Advertisement

ಮಕ್ಕಳ ಚಿಂತನೆ ಅಭಿವ್ಯಕ್ತಗೊಳಿಸಿದ ಸೂತ್ರ

06:01 PM Mar 04, 2022 | Team Udayavani |

ಹುಬ್ಬಳ್ಳಿ: ವಾಹನ ಅಪಘಾತ ಕುಳಿತಲ್ಲಿಯೇ ಮಾಹಿತಿ, ಭೂಕಂಪನ ಕುರಿತು ಎಚ್ಚರಿಕೆ ಗಂಟೆ, ಜ್ವಾಲಾಮುಖೀಯಿಂದ ವಿದ್ಯುತ್‌ ಉತ್ಪಾದನೆ ಹೀಗೆ ವಿದ್ಯಾರ್ಥಿಗಳ ಚಿಂತನೆಗಳಿಂದ ರೂಪ ಪಡೆದ ವಿವಿಧ ಮಾದರಿಗಳು ಇಲ್ಲಿನ ಕೆಎಲ್‌ಇ ಸಂಸ್ಥೆಯ ಸಿ.ಐ.ಮುನವಳ್ಳಿ ಪಾಲಿಟೆಕ್ನಿಕ್‌ ಮಹಾವಿದ್ಯಾಲಯದಲ್ಲಿ ನಡೆದ “ಸೂತ್ರ 2022′ ವಿಜ್ಞಾನ-ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ಕಂಡು ಬಂದವು. ಮಕ್ಕಳಲ್ಲಿನ ಚಿಂತನೆಯನ್ನು ಅಭಿವ್ಯಕ್ತಗೊಳಿಸಿದವು.

Advertisement

ಕುಳಿತಲ್ಲಿಯೇ ತಮ್ಮ ಮೊಬೈಲ್‌ ಮೂಲಕ ವಾಹನವನ್ನು ಹೇಗೆಲ್ಲ ನಿಯಂತ್ರಿಸಬಹುದು, ವಾಹನ ಸುರಕ್ಷೆ ಹಾಗೂ ಟ್ರಾಕಿಂಗ್‌ ಡಿವೈಸ್‌ ಮಾದರಿಯನ್ನು ಮಾಡಿ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಒಂದು ವೇಳೆ ವಾಹನ ಅಪಘಾತಕ್ಕೀಡಾದರೆ ಸಂಬಂಧಿಸಿದ ಮೊಬೈಲ್‌ಗೆ ಕೂಡಲೇ ಸಂದೇಶ ರವಾನೆಯಾಗುತ್ತದೆ. ಸಂದೇಶ ಬಂದ ಕೆಲವೇ ಸೆಕೆಂಡ್‌ಗಳಲ್ಲಿ ಎಮರ್ಜೆನ್ಸಿ ದೂರವಾಣಿ ಕರೆ ಸಹ ಬರಲಿದೆ. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎಂ.ಆರ್‌.ಸಾಖರೆ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾದ ಅಮೂಲ್ಯಾ ಹಾಗೂ ಶಾರಬಿ ಇಂತಹ ಮಾದರಿಯನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಂಧನ ಬೆಲೆಗಳ ಹೆಚ್ಚಳ ಗಮನದಲ್ಲಿಟ್ಟುಕೊಂಡು ಸದ್ಯ ಬ್ಯಾಟರಿ ಚಾಲಿತ ವಾಹನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದಕ್ಕೂ ಮೀರಿ ಸೋಲಾರ್‌ ಪ್ಯಾನೆಲ್‌ ಇರುವ ವಾಹನಗಳ ಮಾದರಿಯನ್ನು ಇಲ್ಲಿನ ಸೇಂಟ್‌ ಆಂಥೋನಿ ಪಬ್ಲಿಕ್‌ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಸಿದ್ದಿ-ಸುನಿಧಿ ಸಿದ್ಧಪಡಿಸಿದ್ದು, ಮುಂದೊಂದು ದಿನ ಇಂತಹ ವಾಹನಗಳು ಮಾರುಕಟ್ಟೆಗೆ ಬಂದಲ್ಲಿ ಅಚ್ಚರಿ ಪಡಬೇಕಿಲ್ಲ.

ಜ್ವಾಲಾಮುಖೀಯಿಂದ ವಿದ್ಯುತ್‌ ಉತ್ಪಾದನೆ: ಜ್ವಾಲಾಮುಖೀಯಿಂದ ವಿದ್ಯುತ್‌ ಉತ್ಪಾದಿಸಬಹುದು, ಜತೆಗೆ ಅದರಿಂದ ರಕ್ಷಣೆ ಪಡೆಯಲು ಮುಂದಾಗಬಹುದು ಎಂಬುದನ್ನು ಬ್ರಹ್ಮಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿಗಳಾದ ದರ್ಶನ ಪಿ., ಶಿವಪ್ರಸಾದ ದೇಸಾಯಿ ತೋರಿಸಿಕೊಟ್ಟಿದ್ದಾರೆ.

