Advertisement

ಗುಜರಾತ್ ಆಯ್ತು, ರಾಜಸ್ಥಾನದ ಬೆಳೆಗಳ ಮೇಲೆ PAK ನಿಂದ ಬಂದ ಲಕ್ಷಾಂತರ ಮಿಡತೆಗಳ ದಾಳಿ!

10:15 AM Jan 22, 2020 | Nagendra Trasi |

ನವದೆಹಲಿ: ಇತ್ತೀಚೆಗಷ್ಟೇ ಪಾಕಿಸ್ತಾನದಿಂದ ಲಕ್ಷಾಂತರ ಸಂಖ್ಯೆಯಲ್ಲಿ ದಾಳಿ ನಡೆಸಿದ್ದ ಮಿಡತೆಯಿಂದಾಗಿ ಗುಜರಾತ್ ರೈತರ ಬೆಳೆಗಳು ನಾಶವಾಗಿದ್ದವು. ಇದೀಗ ಕಳೆದ ಆರು ದಶಕಗಳಲ್ಲಿಯೇ ಕಂಡರಿಯದಷ್ಟು ದೊಡ್ಡ ಪ್ರಮಾಣದ ಬೆಳೆ ಹಾನಿಗೆ ರಾಜಸ್ಥಾನದ ರೈತರು ತತ್ತರಿಸಿ ಹೋಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಮಿಡತೆಗಳ ದಾಳಿ!

Advertisement

ಲಕ್ಷಾಂತರ ಮಿಡತೆಗಳ ದಾಳಿಗೆ ರಾಜಸ್ಥಾನದ 3.60 ಲಕ್ಷ ಹೆಕ್ಟೇರ್ ಗಳಷ್ಟು ಬೆಳೆಗೆ ಹೊಡೆತ ಬಿದ್ದಿದೆ. ರಾಜಸ್ಥಾನದ ಶ್ರೀಗಂಗಾನಗರ್ ಜಿಲ್ಲೆಯಲ್ಲಿ ಅತೀ ಹೆಚ್ಚು ಬೆಳೆ ಹಾನಿಯಾಗಿದೆ. ಇನ್ನು ಜೈಸಲ್ಮೇರ್, ಬಿಕಾನೆರ್, ಜಾಲೋರ್, ಜೋಧ್ ಪುರ್, ಬರ್ಮೆರ್, ಸಿರೋಹಿ, ಚುರು, ನಾಗೌರ್ ಮತ್ತು ಹನುಮಾನ್ ಗಢ್ ನಲ್ಲಿ ಸಾವಿರಾರು ಎಕರೆ ಬೆಳೆ ಮಿಡತೆ ದಾಳಿಯಿಂದ ಹಾನಿಗೊಳಗಾಗಿದೆ ಎಂದು ವರದಿ ತಿಳಿಸಿದೆ.

ಕಳೆದ ವರ್ಷ ಮೇ ತಿಂಗಳಿನಲ್ಲಿ ದಕ್ಷಿಣ ಪಾಕಿಸ್ತಾನದಿಂದ ಹಾರಿ ಬಂದ ಲಕ್ಷಾಂತರ ಮಿಡತೆಗಳ ದಾಳಿಯಿಂದ ಖಾರೀಫ್ ಬೆಳೆ ನಾಶವಾಗಿತ್ತು. ಇದೀಗ ರಾಬಿ (ಹಿಂಗಾರು) ಬೆಳೆ ಮಿಡತೆಗಳ ದಾಳಿಗೆ ನಾಶವಾಗಿದೆ ಎಂದು ವರದಿ ವಿವರಿಸಿದೆ.

ಏನಿದು ಕೀಟಬಾಧೆ?

