Advertisement
ಗುರುವಾರ ಮಧ್ಯಾಹ್ನದವರೆಗೆ ಘಟಪ್ರಭಾ ನದಿಗೆ ಬರುವ ನೀರಿನ ಪ್ರಮಾಣ ಹೆಚ್ಚಾಗಿತ್ತು. ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಸಂಜೆವರೆಗೆ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಯಾವುದೇ ರೀತಿಯಲ್ಲೂ ಏರಿಕೆ ಕಂಡುಬಂದಿಲ್ಲ. ಎರಡು ದಿನಗಳಿಂದ ಢವಳೇಶ್ವರ ಸೇತುವೆ ಮತ್ತು ನಾಲ್ಕು ದಿನಗಳಿಂದ ನಂದಗಾಂವ-ಅವರಾದಿ, ಅಕ್ಕಿಮರಡಿ-ಮಿರ್ಜಿ ಸೇತುವೆಗಳು ಜಲಾವೃತವಾಗಿವೆ. ಇದರಿಂದಾಗಿ ನೆರೆಯ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಉಭಯ ಸೇತುವೆಗಳ ಮೇಲೆ ಸುಮಾರು 10ರಿಂದ 12 ಅಡಿಗಳಷ್ಟು ನೀರು ಹರಿಯುತ್ತಿದೆ. ಅಲ್ಲದೇ ಉಭಯ ಸೇತುವೆಗಳ ಹತ್ತಿರ ನದಿಯ ಗಾತ್ರ ಚಿಕ್ಕದಾಗಿರುವುದರಿಂದ ಅಕ್ಕಪಕ್ಕದ ಹೊಲಗಳಿಗೂ ನದಿಯ ನೀರು ನುಗ್ಗಿದೆ.
Related Articles
Advertisement
ಕಳೆದೊಂದು ವಾರದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಇದರಿಂದ ನದಿ ದಡದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಕೃಷ್ಣೆ ಮೈದುಂಬಿಕೊಂಡಿದ್ದನ್ನು ವಿಕ್ಷೀಸಿದ ತಾಲೂಕಾಡಳಿತ ರಕ್ಷಣಾ ಕಾರ್ಯದ ಸಿದ್ಧತೆ ನಡೆಸುತ್ತಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಸೇತುವೆ ಕುಡಚಿಯ ಸೇತುವೆ ಮೇಲೆ 10 ಅಡಿ ನೀರು ನಿಂತಿದ್ದರಿಂದ ಮಹಾರಾಷ್ಟ್ರಕ್ಕೆ ತೆರಳುವ ಜಮಖಂಡಿ-ಅಥಣಿ ತಾಲೂಕಿನ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಹಿಪ್ಪರಗಿ ಬ್ಯಾರೇಜ್ ಮುಖಾಂತರ ಮಹಾರಾಷ್ಟ್ರಕ್ಕೆ ಸಂಚಾರ ಆರಂಭಗೊಂಡಿದೆ.
ಪ್ರವಾಹ ಭೀತಿ ಮುನ್ನಚ್ಚರಿಕೆ ಕ್ರಮವಾಗಿ ರಕ್ಷಣಾ ಬೋಟ್‌ಗಳನ್ನು, ಹಾವುಹಿಡಿ ಯುವ ತಂಡ, ಉತ್ತರ ಕನ್ನಡ-ಕಾರವಾರ ಜಿಲ್ಲೆಗಳಿಂದ ಈಜುಗಾರರನ್ನು ಕರೆಯಿಸಲಾಗಿದೆ. ತಾಲೂಕಿನ ಮುತ್ತೂರು-ಕಂಕನವಾಡಿ ಗ್ರಾಮಗಳು ಪ್ರವಾಹಕ್ಕೆ ಬೇಗ ತುತ್ತಾಗುವ ಸಾಧ್ಯತೆ ಇದ್ದು, ಮುತ್ತೂರು-ತುಬಚಿ ಗ್ರಾಮಗಳ ಮಧ್ಯದ ರಸ್ತೆ ಸಂಪೂರ್ಣ ಮುಳುಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ ವಿಶೇಷ ಬೋಟ್‌ಗಳನ್ನು ನೀಡಲಾಗಿದ್ದು, ಬೋಟ್ ಚಾಲನೆಗೆ ಸಾಕಷ್ಟು ಪ್ರಮಾಣದ ಸೀಮೆಎಣ್ಣೆ ನೀಡಲಾಗಿದೆ. ತಾಲೂಕಿನ ಯಾವ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗಿಲ್ಲ. ಗ್ರಾಮದ ಜನತೆಗೆ ನದಿ ತೀರದಲ್ಲಿ ಬಟ್ಟೆ ತೊಳೆಯುವುದಾಗಲೀ, ಮಕ್ಕಳನ್ನು ನದಿ ಕಡೆ ಬಿಡುವುದಾಗಲಿ ಮಾಡಬಾರದು ಎಂದು ಪ್ರಕಟಣೆ ನೀಡಲಾಗಿದೆ. ಶುದ್ದ ಕುಡಿವ ನೀರನ್ನು ಬಳಸುವಂತೆ ಸೂಚಿಸಲಾಗಿದೆ. ಈಗಾಗಲೇ ತಾಲೂಕಿನ 27 ನೋಡೆಲ್ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.