ಅದು ಮಾಗಿಯ ಚಳಿ ಕೊರೆಯುವ ಕಾಲ. ಆಗಷ್ಟೇ ನಾನು ಸ್ಪರ್ಧಾತ್ಮಕ ಪರೀಕ್ಷೆಯ ಕೋಚಿಂಗ್‌ಗೆ ಸೇರಿದ್ದೆ. ಅಲ್ಲಿ ಕೆಲವರು ಮಾತ್ರ ನನ್ನ ಸಹಪಾಠಿಗಳು. ಉಳಿದವರೆಲ್ಲ ಬೇರೆ ಬೇರೆ ಕಾಲೇಜುಗಳಿಂದ ಬಂದವರು. ಅವತ್ತು ಇಂಗ್ಲಿಷ್ ಕ್ಲಾಸ್ ನಡೆಯುತ್ತಿತ್ತು. ತಮಾಷೆ ಮಾಡುತ್ತಲೇ ನಿರರ್ಗಳವಾಗಿ ಪಾಠ ಮಾಡುವ ಇಂಗ್ಲಿಷ್ ಉಪನ್ಯಾಸಕರೆಂದರೆ ಎಲ್ಲರಿಗೂ ಇಷ್ಟ.
ಎಂದಿನಂತೆ ಆಸಕ್ತಿಯಿಂದ ಪಾಠ ಕೇಳುತ್ತಿದ್ದೆ. ಇಂಗ್ಲಿಷ್ ವ್ಯಾಕರಣದ ಬಗ್ಗೆ ಹೇಳುತ್ತಾ ಸರ್, “ಐ ಲವ್ ಯೂ’ ಅನ್ನೋದನ್ನು ಪ್ರಶ್ನಾರ್ಥಕ ರೂಪದಲ್ಲಿ ಹೇಗೆ ಹೇಳುತ್ತೀರಿ?’ಅಂತ ಕೇಳಿದರು. ನಾನು ಎದ್ದು ನಿಂತು, “ಡು ಯು ಲವ್ ಮಿ?’ ಅಂದುಬಿಟ್ಟೆ. ನನ್ನ ಉತ್ತರ ಕೇಳಿ ಎಲ್ಲರೂ ಮುಸಿಮುಸಿ ನಕ್ಕರೆ, ಹುಡುಗಿಯರ ಗುಂಪಿನಿಂದ “ಯಸ್’ ಎಂಬ ಉತ್ತರ ಬಂತು!
ನಾನು ಅವಕ್ಕಾಗಿ ಆ ಕಡೆ ನೋಡಿದೆ. ಬಿದಿಗೆ ಚಂದ್ರನನ್ನು ಮೊಗದಲ್ಲಿ ಹೊತ್ತ ಚೆಲುವೆ ನನ್ನತ್ತ ನೋಡುತ್ತಿದ್ದಳು. ತುಟಿಯಂಚಲ್ಲಿ ತುಂಟ ನಗುವಿತ್ತು. ಯಾರಪ್ಪಾ ಇವಳು ಅಂತ ತಲೆ ಕೆರೆದುಕೊಂಡರೂ ಉತ್ತರ ಹೊಳೆಯಲಿಲ್ಲ. ಅವತ್ತು, ಉಪನ್ಯಾಸಕರ ಪಾಠ ಒಂದಕ್ಷರವೂ ಕಿವಿಗೆ ಬೀಳಲಿಲ್ಲ. ಅವಳು ಕೂಡಾ ಆ ಪೀರಿಯಡ್ ಮುಗಿದ ಮೇಲೂ ಒಂದೆರಡು ಸಲ ನನ್ನತ್ತ ತಿರುಗಿ ನೋಡಿ, ತಲೆ ಕೆಡಿಸಿಬಿಟ್ಟಳು. ಬಿರು ಬೇಸಿಗೆಯಲ್ಲಿ ಜಡಿ ಮಳೆ ಸುರಿದಾಗ ಆಗುತ್ತಲ್ಲ, ಅವಳ ನೋಟದಲ್ಲಿ ಆ ಕಂಪಿತ್ತು. ವಸಂತ ಋತುವಿನಲ್ಲಿ ಗಿಡಮರಗಳು ಚಿಗುರುವಂತೆ ನನ್ನ ಹೃದಯಾಳದಲ್ಲಿ ಒಲವು ಅಂಕುರಿಸಿತು.
ಅಂದಿನಿಂದ ಪಠ್ಯದ ವಿಷಯವನ್ನು ಅನುಸರಿಸಿದ್ದಕ್ಕಿಂತ ಅವಳನ್ನು ಕದ್ದು ನೋಡಿದ್ದೇ ಹೆಚ್ಚು. ಭಾವನೆಗಳನ್ನು ಅವಳ ಮುಂದೆ ಹೇಳಿಕೊಳ್ಳದೆ, ಕನಸಿನ ಲೋಕದಲ್ಲಿ ವಿಹರಿಸುತ್ತಲೇ ಸಮಯ ಕಳೆಯಿತು. ಕೋಚಿಂಗ್‌ನ ದಿನಗಳು ಮುಗಿದೇಬಿಟ್ಟವು. ಪರಿಚಿತರಾಗಲು ನಮ್ಮಿಬ್ಬರಿಗೂ ಅವಕಾಶ ಸಿಗಲೇ ಇಲ್ಲ. ನನ್ನೆದೆಯಲಿ ಮೊಳೆತ ಅನುರಾಗದ ಬೀಜ ಟಿಸಿಲೊಡೆದು, ಚಿಗುರಲೇ ಇಲ್ಲ. ಅವಳನ್ನು ಒಮ್ಮೆಯಾದರೂ ಮಾತನಾಡಿಸಬೇಕಿತ್ತು ಎಂಬ ಕೊರಗು ಮನಸ್ಸನ್ನು ಕೊರೆಯುತ್ತಲೇ ಇದೆ.
ಶಿವರಾಜ್ ಬಿ.ಎಲ…. ದೇವದುರ್ಗ