Advertisement

ಪ್ರವಾಹ ಬಂತು; ಕುಡಿವ ನೀರೇ ಹೋಯ್ತು!

12:14 PM Aug 20, 2019 | Suhan S |

ಅಮೀನಗಡ: ಪ್ರವಾಹ ಬಂದು ಜಿಲ್ಲೆಯ ಹಲವು ಗ್ರಾಮಗಳ ಜನರು ನೀರಿನಲ್ಲಿ ನಿಂತು ಸಂಕಷ್ಟಪಡುತ್ತಿದ್ದರೆ, ಪ್ರವಾಹ ಬಂದಿದ್ದೇ ಅಮೀನಗಡ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಹೌದು, ಈ ಬಾರಿಯ ಪ್ರವಾಹ ಪಟ್ಟಣಕ್ಕೆ ತೀವ್ರ ಸಮಸ್ಯೆ ಮಾಡಿದೆ. ಪಟ್ಟಣಕ್ಕೆ ಯಾವ ನದಿಯ ನೀರೂ ನುಗ್ಗಿಲ್ಲ. ಜನ ನೀರಲ್ಲಿ ನಿಂತಿಲ್ಲ. ಆದರೆ, ನಿತ್ಯ ಪಟ್ಟಣಕ್ಕೆ ಬರುತ್ತಿದ್ದ ಕುಡಿಯುವ ನೀರು ಪೂರೈಕೆಯ ಪೈಪ್‌ಲೈನ್‌, ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ ಕಳೆದ 15 ದಿನಗಳಿಂದ ಅಮೀನಗಡಕ್ಕೆ ನೀರಿನ ಸಮಸ್ಯೆ ತಲೆದೋರಿದ್ದು, ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್‌ ಬಂದರೆ ಸಾಕು, ಜನರು ಕೈಯಲ್ಲಿ ಕೊಡ ಹಿಡಿದು ಓಡೋಡಿ ನೀರು ಹಿಡಿಯುತ್ತಿದ್ದಾರೆ. ಮಳೆಗಾಲದಲ್ಲೂ ನೀರಿನ ಸಮಸ್ಯೆ ಅಂದರೆ, ವಿಪರ್ಯಾಸವೇ ಸರಿ ಎಂಬ ಪ್ರಜ್ಞಾವಂತರಿಂದ ಕೇಳಿ ಬರುತ್ತಿವೆ.

ಪ್ರವಾಹಕ್ಕೆ ಪೈಪ್‌ಲೈನ್‌ ಸಮಸ್ಯೆ: ಅಮೀನಗಡ ಪಟ್ಟಣಕ್ಕೆ ಮಲ್ಟಿ ಸಿಟಿ ಸ್ಕೀಮ್‌ ಯೋಜನೆಯಿಂದ ನೀರು ಪೂರೈಸಲಾಗುತ್ತಿತ್ತು. ಮಲಪ್ರಭಾ ನದಿಯ ಅಬ್ಬರದ ಪ್ರವಾಹದಿಂದ ನೀರು ಪೂರೈಸುವ ಪೈಪ್‌ಲೈನ್‌ಗೆ ಹಾನಿಯಾಗಿದೆ. ವಿದ್ಯುತ ಸಮಸ್ಯೆ ಕೂಡಾ ಉದ್ಭವಿಸಿದೆ. ಇದರಿಂದ ಪಟ್ಟಣಕ್ಕೆ ಬರುವ ನೀರು ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶುದ್ಧ ಕುಡಿಯುವ ನೀರಿನ ಸ್ಥಗಿತ: ಪಟ್ಟಣದಲ್ಲಿ ಆರು ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ನಾಲ್ಕು ಶುದ್ದ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ.ಕೇವಲ ಎರಡು ಶುದ್ದ ಕುಡಿಯುವ ನೀರಿನ ಘಟಕಗಲ್ಲಿ ಮಾತ್ರ ನೀರು ಪೂರೈಸಲಾಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಮತ್ತು ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ಗೊಂದಲ: ಶುದ್ದ ಕುಡಿಯುವ ನೀರಿನ ಘಟಕದ ಕುರಿತು ಅಧಿಕಾರಿಗಳಿಗೆ ವಿವರಣೆ ಕೇಳಿದರೆ ಪಪಂ ಇಂಜಿನಿಯರ್‌ ವಿ.ಎಚ್. ಚವಡಿ ಆರು ಘಟಕಗಳಲ್ಲಿ ನಾಲ್ಕು ಘಟಕಗಳು ಪ್ರಾರಂಭವಾಗಿವೆ ಎರಡು ಮಾತ್ರ ಸ್ಥಗಿತಗೊಂಡಿವೆ ಎಂದು ಹೇಳಿದರು. ಈ ಕುರಿತು ಪಪಂ ಮುಖ್ಯಾಧಿಕಾರಿಗಳಿಗೆ ವಿವರಣೆ ಕೇಳಿದರೆ ಅದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾಳೆ ಬೆಳಗ್ಗೆ ಎಲ್ಲ ಪ್ಲಾಂಟ್‌ಗಳಿಗೆ ಭೇಟಿ ನೀಡಿ ಮಾಹಿತಿ ನೀಡುವುದಾಗಿ ಹೇಳಿದರು.

