Advertisement

ವಿದ್ಯಾರ್ಥಿಗಳಿಗೆ ಮಾತು ಕೊಟ್ಟು  ಮರೆತ ರಾಜ್ಯ ಸರಕಾರ 

05:06 PM Jul 19, 2018 | |

ಬಾಗಲಕೋಟೆ: ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಮಾತುಕೊಟ್ಟು, ಈಗ ಅಧಿಕಾರಕ್ಕೆ ಬಂದಿರುವ ಸರ್ಕಾರ, ಉಚಿತ ಬಸ್‌ಪಾಸ್‌ ನೀಡದೇ ವಿದ್ಯಾರ್ಥಿಗಳಿಗೆ ಮೋಸ ಮಾಡಿವೆ ಎಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ನಗರದ ಬಸವೇಶ್ವರ ವೃತ್ತದಲ್ಲಿ ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್‌ ಸಂಘಟನೆಗಳ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಈ ವೇಳೆ ಎಐಡಿಎಸ್‌ಒನ ರಾಜ್ಯ ಉಪಾದ್ಯಕ್ಷ ಎಚ್‌.ಟಿ. ಭರತಕುಮಾರ ಮಾತನಾಡಿ, ಆರ್ಥಿಕ ಸಂಕಷ್ಟದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್‌ಪಾಸ್‌ ನೀಡುವಂತೆ ಈ ಹಿಂದಿನ ಸರ್ಕಾರವನ್ನು ಒತ್ತಾಯಿಸಿದ್ದರು. ರಾಜ್ಯಾದ್ಯಂತ ನೂರಾರು ಪ್ರತಿಭಟನೆಯೂ ನಡೆಸಿದ್ದರು. ಇದರ ಪರಿಣಾಮವಾಗಿ ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಬಜೆಟ್‌ನಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಈ ಘೋಷಣೆ ಆದೇಶವಾಗದ ಕಾರಣ, ಕೆಎಸ್‌ಆರ್‌ಟಿಸಿ ಜಾರಿಗೊಳಿಸಲು ತಕರಾರು ಎತ್ತಿತು. ಮತ್ತೊಮ್ಮ ವಿದ್ಯಾರ್ಥಿಗಳು ತಮ್ಮ ನ್ಯಾಯಯುತ ಬೇಡಿಕೆಗಾಗಿ ಪ್ರಸಕ್ತ ಸಮ್ಮಿಶ್ರ ಸರ್ಕಾರವನ್ನು ಆಗ್ರಹಿಸಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟಿಸಿದ್ದರು. ಪ್ರತಿಭಟನೆಗೆ ಮಣಿದು ರಾಜ್ಯ ಸರ್ಕಾರದ ಸಚಿವರು ಭರವಸೆ ನೀಡಿದ್ದರು. ಆದರೆ ಬಜೆಟ್‌ ನಲ್ಲಿ ಉಚಿತ ಬಸ್‌ಪಾಸ್‌ ಘೋಷಣೆ ಮಾಡದೆ ರಾಜ್ಯ ಸರ್ಕಾರವು ಮಾತು ತಪ್ಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಚಿತ ಬಸ್‌ಪಾಸ್‌ ಜಾರಿಗೊಳಿಸಲು ಸಾರಿಗೆ ಇಲಾಖೆ ಆರ್ಥಿಕ ಹೊರೆಯಾಗುತ್ತದೆ ಎಂದು ಹೇಳುತ್ತಿರುವುದು ವಾಸ್ತವವಲ್ಲ. ಉಚಿತ ಬಸ್‌ಪಾಸ್‌ ಜಾರಿಗೊಳಿಸಲು ಹೆಚ್ಚುವರಿ 600 ರೂ. ಕೋಟಿ ಅವಶ್ಯಕತೆಯಿದೆ ಎನ್ನುವುದು ಲಾಭ ಹಾಗೂ ವ್ಯಾಪಾರಿ ಮಾನದಂಡದಿಂದ ಕೂಡಿದೆ. ವಾಸ್ತವದಲ್ಲಿ ರಿಯಾಯಿತಿ ದರದ ಬಸ್‌ಪಾಸ್‌ಗಾಗಿ ಪ್ರತಿ ವರ್ಷ ಸರ್ಕಾರವು ಸಾರಿಗೆ ಸಂಸ್ಥೆಗಳಿಗೆ ನೀಡುವ 860 ಕೋಟಿ ರೂ. ಹಣದಿಂದಲೇ ಉಚಿತ ಬಸ್‌ಪಾಸ್‌ ಜಾರಿಗೊಳಿಸಬಹುದು. ಹೆಚ್ಚುವರಿ ಹಣದ ಅವಶ್ಯಕತೆಯೇ ಇಲ್ಲ. ಅದು ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯು ಸಹ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಬಸ್‌ಪಾಸ್‌ ಹಣವನ್ನು ಭರಿಸುತ್ತಿದೆ. ಹಾಗೆಯೇ ಸಾರಿಗೆ ಸಂಸ್ಥೆಯಲ್ಲಿರುವ ದುಂದುವೆಚ್ಚ, ಸೋರಿಕೆಗೆ ಕಡಿವಾಣ ಹಾಕಿದರೆ, ಕೋಟ್ಯಂತರ ರೂಪಾಯಿ ಹಣ ಉಳಿಸಬಹುದು. ಉಚಿತ ಬಸ್‌ಪಾಸ್‌ ಜಾರಿಗೊಳಿಸಲು ಹಣದ ಕೊರತೆ ಎಂಬುದು ಸತ್ಯಕ್ಕೆ ದೂರವಾದ ಮಾತಾಗಿದೆ ಎಂದರು.

ನಂತರ ನಿಯೋಗದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರಿಗೆ ಮನವಿ ಸಲ್ಲಿಸಿದರು. ಎಐಎಂಎಸ್‌ಎಸ್‌ನ ಸುರೇಖಾ ಕಡಪಟ್ಟಿ, ಎಐಡಿವೈಒ ಯುವ ಜನ ಸಂಘಟನೆಯ ಅಜಿತ, ದೀಪಾ, ರೇಷ್ಮಾ, ಪ್ರಕಾಶ, ಮಂಜುನಾಥ, ಗುರುಪಾದಪ್ಪ, ಪ್ರಕಾಶ, ರಜಾಕ, ವಿಷ್ಣು, ಉಮೇಶ, ಅಜಿತ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next