ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಸ್ವಾತಿ ಮಳೆಯ ಅಬ್ಬರ ಜೋರಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯ ಭೀಕರತೆ ಮುಂದುವರಿದಿದೆ. ವರುಣನ ರುದ್ರನರ್ತನಕ್ಕೆ ಬುಧವಾರ ಮತ್ತೆ ಐವರು ಬಲಿಯಾಗಿದ್ದಾರೆ. ನದಿಗಳಲ್ಲಿ ಪ್ರವಾಹದ ಮಟ್ಟ ಏರಿಕೆಯಾಗುತ್ತಿದೆ. ಮಲೆನಾಡು, ಕರಾವಳಿ ಭಾಗದಲ್ಲೂ ಮಳೆಯಾಗಿದೆ. ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಯಗಚಿಯಲ್ಲಿ ರಾಜ್ಯದಲ್ಲಿಯೇ ಅಧಿಕ, 7 ಸೆಂ.ಮೀ. ಮಳೆಯಾಯಿತು. ಶಿರಾಲಿಯಲ್ಲಿ ಗರಿಷ್ಠ 33.8 ಡಿ.ಸೆ.ಮತ್ತು ಬೀದರ್‌ನಲ್ಲಿ ಕನಿಷ್ಠ 18.4 ಡಿ.ಸೆ.ತಾಪಮಾನ ದಾಖಲಾಯಿತು.
“ಪುನರ್ ವಸತಿಗೆ ನೆರವು ನೀಡಿ’
ಬೆಂಗಳೂರು: ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಅಪಾರ ಪ್ರಮಾಣದ ನಷ್ಟ, ಜೀವಹಾನಿ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಣೆಯಿಂದ ನೆರವು ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಈ ಕುರಿತು ಪತ್ರ ಬರೆದಿರುವ ಅವರು, ಬೆಳಗಾವಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ 15 ಜಿಲ್ಲೆಗಳಲ್ಲಿ ಇತಿಹಾಸದಲ್ಲಿ ಕಂಡು ಕೇಳರಿಯದ ಪ್ರಕೃತಿ ವಿಕೋಪ ಸಂಭವಿಸಿ, ಜನತೆಯನ್ನು ಸಂಕಷ್ಟಕ್ಕೀಡು ಮಾಡಿದೆ.
ಅಲ್ಲದೆ, ಅಪಾರ ಆಸ್ತಿ -ಪಾಸ್ತಿಗೆ ನಷ್ಟವುಂಟು ಮಾಡಿದೆ. ಆಗಸ್ಟ್ ತಿಂಗಳಲ್ಲಿ ಆರಂಭವಾದ ಈ ಸಂಕಷ್ಟದಲ್ಲಿ ನೊಂದ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ಅಸಂಖ್ಯಾತ ಸಹೃದಯ ಸಾರ್ವಜನಿಕರ ಬಂಧುಗಳು ಸ್ಪಂದಿಸಿ, ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದ್ದನ್ನು, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕ್ರಮಗಳಿಗೆ ಕೈ ಜೋಡಿಸಿರುವುದನ್ನು ಧನ್ಯತಾಭಾವದಿಂದ ಸ್ಮರಿಸಿದ್ದೇವೆ.
ಗಾಯದ ಮೇಲೆ ಬರೆ ಎಳೆದಂತೆ ರಾಜ್ಯದಲ್ಲಿ ಮಳೆಯ ರುದ್ರ ನರ್ತನ ಮುಂದುವರಿದಿದೆ. 13 ಜೀವಗಳನ್ನು ಬಲಿ ಪಡೆದಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸಂತ್ರಸ್ತರ ಜತೆ ನಾವು ನಿಂತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪರಿಹಾರ ಕಾರ್ಯಗಳ ಅನುಷ್ಠಾನದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ, ನೆರೆ ಸಂತ್ರಸ್ತರಿಗೆ ನೆರವಾಗಲು ಹಾಗೂ ಬದುಕು ಕಟ್ಟಿಕೊಳ್ಳಲು ಸ್ವ ಪ್ರೇರಣೆಯಿಂದ ದೇಣಿಗೆ ನೀಡಬೇಕು ಎಂದು ಕಳಕಳಿಯಿಂದ ಮನವಿ ಮಾಡುತ್ತಿದ್ದೇನೆ.
ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80ಜಿ (2) ರಡಿ ತೆರಿಗೆ ವಿನಾಯಿತಿ ಇದೆ ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿಯವರ ಪರಿಹಾರ ನಿಧಿ ಪ್ರಕೃತಿ ವಿಕೋಪ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ವಿಧಾನಸೌಧ ಶಾಖೆ), ಖಾತೆ ಸಂಖ್ಯೆ 37887098605 ಖಾತೆಗೆ ದೇಣಿಗೆ ಸಲ್ಲಿಸಬಹುದು. ನಂ.235-ಎ, 2 ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001ಗೆ ಚೆಕ್/ಡಿಡಿ ಕಳುಹಿಸಬಹುದು ಎಂದು ಮನವಿ ಮಾಡಲಾಗಿದೆ.
ನಮ್ಮ ಗ್ರಹಚಾರ ಅನ್ನಿಸುತ್ತೆ:ಸಿಎಂ
ಬೆಂಗಳೂರು: ರಾಜ್ಯದಲ್ಲಿ ನೆರೆ ಬಂದ ಪ್ರದೇಶದಲ್ಲೇ ಮತ್ತೆ ಮಳೆ ಬಂದಿದೆ. ನಮ್ಮ ಗ್ರಹಚಾರ ಅನ್ನಿಸುತ್ತೆ. ಮತ್ತೆ ವರುಣನ ಅವಕೃಪೆಗೆ ತುತ್ತಾಗಿದ್ದೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಬೇಸರದಿಂದ ನುಡಿದರು. ಡಾಲರ್ ಕಾಲೋನಿ ನಿವಾಸದ ಬಳಿ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನೆರೆ ಪ್ರದೇಶದಲ್ಲಿ ಮಳೆ ಬಂದು ಊರು, ವಾಹನಗಳು ಕೊಚ್ಚಿ ಹೋಗಿವೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಮತ್ತೆ ಮಳೆಯಾಗಿ ಹಾನಿಯಾಗಿರುವುದರಿಂದ ನಷ್ಟದ ಅಂದಾಜು ಮಾಡಿ ಕೇಂದ್ರದಿಂದ ಮತ್ತಷ್ಟು ಪರಿಹಾರ ಕೇಳುತ್ತೇವೆ. ಹಿಂದಿನ ನೆರೆ ಸಂಬಂಧ ಶೀಘ್ರದಲ್ಲೇ ಕೇಂದ್ರ ಸರ್ಕಾರ ಮತ್ತಷ್ಟು ಪರಿಹಾರ ನೀಡುವ ವಿಶ್ವಾಸವಿದೆ ಎಂದು ತಿಳಿಸಿದರು.