ಚಿಂಚೋಳಿ: ಜಿಲ್ಲೆಯ ಅತೀ ಹಿಂದುಳಿದಪ್ರದೇಶದ ಅಭಿವೃದ್ಧಿಗೆ ರಾಜಕೀಯ ಬೆರೆಸದೇ ಮಾರ್ಗದರ್ಶನ, ಸಲಹೆ, ಅಭಿಪ್ರಾಯ ನೀಡಿ ಸಹಕಾರ ನೀಡಬೇಕು. ನಮ್ಮ ಮೀಸಲು ಮತಕ್ಷೇತ್ರವು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕೆಂಬುದು ನನ್ನಆಸೆ ಆಗಿದೆ ಎಂದು ಶಾಸಕ ಡಾ| ಅವಿನಾಶ ಜಾಧವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಚಂದಾಪೂರ ಗಂಗೂನಾಯಕ ತಾಂಡಾದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 38 ಲಕ್ಷ ರೂ. ಗಳ ವೆಚ್ಚದಲ್ಲಿ ನಿರ್ಮಿಸುವ 4 ಶಾಲೆ ಕೋಣೆ, ಮೆಂಟ ರಸ್ತೆ, ಒಳಚರಂಡಿ ಹಾಗೂ ಹೈಮಾಸ್ಟ್ ದೀಪ ಸೇರಿದಂತೆ ಒಟ್ಟು 2.02 ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಅಡಿಗಲ್ಲು ಸಮಾರಂಭ ನೆರವೇರಿಸಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಕುಂಚಾವರಂ, ಚಿಂಚೋಳಿ, ಚಂದನಕೇರಾ, ಚಂದಾಪುರ ನಗರ ಸೇರಿದಂತೆ ಅನೇಕ ರಾಜ್ಯ ಹೆದ್ದಾರಿ ರಸ್ತೆಡಾಂಬರೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಚಂದಾಪುರ ನಗರದಲ್ಲಿ ಶಾಲೆ ಕಟ್ಟಡಗಳು ಮತ್ತು 3.25 ಕೋಟಿ ರೂ.ಗಳಲ್ಲಿ ಸರಕಾರಿಬಾಲಕರ ವಸತಿ ನಿಲಯ ಕಟ್ಟಡ ಮಂಜೂರಿಗೊಳಿಸಲಾಗಿದೆ.
ಕುಂಚಾವರಂ ಗಡಿಭಾಗದ ವೆಂಕಟಾಪುರ, ಶಾದೀಪೂರ, ಶಿವರಾಮರೆಡ್ಡಿ, ಶಿವರೆಡ್ಡಿಪಳ್ಳಿ, ಲಚಮಾಸಾಗರ, ಅಂತಾವರಂ ಗ್ರಾಮಗಳಲ್ಲಿ ಸಿಮೆಂಟ್ ರಸ್ತೆ, ಒಳಚರಂಡಿ ಮತ್ತು ಸಣ್ಣ ಸೇತುವೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದರು.
ಆದರ್ಶ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ 60 ಲಕ್ಷ ರೂ., ಕೋವಿಡ್ ಆಸ್ಪತ್ರೆ ಕಟ್ಟಡಕ್ಕೆ 55 ಲಕ್ಷ ರೂ., ಮದೀನ ಮಸೀದ ಕಟ್ಟಡಕ್ಕೆ 7.50 ಲಕ್ಷ ರೂ. ಮತ್ತು ಸಿಮೆಂಟ್ ರಸ್ತೆ, ಒಳಚರಂಡಿ ನಿರ್ಮಾಣಕ್ಕಾಗಿ 12.70 ಲಕ್ಷ ರೂ. ನೀಡಲಾಗಿದೆ. ಅಭಿವೃದ್ಧಿಗೆ ಸಹಕಾರ ಸಲಹೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ತಾಪಂ ಅಧಿಕಾರಿ ಅನೀಲಕುಮಾರರಾಠೊಡ್, ಇಇ ಕೃಷ್ಣ ಅಗ್ನಿಹೋತ್ತಿ, ಎಇಇ ಗುರುರಾಜ ಜೋಶಿ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಸದಸ್ಯರಾದ ಭೀಮರಾವ ರಾಠೊಡ್, ರಾಜೂ ಪವಾರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ ಠಾಕೂರ, ಶಿವಕುಮಾರ ಪೋಚಾಲಿ, ಶ್ರೀಕಾಂತ ಜಾಬಶೆಟ್ಟಿ, ಅಶೋಕ ಚವ್ಹಾಣ ಇದ್ದರು.