Advertisement
ಸಿಂಧನೂರಿನಲ್ಲಿ ನೆಲೆಸಿರುವ ಬದಿ ಕುಟುಂಬ ಕಳೆದ 60 ವರ್ಷಗಳಿಂದ ಕೊಳಲು ನಾದಕ್ಕೆ ಮಿಡಿಯುತ್ತಿದೆ. ಇದರ ಫಲವಾಗಿ ಕುಟುಂಬಸ್ಥರು ತಯಾರಿಸುತ್ತಿರುವ ಕೊಳಲುಗಳು ವಿದೇಶದಲ್ಲೂ ಸದ್ದು ಮಾಡುತ್ತಿವೆ. ಬದುಕಿಗಾಗಿ ಬೇರೆ ವೃತ್ತಿಗಳನ್ನು ಅವಲಂಬಿಸಿದ್ದರೂ ಇವರ ಕುಟುಂಬಸ್ಥರು ಅಜ್ಜನ ಕಾಲದಿಂದಲೂ ಕೊಳಲು ನುಡಿಸುವುದನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಇದರ ಪ್ರಭಾವ ಯಾವ ಮಟ್ಟಿಗೆ ಎಂದರೆ ಇವರ ಮನೆಯಲ್ಲಿನ ನಾಲ್ಕು ವರ್ಷದ ಪೋರ ಆಯುಷ್ ಕೂಡ ಕೊಳಲು ನುಡಿಸಿ ಗಮನ ಸೆಳೆಯಲಾರಂಭಿಸಿದ್ದಾನೆ.
Related Articles
Advertisement
ಸುಕಾಲಪೇಟೆ ಮಾರ್ಗದಲ್ಲಿನ ಕಚೇರಿಯೊಂದನ್ನು ಈ ಕುಟುಂಬ ಕೊಳಲು ತಯಾರಿಕೆಗೆ ಮೀಸಲಿಟ್ಟಿದೆ. ಇಲ್ಲಿ ಸಿದ್ಧವಾಗುತ್ತಿರುವ ಕೊಳಲು ವಿದೇಶಕ್ಕೂ ರಫ್ತಾಗುತ್ತಿವೆ. ಡೆನ್ಮಾರ್ಕ್, ನೇಪಾಳ, ಲಂಡನ್, ಅಮೆರಿಕ, ಬಾಂಗ್ಲಾ, ಫ್ರಾನ್ಸ್‌ಗೂ ಇಲ್ಲಿನ ಕೊಳಲು ಹೋಗಿವೆ. ಆನ್‌ಲೈನ್ ಮಾರ್ಕೆಂಟಿಂಗ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಅವರಿಗೆ ಸೇವೆ ಒದಗಿಸಲಾರಂಭಿಸಿದ್ದಾರೆ. ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಇಲ್ಲಿಂದಲೇ ಕೊಳಲು ಕಳುಹಿಸಲಾಗುತ್ತಿದೆ. ವಿಜಯಕುಮಾರ್ ಬದಿ ತಂಡ ಕೊಳಲು ತಯಾರಿಕೆಗೆ ಹೆಚ್ಚಿನ ಒತ್ತು ನೀಡಲಾರಂಭಿಸಿದ್ದಾರೆ. ಸಿಂಧನೂರಿನ ಕುಟುಂಬವೊಂದು ಕೊಳಲಿನ ಮೂಲಕವೇ ತಾಲೂಕಿನಲ್ಲಿ ಪ್ರಖ್ಯಾತಿ ಗಳಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:ಪಾದಯಾತ್ರೆ ಮೂಲಕ ಕಾಂಗ್ರೆಸ್ ಕೋವಿಡ್ ವಿಸ್ತಾರ ಮಾಡಲು ನೋಡುತ್ತಿದೆ: ನಳಿನ್ ಕುಮಾರ್ ಕಟೀಲ್
ಬೆರಳು ಕಟ್ ಆದ್ರೂ ಬಿಡಲಿಲ್ಲ
ಸ್ಟಿಲ್ ಬ್ಯುಸಿನೆಸ್ ಮಾಡುತ್ತಿರುವ ರಾಘವ್ ಬದಿ ಅವರ ಬೆರಳು ಕಟ್ ಆಗಿತ್ತು. ಆಗ ಐದಾರು ವರ್ಷಗಳ ಕಾಲ ಅವರು ಕೊಳಲು ನುಡಿಸಲು ಸಾಧ್ಯವಾಗಿರಲಿಲ್ಲ. ಆದರೆ, ಕೊಳಲಿನ ಮೇಲಿನ ಮೋಹ ಅವರನ್ನು ಕೈ ಬಿಡಲಿಲ್ಲ. ನಿಧಾನವಾಗಿ ನುಡಿಸಲು ಆರಂಭಿಸುತ್ತಲೇ ಮತ್ತೆ ಹಾದಿಗೆ ಮರಳಿದ್ದಾರೆ. ಇಂದು ಸರಾಗವಾಗಿ ಅವರು ಕೊಳಲು ನುಡಿಸಲು ಆರಂಭಿಸಿದರೆ, ಇಡೀ ಸಭೆಗಳೇ ನಿಶ್ಯಬ್ದಗೊಳ್ಳುತ್ತವೆ.
ಪುಟ್ಟ ಪೋರರೂ ಆಕರ್ಷಣೆ
ಬದಿ ಕುಟುಂಬದ ಸದಸ್ಯ 14 ವರ್ಷದ ವಿರಾಟ್ ಕೂಡ ಕೊಳಲು ನುಡಿಸುವುದಷ್ಟೇ ಅಲ್ಲ; ಯಾವುದೇ ಕಾರ್ಯಕ್ರಮ ಇದ್ದರೆ ಇಡೀ ಜನರನ್ನು ಆಕರ್ಷಿಸಿ ಇಡುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. 4 ವರ್ಷದ ಪೋರ ಆಯುಷ್ ಕೂಡ ಸಾಥ್ ನೀಡುತ್ತಿದ್ದು, ಮಕ್ಕಳು, ಮೊಮ್ಮಕ್ಕಳಿಗೂ ಅದೇ ವಿದ್ಯೆಯನ್ನು ಧಾರೆ ಎರೆಯುತ್ತಿರುವ ಕುಟುಂಬದ ನಡೆ ಶ್ಲಾಘನೆಗೆ ಪಾತ್ರವಾಗಿದೆ.
-ಯಮನಪ್ಪ ಪವಾರ