ಹುಮನಾಬಾದ: ಐದು ವರ್ಷಗಳ ಹಿಂದೆ ಪಟ್ಟಣದ ಕಲ್ಲೂರ ರಸ್ತೆ ವಿಸ್ತರಣೆ ಕೈಗೊಂಡ ನಂತರ ಕಾರಣಾಂತರದಿಂದ ನನೆಗುದಿಗೆ ಬಿದ್ದದ್ದ ನಗರ ಸೌಂದರ್ಯ ವೃದ್ಧಿಸುವ ಗಿಡಗಳನ್ನು ಅಳವಡಿಕೆ ಕಾರ್ಯಕ್ಕೆ ಪುರಸಭೆ ಆಡಳಿತ ಇದೀಗ ಸಜ್ಜುಗೊಂಡಿದ್ದು ಅದಕ್ಕಾಗಿ ಅಗತ್ಯ ಸಿದ್ಧತೆಗೆ ಅಣಿಯಾಗಿದೆ.
2015-16ನೇ ಸಾಲಿನಲ್ಲಿ 13 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ವಿಭಜಕ ಕಾಮಗಾರಿ ಕೈಗೊಳ್ಳಲಾಗಿದೆ. 11 ಲಕ್ಷ ರೂ. ವೆಚ್ಚದಲ್ಲಿ ಬಟರ್ ಫ್ಲೈ ಮಾದರಿ ವಿದ್ಯುತ್ ಕಂಭ ಅಳವಡಿಕೆ, 7 ಲಕ್ಷ ರೂ ವೆಚ್ಚದಲ್ಲಿ ವಿಭಜಕ ಮೆಟಾಲ್ ಜಾಲಿ ಅಳವಡಿಕೆ ಹಾಗೂ ಪಾದಚಾರಿ ರಸ್ತೆಯನ್ನು 1ಕೋಟಿ ರೂ. ಅನುದಾದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಶಾಸಕ ರಾಜಶೇಖರ ಪಾಟೀಲ ಅವರ ಆಶಯದಂತೆ ನಗರ ಸೌಂದರ್ಯ ವೃದ್ಧಿಸುವ ಗಿಡಗಳ ಅಳವಡಿಕೆ ಕಾರ್ಯ ನನೆಗುದಿಗೆ ಬಿದ್ದಿದ್ದರಿಂದ ರಸ್ತೆವಿಭಜಕ ಮಧ್ಯದಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆದು ಅಂದ ಕೆಡಿಸುತ್ತಿದ್ದರು. ಈ ಕುರಿತು ಉದಯವಾಣಿಯಲ್ಲಿ ಹಲವು ಬಾರಿ ವಿಶೇಷ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡ ಪುರಸಭೆ ಆಡಳಿತ ಇದೀಗ ಅಭಿವೃದ್ಧಿಗೆ ಮುಂದಾಗಿದೆ.
ಹುಮನಾಬಾದ ಪಟ್ಟಣದ ಡಾ|ಬಿ.ಆರ್.ಅಂಬೇಡ್ಕರ್ ವೃತ್ತದಿಂದ ವಾಂಜ್ರಿ ಮತ್ತು ಕೆಇಬಿ ಬೈಪಾಸ್ ರಸ್ತೆಯಿಂದ ಪ್ರವಾಸಿ ಮಂದಿರದ ವರೆಗೆ ರಸ್ತೆ ವಿಭಜಕದ ಮಧ್ಯದಲ್ಲಿ ಸೌಂದರ್ಯು ವೃದ್ಧಿಸುವ ಅತ್ಯಾಕರ್ಷಕ ಗಿಡ ನೆಡಲು ಎರಡು ರಸ್ತೆಗಳಿಗೆ ತಲಾ ರೂ.5ಲಕ್ಷ ದಂತೆ ಒಟ್ಟು ರೂ.10ಲಕ್ಷ ಅನುದಾನ ನಿಗದಿಪಡಿಸಲಾಗಿದೆ. ಗಿಡಗಳನ್ನು ನೆಡುವುದಕ್ಕಾಗಿಯೇ ವಿಭಜಕದ ಮಧ್ಯ ಉತ್ತಮ ಬೆಳವಣಿಗೆಗೆ ಅಗತ್ಯವಿರುವ ಗುಣಮಟ್ಟದ ಮಣ್ಣು ಸುರಿಯುವ ಕಾರ್ಯ ವಾರದಿಂದ ಕೈಗೆತ್ತಿಕೊಳ್ಳಲಾಗಿದೆ.
ನೆಡುವುದು ಯಾವ ಗಿಡ?:
ವಿಭಜಕ ಮತ್ತು ರಸ್ತೆಗೆ ಯಾವುದೇ ಹಾನಿಯಾಗದಿರುವಂತಹ, ರಸ್ತೆ ಸೌಂದರ್ಯ ವೃದ್ಧಿಸುವ ಗಿಡಗಳಾದ ವೆಸ್ಟ್ ಇಂಡಿಯನ್ ಚೆರ್ರಿ, ಆಕಾಶ ಮಲ್ಲಿಗೆ, ಅರಿಶಿಣ ಹೂಬಿಡುವ ಟೆಕೋಮೊ, ಹೊಂಗೆ ಮರ, ಫೈಕಸ್ ಬ್ರೀಡಾ ಇನ್ನಿತರ ಸೌಂದರ್ಯ ವರ್ಧಕ ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದ್ದು, ಶೀಘ್ರ ಕಾರ್ಯ ಆರಂಭಗೊಳ್ಳಲಿದೆ. ಇವು ರಸ್ತೆ ಸೌಂದರ್ಯ ವೃದ್ಧಿಯೊಂದಿಗೆ ಮಾಲಿನ್ಯ ಹೀರಿಕೊಂಡು ಶುದ್ಧ ಗಾಳಿ ಪೂರೈಸುತ್ತವೆ.
•ಶಶಿಕಾಂತ ಕೆ.ಭಗೋಜಿ