Advertisement

ಕೃಷಿಗೆ ಕಾಟ ಕೊಡುತ್ತಿದೆ ಕೋತಿಗಳ ಹಿಂಡು

09:40 PM Jun 10, 2019 | mahesh |

ಅರಂತೋಡು: ಅರಂತೋಡು ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳ ಹಾವಳಿ ಹೆಚ್ಚಾಗಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿರುವುದರಿಂದ ರೈತರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ.

Advertisement

ಅಡಿಕೆ, ತೆಂಗು, ಕೊಕ್ಕೊ, ಬಾಳೆ, ಗೇರು, ತರಕಾರಿ ಬೆಳೆಗಳ ಮಿಶ್ರ ಕೃಷಿಗಳು ಇಲ್ಲಿವೆ. ಈ ಬೆಳೆಗಳು ಫ‌ಸಲು ಕೊಡಲು ಅವುಗಳನ್ನು ಅಚ್ಚುಕಟ್ಟಾಗಿ ಆರೈಕೆ ಮಾಡಬೇಕಾಗುತ್ತವೆ. ಸಮಯಕ್ಕೆ ಸರಿಯಾಗಿ ಗೊಬ್ಬರ, ನೀರು ಹಾಕಬೇಕು. ಕ್ರಿಮಿ – ಕೀಟಗಳ ಬಾಧೆಗಳನ್ನು ನಿಯಂತ್ರಿಸಬೇಕು. ಈ ಎಲ್ಲ ಕ್ರಮಗಳನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ಉತ್ತಮ ಫ‌ಸಲನ್ನು ರೈತ ನಿರೀಕ್ಷೆ ಮಾಡಬಹುದು. ಕೊನೆಗೆ ಉತ್ತಮ ಫ‌ಸಲು ಪಡೆದರೂ ಹಳ್ಳಿಗಳಲ್ಲಿ ಕೃಷಿ ಉತ್ಪನ್ನಗಳಿಗೆ ಇಂದು ಮಂಗಗಳ ಕಾಟ ಜಾಸ್ತಿಯಾಗಿವೆ. ಈ ವರ್ಷ ಬರಗಾಲದಿಂದ ಅಲ್ಪ ಸ್ವಲ್ಪ ಉಳಿದ ಕೃಷಿ ಬೆಳೆಗಳನ್ನು ಮಂಗಗಳ ಕಾಟದಿಂದ ಬೆಳೆಗಳನ್ನು ರಕ್ಷಿಸಿಕೊಳಕ್ಷೆು ರೈತರು ತುಂಬಾ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರು ಮಂಗಳಗಳ ಸಮಸ್ಯೆ ಬಗ್ಗೆ ಸರಕಾರ ಮತ್ತು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.

ಗುಂಪಾಗಿ ಲಗ್ಗೆ
ಸುಳ್ಯ ತಾಲೂಕಿನ ಅರಂತೋಡು, ಕಲ್ಲುಗುಂಡಿ ಸಂಪಾಜೆ, ತೊಡಿಕಾನ ಇತರೆಡೆ ಮಂಗಗಳ ಕಾಟ ಜಾಸ್ತಿ ಇದೆ. ಹಳ್ಳಿಗಳ ರೈತರ ತೋಟಗಳಿಗೆ ಗುಂಪು ಮಂಗಳು ಜಾಸ್ತಿ ಲಗ್ಗೆ ಇಡುತ್ತವೆ. ಈ ಗುಂಪಿನಲ್ಲಿ ಸುಮಾರು ಎಪ್ಪತ್ತರಿಂದ ಎಂಬತ್ತು ಮಂಗಳಿರುತ್ತವೆ. ಒಂದು ಯಜಮಾನ ಗಂಡು ಮಂಗವಿರುತ್ತವೆ. ಐದರಿಂದ ಆರು ಹೆಣ್ಣು ದೊಡ್ಡ ಮಂಗಳಿರುತ್ತವೆ. ಉಳಿದ ಮಂಗಗಳು ಇವುಗಳ ಸಂಸಾರ ಆಗಿರುತ್ತವೆ.

ಮಂಗಗಳು ರೈತರು ಕೃಷಿ ತೋಟದಲ್ಲಿ ಕಾಣದ ಸಂದರ್ಭ ತೋಟಗಳಿಗೆ ಗುಂಪು ಗುಂಪಾಗಿಯೇ ಲಗ್ಗೆಯಿಡುತ್ತವೆ. ಹೆಚ್ಚಿನ ಕೃಷಿ ಉತ್ಪನ್ನಗಳನ್ನು ಅವುಗಳು ತಿನ್ನುತ್ತವೆ. ತೆಂಗಿನ ಮರಕ್ಕೆ ಹತ್ತಿದರೆ ಸೀಯಾಳಗಳನ್ನು ತೂತು ಮಾಡಿ ನೀರು ಕುಡಿದು ತಿನ್ನುತ್ತವೆ. ಬಾಳೆಕಾಯಿಗಳನ್ನು ಸುಲಿದು ಮುಕ್ಕುತ್ತವೆ. ಅಡಿಕೆ ಸಿಪ್ಪೆಯನ್ನು ಸುಲಿದು ಅದರ ರಸ ಹೀರುತ್ತವೆ. ಗೇರು ಹಣ್ಣನ್ನು, ಕೊಕ್ಕೊ ಬೀಜಗಳನ್ನೂ ಬಿಡದೆ ತಿನ್ನುತ್ತವೆ. ತರಕಾರಿಗಳನ್ನೂ ಬಿಡುವುದಿಲ್ಲ. ಪಪ್ಪಾಯಿ ಹಣ್ಣು ಒತ್ತಟ್ಟಿಗಿರಲಿ, ಎಲೆಗಳನ್ನೂ ಬಾಕಿ ಉಳಿಸುವುದಿಲ್ಲ. ಹೀಗೆ ಹೆಚ್ಚಿನ ಕೃಷಿ ಉತ್ಪನ್ನ, ತರಕಾರಿಗಳನ್ನು ಮಂಗಗಳು ತಿನ್ನುತ್ತವೆ.