ಇದರಲ್ಲಿ ಸಣ್ಣ ಮತ್ತು ದೊಡ್ಡ ಜಾತಿಯ ಮಿಡತೆಗಳು ಇದ್ದು, ಇಂತಹ ಕೀಟಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ. ತೆಳುವಾದ ಉದ್ದ ಕಾಲುಗಳನ್ನು ಹೊಂದಿರುವ ಮಿಡತೆಗಳು ಸುಲಭವಾಗಿ ಹಾರಬಲ್ಲವು. ಇವು ಒಂಟಿಯಾಗಿರುವುದೇ ಹೆಚ್ಚು. ಆದರೆ ಕೆಲವೊಂದು ಸಂದರ್ಭದಲ್ಲಿ ಏಕಕಾಲಕ್ಕೆ ಅಧಿಕವಾಗಿ ಗುಂಪು, ಗುಂಪಾಗಿ ದಾಳಿ ಮಾಡುತ್ತವೆ. 1993ರಲ್ಲಿ ಲಕ್ಷಾಂತರ ಮಿಡತೆಗಳು ಬೆಳೆಗಳ ಮೇಲೆ ದಾಳಿ ನಡೆಸಿದ್ದವು.

Advertisement

ಈ ಮಿಡತೆಗಳ ಮೂಲ ಆಫ್ರಿಕಾವಾಗಿದ್ದು, ಮಳೆಗಾಲದ ನಂತರ ಮಿಡತೆಗಳು ಮಧ್ಯ ಏಷ್ಯಾಗಳ ಮೂಲಕ ಹಾರಾಟ ನಡೆಸುತ್ತಾ ಪಾಕಿಸ್ತಾನಕ್ಕೆ ಬರುತ್ತವೆ. ಒಂದು ದಿನಕ್ಕೆ ಮಿಡತೆ ಸರಾಸರಿ 200 ಕಿಲೋ ಮೀಟರ್ ದೂರದವರೆಗೆ ಗಾಳಿಯಲ್ಲಿ ಹಾರಾಡುತ್ತ ಸಾಗಬಲ್ಲದು ಎಂದು ವರದಿ ವಿವರಿಸಿದೆ.

ಲಕ್ಷಾಂತರ ಸಂಖ್ಯೆಯಲ್ಲಿ ದಾಳಿ ನಡೆಸುವ ಮಿಡತೆಗಳು ಬೆಳೆಗಳ ಮೇಲೆ ದಾಳಿ ನಡೆಸುತ್ತವೆ. ದೊಡ್ಡ ಮಿಡತೆಯೊಂದು ಅಂದಾಜು ತನ್ನ ತೂಕದಷ್ಟೇ ದಿನಂಪ್ರತಿ ಆಹಾರ(ಬೆಳೆ)ವನ್ನು ತಿನ್ನುತ್ತದೆ. ಒಂದು ದಿನಕ್ಕೆ 2 ಗ್ರಾಂನಷ್ಟು ಬೆಳೆ ತಿನ್ನುತ್ತದೆ. ಹೀಗೆ 40 ಮಿಲಿಯನ್ ಮಿಡತೆಗಳು ಒಂದು ದಿನಕ್ಕೆ ತಿನ್ನುವ ಬೆಳೆಗಳು 35 ಸಾವಿರ ಜನರ ಆಹಾರಕ್ಕೆ ಸಮನಾಂತರವಾಗಿದೆ ಎಂದು ವರದಿ ತಿಳಿಸಿದೆ.

ಈ ಮಿಡತೆಗಳು ಎಲೆ, ಹೂವು, ಹಣ್ಣುಗಳು, ಬೀಜ, ಗೋಧಿ, ಗಿಡದ ಕಾಂಡ, ಕೊಂಬೆಗಳನ್ನು ತಿನ್ನುತ್ತವೆ. ಭಾರೀ ಪ್ರಮಾಣದಲ್ಲಿ ಮಿಡತೆಗಳು ಹೀಗೆ ತಿನ್ನುವುದರಿಂದ ಇಡೀ ಬೆಳೆಯೇ ನಾಶವಾಗುತ್ತದೆ ಎಂದು ವರದಿ ಹೇಳಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಮಿಡತೆ, ಕೀಟಗಳ ದಾಳಿಗೆ ರಾಜಸ್ಥಾನದ ರೈತರು ಕಂಗಾಲಾಗಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next