ಬಂಗಾರಪೇಟೆ: ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ಮಳೆ ಕೃಪೆ ತೋರದೆ ರೈತರು ಕಂಗಾಲಾಗಿದ್ದಾರೆ. ಬೆಳೆದ ಬೆಳೆಗಳೆಲ್ಲ ನಾಶವಾಗಿ ಸಾಲದ ಶೂಲಕ್ಕೆ ಬಲಿಯಾಗಿದ್ದಾರೆ. ಇಂತಹ ಸಮಯದಲ್ಲಿ ಮುಖ್ಯಮಂತ್ರಿ, ಶಾಸಕರು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಜನಸಾಮಾನ್ಯರ ಸಮಸ್ಯೆ ಮರೆತಿರುವ ಸರ್ಕಾರ ವಜಾಗೊಳಿಸಿ ಪ್ರಜಾಪ್ರಭುತ್ವ ಉಳಿಸಿಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ರಾಷ್ಟಪತಿ ಅವರನ್ನು ಆಗ್ರಹಿಸಿದ್ದಾರೆ.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದ್ದರೂ ರಾಜ್ಯದ ಜನತೆಗೆ ಯಾವುದೇ ರೀತಿ ಅನುಕೂಲವಾಗುತ್ತಿಲ್ಲ. ದೀನ ದಲಿತರು, ರೈತರು, ಅಲ್ಪಸಂಖ್ಯಾತರಿಗೆ ಹಾಗೂ ಜನಸಾಮಾನ್ಯರಿಗೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ, ಕೇವಲ ಅವರವರ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಸಾರ್ವಜನಿಕರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ, ಸಮ್ಮಿಶ್ರ ಪಕ್ಷ ಕೆಡವಲು ವಿರೋಧಪಕ್ಷದ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ಕುಮಾರಸ್ವಾಮಿ ತಮ್ಮ ಮಗನ ಗೆಲುವಿಗೆ ಶತ ಪ್ರಯತ್ನ ಪಡುತ್ತಿದ್ದಾರೆ ಎಂದು ದೂರಿದರು.
ಸದಸ್ಯತ್ವ ರದ್ದು ಮಾಡಿ: ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಯಬೇಕಾದ ಸರ್ಕಾರಗಳು ಇಂದು ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಆಡಳಿತ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡಿ ತಮ್ಮ ಸ್ವಾರ್ಥಕ್ಕಾಗಿ ಜನರನ್ನು ಬಲಿಪಶು ಮಾಡಿಕೊಳ್ಳುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಕೂಡಲೇ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರಜಾಪ್ರಭುತ್ವವನ್ನು ಆಳು ಮಾಡುತ್ತಿರುವ 224 ಶಾಸಕರ ಸದಸ್ಯತ್ವ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಕೈಕಟ್ಟಿ ಕೂತಿದೆ: ರಾಜ್ಯ ತೀವ್ರವಾದ ಬರಗಾಲಕ್ಕೆ ಸಿಲುಕಿ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗೆ ಮತ್ತು ಮೇವಿಗೆ ಹಾಹಾಕಾರವಿದೆ. ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಪ್ರತಿ ದಿನ ಮಹಿಳೆ, ವಿದ್ಯಾರ್ಥಿಗಳ ಮೇಲೆ ನಿರಂತರ ಹಲ್ಲೆ, ಅತ್ಯಾಚಾರ ಸಾವುಗಳು, ಕೊಲೆಗಳು ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಕೈಕಟ್ಟಿ ಕೂತಿದೆ ಎಂದು ಆರೋಪಿಸಿದರು.
ಪ್ರಯೋಜನವಿಲ್ಲ: ರೈತರಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಯುವಕರು ನಿರುದ್ಯೋಗ ಸಮಸ್ಯೆಯಿಂದ ನರಳಾಡುತ್ತಿದ್ದಾರೆ, ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ ಖಾಸಗೀಕರಣ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ಸಹ ವಿಫಲರಾಗಿದ್ದಾರೆ. ಸಮ್ಮಿಶ್ರ ಸರ್ಕಾರದಿಂದ ಯಾವುದೇ ರೀತಿ ಅಭಿವೃದ್ಧಿ ನಡೆಯುತ್ತಿಲ್ಲ, ಕೇವಲ ಅವರ ಅಧಿಕಾರ ಉಳಿಸಿ ಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
ಸಂವಿಧಾನವನ್ನು ಹೆಚ್ಚು ಬಲಪಡಿಸುತ್ತಾ ಯಾವುದೇ ವರ್ಗಕ್ಕೆ ತಾರತಮ್ಯಲ್ಲದೆ, ಎಲ್ಲರಿಗೂ ಸಮಾನ ಹಕ್ಕು ನೀಡಬೇಕು ಎಂದು ಒತ್ತಾಯಿಸಿದರು. ದಲಿತ ಸಮಾಜಸೇನೆಯ ಮುಖಂಡ ಹುಣಸನಹಳ್ಳಿ ರಮೇಶ್, ಹುಣಸನಹಳ್ಳಿ ಮಂಜುನಾಥ್, ಜಿ.ಶ್ರೀನಿವಾಸ್, ಸಂಜಯ್ ಗಾಂಧಿ ನಗರ ಹಾಸ್ಟೆಲ್ ಶ್ರೀನಿವಾಸ್ ಉಪಸ್ಥಿತರಿದ್ದರು.