ಪರಿಹಾರ ಏಕಿಲ್ಲ?
ಮಂಗಗಳು ಬೆಳೆಗಳನ್ನು ನಾಶ ಮಾಡುವುದರಿಂದ ರೈತರು ಸಾವಿರಾರು ರೂ.ಗಳಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಆನೆ ದಾಳಿ ಮಾಡಿ ಕೃಷಿ ನಾಶವಾದರೆ ಪರಿಹಾರ ಸಿಗುತ್ತದೆ. ಆದರೆ ಮಂಗಗಳು ನಾಶ ಮಾಡಿರುವ ಕೃಷಿಯ ಬಗ್ಗೆ ಈ ತನಕ ಪರಿಹಾರ ಕೊಡಲು ಸರಕಾರ ಮುಂದಾಗಿಲ್ಲ. ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಂಗಗಳ ಉಪಟಳದ ಬಗ್ಗೆ ಸರಕಾರ ಕ್ರಮಕ್ಕೆ ಮುಂದಾಗಬೇಕೆಂದು ಸ್ಥಳೀಯ ರೈತರು ಒತ್ತಾಯಿಸಿದ್ದಾರೆ.

Advertisement

ಕೋವಿಗೂ ಹೆದರುವುದಿಲ್ಲ!
ಕೆಲವೊಮ್ಮೆ ಒಂದು ಗಂಡು ಮಂಗ ಮಾತ್ರ ತೋಟದಲ್ಲಿ ಕಾಣಸಿಗುತ್ತವೆ. ಇದು ಗುಂಪಿನೊಂದಿಗೆ ಸೇರುವುದಿಲ್ಲ. ದೈತ್ಯ ಗಾತ್ರವನ್ನು ಹೊಂದಿರುತ್ತದೆ. ಸಾಕಷ್ಟು ಧೈರ್ಯ ಹೊಂದಿರುವ ಇದು ರೈತರನ್ನೇ ಗದರಿಸುತ್ತದೆ. ಮಹಿಳೆಯರು ಹೋಗಿ ಓಡಿಸಲು ಯತ್ನಿಸಿದರೆ ಅವರನ್ನೇ ಅಟ್ಟಿಸಿಕೊಂಡು ಬರುತ್ತದೆ. ತೋಟಕ್ಕೆ ಕೋವಿ ಕೊಂಡು ಹೋಗಿ ಬೆದರಿಸಿದರೂ ಅಡಗಿಕೊಳ್ಳುವುದಿಲ್ಲ. ಕ್ಯಾಟ್‌ ಬಿಲ್ಲಿನ ಕಲ್ಲಿಗೆ ಮಂಗಗಳು ಸ್ವಲ್ಪ ಮಟ್ಟಿಗೆ ಹೆದರುತ್ತವೆ.

ಅರಣ್ಯದಲ್ಲಿ ಆಹಾರದ ಕೊರತೆ
ಅರಣ್ಯ ನಾಶದಿಂದ ಇವತ್ತು ಮಂಗಗಳಿಗೆ ಇವತ್ತು ಸಾಕಷ್ಟು ಆಹಾರ ಸಿಗುತ್ತಿಲ್ಲ. ಅರಣ್ಯದಲ್ಲಿ ಹಣ್ಣು ಹಂಪಲುಗಳನ್ನು ಬೆಳೆಯುವುದರ ಮೂಲಕ ಮಂಗಗಳು ಕೃಷಿ ಬೆಳೆಗಳಿಗೆ ದಾಳಿ ಮಾಡದಂತೆ ತಡೆಗಟ್ಟಬಹುದು. ಕಾಡಿನಲ್ಲಿ ಆಹಾರ ದೊರೆಯದಿರುವುದೇ ಮುಖ್ಯ ಕಾರಣ
– ಮೋಹನ್‌ ನಂಗಾರ್‌, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಸುಳ್ಯ

ಗಂಭೀರವಾಗಿ ಪರಿಗಣಿಸಿ
ಕೃಷಿ ತೋಟಗಳಲ್ಲಿ ಮಂಗಳ ಉಪಟಳ ಜಾಸ್ತಿಯಾಗಿದ್ದು, ಇವುಗಳಿಂದ ರೈತ ದಿನ ನಿತ್ಯ ನಷ್ಟ ಅನುಭವಿಸುತ್ತಿದ್ದಾನೆ. ಇದೊಂದು ರೈತರ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಸರಕಾರ ಕಡೆಗಣಿಸುವ ಹಾಗಿಲ್ಲ. ಸ್ಥಳೀಯ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ.
– ತಿರುಮಲ ಸೋನ, ಕೃಷಿಕರು, ಸಂಪಾಜೆ

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next