Advertisement

ತಪ್ಪು ಮಾಹಿತಿ ನೀಡಿದ ಇಂಜಿನಿಯರ್‌: ಪಟ್ಟಣದ ಪಪಂ ಇಂಜಿನಿಯರ್‌ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕ ಚಾಲ್ತಿಯಲ್ಲಿವೆ. ಎರಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಆದರೆ, ವಾಸ್ತವದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಮಾತ್ರ ನೀರು ಬರುತ್ತಿದ್ದು, ಉಳಿದ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿಲ್ಲದೇ ಬಂದ್‌ ಆಗಿವೆ.

ಪೈಪ್‌ಲೈನ್‌ ದುರಸ್ತಿಗೆ ಕ್ರಮ:

ಪ್ರವಾಹದಿಂದಾಗಿ ಪೈಪ್‌ಲೈನ್‌ ಕಿತ್ತುಕೊಂಡು ಹೋಗಿದೆ. ಈಗಾಗಲೇ ಕಳೆದ ಐದಾರು ದಿನಗಳಿಂದ ನೀರಿನ ಪೈಪ್‌ಲೈನ್‌ ಕಾಮಗಾರಿ ಮಾಡಲಾಗುತ್ತಿದೆ. ಬಹುತೇಕ ಕಡೆ ನೀರು ಪೂರೈಸುವ ಯಂತ್ರಗಳಲ್ಲಿ ರಾಡಿ ಮಣ್ಣುಗಳಿಂದ ಯಂತ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಪೈಪ್‌ಲೈನ್‌ ದುರಸ್ತಿಗಾಗಿ ಹುಬ್ಬಳ್ಳಿಯಿಂದ ಸಾಮಗ್ರಿ ತರಲಾಗುತ್ತಿದೆ. ಇನ್ನೂ 2-3 ದಿನ ನೀರಿನ ಸಮಸ್ಯೆಯಾಗಲಿದೆ. • ವಿ.ಎಚ್. ಚವಡಿ, ಪಪಂ ಇಂಜಿನಿಯರ್‌, ಅಮೀನಗಡ
ಅಧಿಕಾರಿಗಳ ವಿರುದ್ಧ ಆಕ್ರೋಶ:

ಪಪಂ ಇಂಜಿನಿಯರ್‌ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರಿಗೆ ಸರಿಯಾಗಿ ಯೋಜನಾ ವರದಿ ತಯಾರಿಸಲೂ ಎಸ್ಟಿಮೇಟ್ ಮಾಡಲು ಕೂಡಾ ಬರಲ್ಲ. ಪಟ್ಟಣದಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ ಎಂಬುದರ ಮಾಹಿತಿ ಇಲ್ಲ. •ಮಹಾಂತೇಶ ಹಿರೇಮಠ, ಬಿಜೆಪಿ ಮುಖಂಡರು ಅಮೀನಗಡ
•ಎಚ್.ಎಚ್. ಬೇಪಾರಿ
Advertisement

Udayavani is now on Telegram. Click here to join our channel and stay updated with the latest news.

Next