಕಿದರೂ ಸಿಗುತ್ತವೆ. ಭಾರತೀಯ ಸಂಸ್ಕೃತಿಯ ಭದ್ರ ಬುನಾದಿಯಾಗಿರುವ ಅವಿಭಕ್ತ ಕುಟುಂಬ ಪದ್ಧತಿಯಲ್ಲಿ ಹಿರಿಯರಿಗೆ ಕಿರಿಯರಿಂದ ಸಿಗುವ ಗೌರವ, ಸ್ಥಾನಮಾನ ಮತ್ತು ಹಿರಿಯರಿಂದ ಕಿರಿಯ ರಿಗೆ ಸಿಗುವ ಮಾರ್ಗದರ್ಶನ, ಅನು ಭವಾಮೃತಗಳು, ಹಿತೋಪದೇಶಗಳು ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಗೌರವಿಸುವಂತೆ ಮಾಡಿದೆ.
ಪ್ರಾಚೀನ ಭಾರತದ ಇತಿಹಾಸ, ಕೌಟುಂಬಿಕ ಹಿನ್ನೆಲೆಗಳತ್ತ ದೃಷ್ಟಿ ಹಾಯಿಸಿ ದಾಗ ಇವು ಅವಿಭಕ್ತ ಕುಟುಂಬಗಳ ಹಿತಾಸಕ್ತಿಗೆ ಹೆಚ್ಚಿನ ಮಹತ್ವ ಮತ್ತು ರಕ್ಷಣೆ ನೀಡುತ್ತ ಬಂದಿರುವುದನ್ನು ನಾವು ಕಾಣಬಹುದು. ಅವಿಭಕ್ತ ಕುಟುಂಬಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಹೆಚ್ಚು ಸ್ವಾವ ಲಂಬಿಯಾಗಿದ್ದವು. ಇಂತಹ ಕುಟುಂಬಗಳ ಸದಸ್ಯರಿಗೆ ಸಮಾಜ ದಲ್ಲಿ ವಿಶೇಷವಾದ ಗೌರವ, ಮನ್ನಣೆ ದೊರಕುತ್ತಿತ್ತು. ಅಷ್ಟು ಮಾತ್ರ ವಲ್ಲದೆ ಈ ಕುಟುಂಬಗಳೂ ಕೇವಲ ತಮ್ಮ ಸಮುದಾಯದ ಹಿತರಕ್ಷಣೆಗೆ ಸೀಮಿತ ವಾಗದೆ ಇಡೀ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿತ್ತು. ಈ ಕಾರಣದಿಂದಾಗಿಯೇ ಇಂತಹ ಕುಟುಂಬಗಳು ಮತ್ತವುಗಳ ಸದಸ್ಯರಿಗೆ ಆ ಊರಿನಲ್ಲಿ ಸ್ಥಾನಮಾನ ಗಳು ಲಭಿಸುತ್ತಿತ್ತು.
ಆದರೆ ಇಂದು ಎಲ್ಲೋ ಮನಸ್ಸಿನ ಮೂಲೆಯಲ್ಲಿ ಅಡಗಿದ ಸಂಶಯ, ಅಹಂಕಾರ, ಅಸೂಯೆ ಎಂಬ ಮಾಯಾ ಜಾಲದಲ್ಲಿ ಸಿಲುಕಿ, ಒಟ್ಟಾಗಿ ಬಾಳಿ ಬದುಕ ಬೇಕಾದ ಅವಿಭಕ್ತ ಕುಟುಂಬ ಗಳು ಇಂದು ವಿಭಕ್ತವಾಗುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತೆ ದಾಯಾದಿ ಕಲಹ, ಅತ್ತೆ-ಸೊಸೆಯಂದಿರ ಜಗಳ, ಅಸ್ತಿ, ಅಂತಸ್ತಿಗಾಗಿ ಕಾದಾಟ, ಹೊಡೆ ದಾಟಗಳು ಭಾರತೀಯ ಕುಟುಂಬ ಸಂಸ್ಕೃತಿ ಮತ್ತು ಮಾನವ ಕುಲಕ್ಕೆ ಇಟ್ಟ ಕಪ್ಪು ಚುಕ್ಕೆಯಂತೆ ಅಲ್ಲಲ್ಲಿ ಕಂಡುಬರುತ್ತವೆ. ಆದರೆ ಪ್ರಾಚೀನ ಭಾರತದ ಇತಿಹಾಸ ತಿರುವಿದರೆ ಎಲ್ಲಿಯೂ ಇಂತಹ ಕಲಹ, ಕ್ಲೇಶಗಳಿಂದ ತುಂಬಿದ ಕುಟುಂಬವು ಅದರ ಅಸ್ತಿತ್ವವನ್ನಾಗಲಿ, ಘನತೆ ಯನ್ನಾಗಲಿ ಉಳಿಸಿಕೊಂಡಿಲ್ಲ.
