Advertisement

Chess: ಮರೆತು ಹೋದ ಚದುರಂಗದಾಟ

03:50 PM Jan 31, 2024 | Team Udayavani |

ಒಮ್ಮೆ ನೋಟಿಸ್‌ ಬೋರ್ಡಿನಲ್ಲಿ “ಆಶು ಭಾಷಣಕ್ಕೆ ಆಸಕ್ತರು ಹೆಸರು ನೊಂದಾಯಿಸಿಕೊಳ್ಳಿ’ ಎಂಬ ನೋಟಿಸ್‌ ಹಾಕಲಾಗಿತ್ತು. ಅದು ಅಂತರ್‌ಕಾಲೇಜು ಮಟ್ಟದ ಸ್ಪರ್ಧೆ ಆಗಿತ್ತು. ಗೆದ್ದವರು ಹಂತ ಹಂತವಾಗಿ ಜಿಲ್ಲಾ ಮಟ್ಟದ ಸ್ಪರ್ದೆಯವರೆಗೂ ಭಾಗವಹಿಸಬಹುದಿತ್ತು. ಯಾರಿಗೂ ಕಾಯದೆ ಹೆಸರು ನೋಂದಾಯಿಸಿಕೊಂಡೆ. ತಯಾರಿ ಆರಂಭಿಸಿದೆ.

Advertisement

ಅಶುಭಾಷಣದಲ್ಲಿ  ಸ್ಪರ್ಧೆಯಲ್ಲಿ ಮೂವತ್ತು ಸೆಕೆಂಡ್‌ನಿಂದ ಒಂದು ನಿಮಿಷದ ಮುಂಚೆ ಚೀಟಿ ಸಿಗುತ್ತದೆ. ಅದರಲ್ಲಿ ಭಾಷಣದಲ್ಲಿ ವಿಷಯ ಬರೆದಿರಲಾಗುತ್ತದೆ. ಸಿಕ್ಕ ಸಮಯದಲ್ಲಿ ಸರಿಯಾಗಿ ಯೋಚಿಸಿ ಅನಂತರ ಭಾಷಣ ಮಾಡುವುದು ಸ್ಪರ್ಧೆಯ ರೀತಿ.

ವರ್ತಮಾನ ಹಾಗೂ  ಭವಿಷ್ಯದ ನಿಲುವುಗಳನ್ನು, ಆಗುಹೋಗುಗಳನ್ನು ವಿಂಗಡಿಸಿ ಮಾತನಾಡುವುದು ನನ್ನ ಯೋಜನೆಯಾಗಿತ್ತು.

ಸ್ಪರ್ಧೆಯ ದಿನ ಬಂದೇ ಬಿಟ್ಟಿತು. ನಮ್ಮ ಕಾಲೇಜು ಸರಕಾರಿ ಪದವಿ ಪೂರ್ವ ಕಾಲೇಜು ಹಿರಿಯಡ್ಕದಿಂದ ನಮ್ಮ ಸ್ಪರ್ದಿಗಳ ತಂಡ ಹೊರಟಿತು. ವಿವಿಧ ಸ್ಪರ್ಧೆಗಳು ಬೇರೆ ಬೇರೆ ಕಾಲೇಜಿನಲ್ಲಿ ನಡೆಯಲಾಗುತ್ತಿತ್ತು. ನನ್ನ ಸ್ಪರ್ಧೆ ಕಾರ್ಕಳದ ಒಂದು ಕಾಲೇಜಿನಲ್ಲಿ ನಡೆಯಿತ್ತಿತ್ತು. ಯಾವ ಕಾಲೇಜು ಅನ್ನುವುದು ಸರಿಯಾಗಿ ಗೊತ್ತಿರಲಿಲ್ಲ. ಅಧ್ಯಾಪಕರು ನಮ್ಮೊಂದಿಗೆ ಬಂದಿದ್ದರಿಂದ ಹುಡುಕಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಸ್ಪರ್ಧೆಗೂ ಅರ್ಧ ಗಂಟೆ ಮುಂಚೆ ನಾವು ಆ ಕಾಲೇಜು ತಲುಪಿದೆವು.

ನಂತರ ಆಶುಭಾಷಣ ಸ್ಪರ್ಧೆಆರಂಭ. ಸರದಿಯಂತೆ  ಒಂದು ನಿಮಿಷದ ಮುಂಚೆ ನಾನು ಚೀಟಿ ಆರಿಸಿದೆ. ಅದನ್ನು ಬಿಚ್ಚಿದಾಗ ಅದರಲ್ಲಿ ಸಿಕ್ಕ ವಿಷಯ ‘ ಚದುರಂಗದಾಟ ‘. ಅಂದರೆ ನಾನೀಗ ಚೆಸ್‌ ಆಟದ ಕುರಿತು  ಮಾತಾಡಬೇಕಾಗಿತ್ತು. ನನ್ನ ಯೋಜನೆಯಂತೆ ವಿಷಯದ ಆಳಕ್ಕೆ ಹೋದೆ. ಚದುರಂಗದಾಟದ ಉಗಮ ಹೇಗಾಯ್ತು?  ಉತ್ತರ ಸಿಗಲಿಲ್ಲ. ಇರಲಿ ಅದು ಭಾರತಕ್ಕೆ ಹೇಗೆ ಬಂತು? ಅದು  ಭಾರತಕ್ಕೆ ಬಂದದ್ದ ಅಥವಾ ಭಾರತದಲ್ಲೇ ಹುಟ್ಟೊಕೊಂಡಿದ್ದಾ ? ಅದರ ಹುಟ್ಟಿನಲ್ಲೇ ನನಗೆ ಸಂಶಯ ಹುಟ್ಟಿಕೊಂಡಿತು. ಅಯ್ಯೋ ದೇವರೇ ಈಗೈನು ಮಾಡುವುದು?