ಸೌರ ಆಧಾರಿತ ನೀರಾವರಿ: ಕೃಷಿ ಭೂಮಿಯಲ್ಲಿ ಸೂರ್ಯನಿಂದ ಬರುವ ಕಿರಣಗಳನ್ನು ಶೇಖರಿಸುವ ಮೂಲಕ ನೀರು ಹರಿಸಿ ಕೃಷಿಯಲ್ಲಿ ಲಾಭ ಮಾಡಬಹುದು ಎಂಬುದನ್ನು ಬಿವಿಕೆ ವಿಸಿಬಿ ಗರ್ಲ್ಸ್ ಹೈಸ್ಕೂಲ್‌ನ ವಿದ್ಯಾರ್ಥಿಗಳಾದ ಸಹನಾ, ಪ್ರಿಯಾ ತೋರಿಸಿಕೊಟ್ಟಿದ್ದಾರೆ.

Advertisement

ಭೂಕಂಪದ ಎಚ್ಚರಿಕೆ ಘಂಟೆ: ಭೂಮಿಯ ಮೇಲೆ ನಡೆಯುವ ವಿದ್ಯಮಾನಗಳನ್ನು ಎಲ್ಲರೂ ಕಣ್ಣಿಂದ ನೋಡಬಹುದು, ಆದರೆ ಭೂಮಿಯ ಒಳಭಾಗದಲ್ಲಿ ನಡೆಯುವ ಕಂಪನ ತಿಳಿಯದಾಗಿದೆ. ಇದನ್ನರಿತ ಪ್ರಸೆಂಟೇಶನ್‌ ಶಾಲೆಯ ವಿದ್ಯಾರ್ಥಿಗಳಾದ ನಿರ್ಮಲಾ ಹೆಬ್ಬಳ್ಳಿ, ಐಶ್ವರ್ಯಾ ಹೆಬ್ಬಳ್ಳಿ ಮಾದರಿಯೊಂದನ್ನು ಸಿದ್ಧ ಪಡಿಸಿದ್ದು, ಭೂಮಿ ಕಂಪನ ಬರುವ ಸಮಯದಲ್ಲಿ ಗಂಟೆ ಬಾರಿಸುವ ಮೂಲಕ ಎಚ್ಚರಿಸುವ ಕೆಲಸವನ್ನು ಇದು ಮಾಡುತ್ತದೆ.

ಇಷ್ಟೇ ಅಲ್ಲ ಹುಬ್ಬಳ್ಳಿ-ಧಾರವಾಡದ ಸುಮಾರು 16 ಶಾಲೆಯ ವಿದ್ಯಾರ್ಥಿಗಳು ಸುಮಾರು 35ಕ್ಕೂ ಹೆಚ್ಚು ಮಾದರಿಗಳನ್ನು ಸಿದ್ಧಪಡಿಸಿದ್ದು, ವಿಜ್ಞಾನ-ತಂತ್ರಜ್ಞಾನ ಮೂಲಕ ಮುನ್ನಡೆಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಮುಂಬರುವ ದಿನಗಳಲ್ಲಿ ಸೂರ್ಯನ ಕಿರಣಗಳು ಸಹ ಅಮೂಲ್ಯವಾಗಲಿದೆ ಎಂಬುದನ್ನು ಸೂತ್ರ 2022 ವಿಜ್ಞಾನ-ತಂತ್ರಜ್ಞಾನ ವಸ್ತು ಪ್ರದರ್ಶನದಲ್ಲಿ ತೋರಿಸಿಕೊಡಲಾಗಿದೆ. ಮುನವಳ್ಳಿ ಪಾಲಿಟೆಕ್ನಿಕ್‌ ಮಹಾವಿದ್ಯಾಲಯದಿಂದ ಉತ್ತಮ ವೇದಿಕೆ ನಮಗೆ ಸಿಕ್ಕಿದೆ.
ಸಿದ್ದಿ ಹಾಗೂ ಸುನಿಧಿ, ವಿದ್ಯಾರ್ಥಿಗಳು

ಇಂದಿನ ತಂತ್ರಜ್ಞಾನದ ಯುಗದಲ್ಲಿ ಏನು ಬೇಕಾದರೂ ಮಾಡಬಹುದು. ನಮ್ಮಲ್ಲಿರುವ ವಾಹನಗಳನ್ನು ಇಲ್ಲವಾಗಿಸಬಹುದು. ಅದನ್ನರಿತು ಸುರಕ್ಷೆ- ಟ್ರಾಕಿಂಗ್‌ ಸಿಸ್ಟಮ್‌ ಸಿದ್ಧಪಡಿಸಿದ್ದು, ಉತ್ತಮವಾಗಿದೆ.
ಅಮೂಲ್ಯಾ ಹಾಗೂ ಶಾರಬಿ, ವಿದ್ಯಾರ್ಥಿಗಳು

ಬಸವರಾಜ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next