ಕಾಲದ ಮಹಿಮೆಯೋ ಕಲಿಯುಗದ ಮಾಯೆಯೋ ತಿಳಿಯುತ್ತಿಲ್ಲ. ಅವಿಭಕ್ತ ಕುಟುಂಬ ಪದ್ಧತಿಯೆಂಬ ಬಳ್ಳಿಯಲ್ಲಿ ಬೆಸೆದಿರುವ ಕುಟುಂಬಗಳು ಬಳ್ಳಿಯಿಂದ ಬಿದ್ದ ಕುಂಬಳಕಾಯಿಗಳಂತೆ ಒಡೆದು ಹೋಳಾಗುತ್ತಿವೆ, ಅಲ್ಲಲ್ಲಿ ಕೊಳೆತು ತನ್ನ ಅಸ್ತಿತ್ವವನ್ನೆ ಕಳೆದುಕೊಳ್ಳುತ್ತಿವೆ. ದ್ವೇಷ ಭಾವನೆ, ಅಸೂಯೆ, ಅಹಂಕಾರ, ಆಸ್ತಿ, ಅಂತಸ್ತುಗಳಂತಹ ತುತ್ಛ ವಿಷಯಕ್ಕೆ ಸ್ವಚ್ಛ ಮನಸ್ಸಿನಲ್ಲಿ ವಿಷದ ಬೀಜ ಬಿದ್ದು ಮೊಳಕೆಯೊಡೆಯುತ್ತಿದೆ. ಒಬ್ಬರಿಗೊಬ್ಬರು ಪರಸ್ಪರ ಸಂಬಂಧಿ ಗಳಾಗಿದ್ದವರೂ ಕೂಡ ವಿನಾಕಾರಣ ಸ್ವಪ್ರತಿಷ್ಠೆಗೋ ಅಹಂಭಾವಗಳಿಂದಲೋ ಯಾವ ಸಂಬಂಧವೇ ಇಲ್ಲದಂತೆ ನಡೆದು ಕೊಳ್ಳುತ್ತಿದ್ದಾರೆ. ತಮ್ಮ ಹಿರಿಯರು ಕಷ್ಟಪಟ್ಟು ಸಂಪಾದಿಸಿದ ಘನತೆ, ಗೌರವ ಗಳನ್ನು, ಆಸ್ತಿ ಪಾಸ್ತಿಗಳನ್ನು ತಮ್ಮ ದುರಹಂಕಾರಗಳಿಂದ, ಅನಗತ್ಯ ದುಂದು ವೆಚ್ಚಗಳಿಂದ ಕಳೆದುಕೊಳ್ಳುವ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ತಾನು ಮಾಡಲಾರ, ಪರರು ಮಾಡಿದ್ದನ್ನು ನೋಡಲಾರ ಎನ್ನುವವರು ಒಂದು ಕಡೆಯಾದರೆ, ಜಗತ್ತಿನಲ್ಲಿ ಒಂದು ಹೊತ್ತಿನ ಊಟಕ್ಕಾಗಿ ಹೋರಾಡುವವರ, ವಾಸಿಸಲು ಯೋಗ್ಯ ಸ್ಥಳವಿಲ್ಲದೆ ಅಲೆದಾಡುವವರ ಮಧ್ಯೆ ಎಲ್ಲವೂ ಇದ್ದು ತಾವು ಹುಟ್ಟಿ ಬೆಳೆದಿರುವ ತಮ್ಮ ಹಿರಿಯರ ಮನೆ, ಆಸ್ತಿಗಳು ಪಾಳು ಬೀಳುತ್ತಿದ್ದರೂ ಕಂಡು ಕಾಣದಂತೆ ಇರುವವರು ಇನ್ನೊಂದು ಕಡೆ ಇದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಕೊನೆಯದಾಗಿ ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಎಷ್ಟೇ ಸಂಪಾದಿಸಿದ್ದರೂ ಲೆಕ್ಕವಿಲ್ಲದಷ್ಟು ಆಸ್ತಿಪಾಸ್ತಿಗಳ ಒಡೆಯ ನಾದರೂ ತನ್ನ ಕಡೆಗಾಲದಲ್ಲಿ ನಿಸ್ಸಹಾಯಕ ನಾಗಿ ಏನನ್ನೂ ತೆಗೆದು ಕೊಂಡು ಹೋಗಲಾಗದೆ ಪ್ರಕೃತಿಯ ಕರೆಗೆ ಓಗೊಡುವ ಕೊನೆಯ ಕ್ಷಣ ದಲ್ಲಿ ವಾಸ್ತವಿಕತೆಯನ್ನು ಅರಿ ಯು ವಷ್ಟರ ಹೊತ್ತಿಗೆ ತನ್ನ ಪ್ರಾಣಪಕ್ಷಿ ಹಾರಿ ಹೋಗಿರು ತ್ತದೆ. ಇಷ್ಟೆಲ್ಲ ಅರಿವಿದ್ದು ಭಾರತೀಯರಾದ ನಾವು ನಮ್ಮ ಪುರಾತನ ಸಂಸ್ಕೃತಿಯಂತೆ ಅವಿಭಕ್ತ ಕುಟುಂಬಗಳನ್ನು ಒಡೆದು ಹೋಳಾಗ ದಂತೆ ಸಹಬಾಳ್ವೆಯಿಂದ ದ್ವೇಷ, ಅಸೂಯೆ, ದ್ರೋಹಗಳನ್ನು ಬಿಟ್ಟು ಒಂದೇ ಕೂಡು ಕುಟುಂಬದಂತೆ ಬಾಳಿ ದರೆ ನಮ್ಮ ಬಾಳಿನ ಜತೆಗೆ ಎಲ್ಲರ ಬಾಳು ಹಸ ನಾದಿ ತೆಂಬ ಒಂದು ಸಣ್ಣ ಆಶಯ ಮನಸ್ಸಿನ ಮೂಲೆಯಲ್ಲಿ ಮೊಳಕೆಯೊಡೆಯುತ್ತಿದೆ.
-ರಾಮನಾಥ ಕಿಣಿ, ಕೋಟೇಶ್ವರ