Advertisement

ಚೆಸ್‌ ಆಟದ ನಿಯಮಗಳನ್ನು, ನನ್ನ ಅನುಭವವನ್ನು ಹೇಳಿದರೆ ಒಂದು ಒಂದೂವರೆ ನಿಮಿಷ ಮಾತಾಡಬಹುದು. ಇನ್ನುಳಿದ ನಾಲ್ಕು ನಿಮಿಷ ಏನು ಹೇಳುವುದು ಎಂಬ ಯೋಚನೆ ಬರುವಷ್ಟರಲ್ಲಿ ನನ್ನ ಹೆಸರು ಕರೆಯಲಾಯಿತು. ಮೈಕ್‌ ಹಿಡಿದಾಗ ತಂತಾನೆ ವಿಷಯ ಹುಟ್ಟಿಕೊಳ್ಳುತ್ತದೆ ಎಂದು ಯಾರೋ ಹೇಳಿದ್ದನ್ನು ನೆನಪಿಸಿಕೊಂಡು ಧೈರ್ಯ ತೆಗೆದುಕೊಂಡು ವೇದಿಕೆ ತಲುಪಿದೆ. ಮೈಕ್‌ ಹಿಡಿದು ಧೈರ್ಯ ತಂದುಕೊಳ್ಳಲು ಒಮ್ಮೆ ದೀರ್ಘ‌ವಾಗಿ ಉಸಿರು ತೆಗೆದುಕೊಂಡು ವೀಕ್ಷಕರನ್ನು ಹಾಗೂ ತೀರ್ಪುಗಾರರನ್ನೆಲ್ಲ ಗಮನಿಸಿದೆ. ಆಗ ಸಭಿಕರೆಲ್ಲರ ಎದುರು ಭವ್ಯವಾದ ವೇದಿಕೆಯಲ್ಲಿ ಮೈಕ್‌ ಎದುರು ನಿಂತ ನನಗೆ ನಾನು ಆ ಕಾಲೇಜಿಗೆ ಬಂದಾಗಿನಿಂದಲೂ ಗಮನಿಸಿರದ ಒಂದು ಮಹತ್ತರ ವಿಷಯ ಅರಿವಿಗೆ ಬಂದಿತು.

ನನ್ನ ಧೈರ್ಯವನ್ನು ಹುಟ್ಟಡಗಿಸಿದ ವಿಷಯವೇನೆಂದರೆ ನಾನಿದ್ದ ಆ ಕಾಲೇಜು ಮಹಿಳಾ ಕಾಲೇಜು ಆಗಿತ್ತು. ಸಭೆಯ ಮೊದಲ ಸಾಲಿನಿಂದ ಹಿಡಿದು ಕೊನೆಯ ಸಾಲಿನವರೆಗೂ ವಿದ್ಯಾರ್ಥಿನಿಯರೇ ಆಸೀನರಾಗಿದ್ದರು. ವೇದಿಕೆಯಲ್ಲಿದ್ದ ನನ್ನನ್ನು ಸಹಸ್ರಾರು ಸ್ತ್ರೀ ನಯನಗಳು ನೋಡುತ್ತಿದ್ದವು. ನನ್ನ ಹಾಗೆ ಕೇವಲ ಹತ್ತು ಹದಿನೈದು ಜನ ಹುಡುಗರಿದ್ದರು. ಅದೂ ಸ್ಪರ್ಧಿಗಳು ಮತ್ತು ತೀರ್ಪುಗಾರರನ್ನು ಬಿಟ್ಟರೆ ಸುಮಾರು ನಾನೂರು ಐನೂರು ಜನ ಹುಡಿಗಿಯರೇ ಇದ್ದರು ಆ ಹಾಲ್‌ನಲ್ಲಿ. ಸ್ಪರ್ಧೆ ನಡೆಯುತ್ತಿದ್ದ ಕಾಲೇಜು ಮಹಿಳಾ ಕಾಲೇಜು ಎಂಬ ವಿಷಯ ನನಗೆ ಯಾಕೆ ಗೊತ್ತಾಗಲಿಲ್ಲ?

ಅಲ್ಲಿ ನನ್ನ ಸ್ಥಿತಿ ಹೇಳತೀರದು. ತುಂಬಾ ಮುಜುಗರವಾಗುತ್ತಿತ್ತು. ಆದರೂ ನನ್ನ ಪರಿಚಯ, ನಾನು ಬಂದ ಕಾಲೇಜಿನ ಪರಿಚಯ ಮಾಡಿಕೊಂಡೆ. ಚೀಟಿ ನೋಡಿದಾಗ ಭಾಷಣದ ವಿಷಯ ಚದುರಂಗದಾಟ ಎಂಬುವುದು ಮತ್ತೆ ನೆನಪಾಯಿತು.

ಅವತ್ತಿನಿಂದ ಇವತ್ತಿನವರೆಗೂ  ಅಲ್ಲಿ ಎರಡು ನಿಮಿಷ ಏನು ಭಾಷಣ ಮಾಡಿ ಬಂದೆ ಅನ್ನೊದು ನೆನಪೇ ಆಗುತ್ತಿಲ್ಲ. ಸ್ಪರ್ಧೆಯ ತೀರ್ಪಿಗೂ ಕಾಯದೆ ಅಲ್ಲಿಂದ ಜಾಗ ಖಾಲಿ ಮಾಡಿದ್ದೆ.

-ಚೈತನ್ಯ ಆಚಾರ್ಯ

ಕೊಂಡಾಡಿ

Advertisement

Udayavani is now on Telegram. Click here to join our channel and stay updated with the latest news.

Next