Advertisement

ಕುಸಿದು ಬೀಳುವ ಆತಂಕದಲ್ಲಿ ಮೀನು ಮಾರುಕಟ್ಟೆ

01:23 AM Feb 11, 2020 | Sriram |

ಸಾಲಿಗ್ರಾಮಕ್ಕೆ ಸುಸಜ್ಜಿತ ಮೀನು ಮಾರುಕಟ್ಟೆಯ ತುರ್ತು ಅವಶ್ಯವಿದೆ. ಮೀನು ಮಾರಾಟಗಾರ ಮಹಿಳೆಯರು ಹೊಸ ಮಾರುಕಟ್ಟೆ ನಿರ್ಮಿಸುವಂತೆ ಹಲವು ವರ್ಷದಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ.

Advertisement

ಕೋಟ: ಜಿಲ್ಲೆಯ ಪ್ರಸಿದ್ಧ ಮೀನು ಮಾರುಕಟ್ಟೆಗಳಲ್ಲಿ ಸಾಲಿಗ್ರಾಮ ಮೀನು ಮಾರುಕಟ್ಟೆಯೂ ಒಂದು. ಆದರೆ ಪ್ರಸ್ತುತ ಇಲ್ಲಿನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದ್ದು ಕಟ್ಟಡ ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಆತಂಕದಲ್ಲಿದೆ. ಹೀಗಾಗಿ ಮೀನುಗಾರ ಮಹಿಳೆಯರು ಪ್ರತಿ ದಿನ ಆತಂಕದಲ್ಲೇ ಇಲ್ಲಿ ವ್ಯವಹಾರ ನಡೆಸುತ್ತಾರೆ. ಹೊಸ ಮಾರುಕಟ್ಟೆ ನಿರ್ಮಿಸುವಂತೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ. ಈ ಪ್ರದೇಶದಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾಗುವುದರಿಂದ ಹಾಗೂ ಕಟ್ಟಡಕ್ಕೆ ಈಗಾಗಲೇ ಪರಿಹಾರ ದೊರೆತಿರುವುದರಿಂದ ಹಳೆ ಕಟ್ಟಡವನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ.

ಕುಸಿದಿತ್ತು ಕಟ್ಟಡ!
ಈಗಿರುವ ಮಾರುಕಟ್ಟೆ ಸಂಪೂರ್ಣ ಹಾಳಾಗಿದ್ದು ಮೇಲ್ಛಾವಣಿಗೆ ಆಧಾರವಾಗಿರುವ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಮುರಿದಿವೆ. ಮೂರು ವರ್ಷದ ಹಿಂದೆ ಮಳೆಗಾಲದಲ್ಲಿ ಮಾರುಕಟ್ಟೆ ಧರೆಗುರುಳಿ ತಾತ್ಕಾಲಿಕ ದುರಸ್ತಿ ಮಾಡಲಾಗಿತ್ತು.

ಸ್ಥಳಕ್ಕಾಗಿ ಹುಡುಕಾಟ
ಮಾರುಕಟ್ಟೆಗೆ ತಾಗಿಕೊಂಡು ಸರ್ವಿಸ್‌ ರಸ್ತೆ ನಿರ್ಮಾಣ ವಾಗುವುದರಿಂದ ಹಾಗೂ ಇನ್ನೊಂದು ಬದಿಯಲ್ಲಿ ಕಾರಂತ ಬೀದಿ ಇರುವುದರಿಂದ ಕಟ್ಟಡ ನಿರ್ಮಾಣಕ್ಕೆ ಸ್ಥಳಾವಕಾಶ ಕಡಿಮೆ ಇದೆ. ಹೀಗಾಗಿ ಮಾರುಕಟ್ಟೆಯನ್ನು ಗುಂಡ್ಮಿಯ ಹಳೆಕೋಟೆ ಮೈದಾನ ಸಮೀಪ ಸರಕಾರಿ ಜಾಗಕ್ಕೆ ಸ್ಥಳಾಂತರಿಸುವ ಆಲೋಚನೆ ನಡೆದಿತ್ತು.

ಈಗಿರುವಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಪಟ್ಟು ಸ್ಥಳಾಂತರಗೊಳ್ಳುವ ಸ್ಥಳ ಮುಖ್ಯ ಪೇಟೆಯಿಂದ ಸುಮಾರು 2 ಕಿ.ಮೀ. ದೂರವಿರುವುದರಿಂದ ವ್ಯಾಪಾರಕ್ಕೆ ಅನುಕೂಲವಿಲ್ಲ. ಇದೇ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಿ ಎಂದು ಮೀನುಗಾರ ಮಹಿಳೆಯರು ಬೇಡಿಕೆ ಪಟ್ಟು ಹಿಡಿದ ಕಾರಣ ಆ ಪ್ರಸ್ತಾವನೆಯನ್ನು ಕೈಬಿಡಲಾಯಿತು.

Advertisement

02ಕಿ.ಮೀ. ದೂರವಿರುವ‌ ಸರಕಾರಿ ಜಾಗಕ್ಕೆ ಸ್ಥಳಾಂತರಿಸುವ ಆಲೋಚನೆ ನಡೆದಿತ್ತು. ಆದರೆ ಮಾರಾಟಗಾರ ಮಹಿಳೆಯರು ವ್ಯಾಪಾರಕ್ಕೆ ಅನುಕೂಲ ಅಲ್ಲದ ಕಾರಣ ಅದನ್ನು ವಿರೋಧಿಸಿದ್ದರು.

ಕುಸಿದು ಬೀಳುವ ಸ್ಥಿತಿಯಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಮಾರಾಟಗಾರ ಮಹಿಳೆಯರು ಪ್ರತಿ ದಿನದ ವ್ಯವಹಾರವನ್ನು ಆತಂಕದಲ್ಲೇ ನಡೆಸುವಂತಾಗಿದೆ.

ಮೂಲ ಸೌಕರ್ಯ ಕಲ್ಪಿಸಲು ಬೇಡಿಕೆ
ಈಗಿರುವ ಹಳೆ ಮಾರುಕಟ್ಟೆಯಲ್ಲಿ ಕೊಳಚೆ ನೀರು ಹರಿದು ಹೋಗಲು ಒಳ ಚರಂಡಿ ವ್ಯವಸ್ಥೆ ಇಲ್ಲ ಹಾಗೂ ಮಾರುಕಟ್ಟೆ ಸ್ವತ್ಛಗೊಳಿಸಲು ನೀರು, ಶೌಚಾಲಯ ಮುಂತಾದ ಸೌಲಭ್ಯಗಳು ಸರಿಯಾಗಿಲ್ಲ. ಹೀಗಾಗಿ ಮಾರುಕಟ್ಟೆ ಅತ್ಯಂತ ಗಲೀಜಿನಿಂದ ಕೂಡಿದ್ದು ಸೊಳ್ಳೆಗಳು ಉತ್ಪತ್ತಿಯಾಗಿ ವಾತಾವರಣ ಹಾಳಾಗುತ್ತಿದೆ. ಹೀಗಾಗಿ ಮುಂದೆ ಹೊಸ ಮಾರುಕಟ್ಟೆ ನಿರ್ಮಿಸುವಾಗ ಶೌಚಾಲಯ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಮತ್ತು ನಿರ್ವಹಣೆಗೆ ಸರಿಯಾದ ಒತ್ತು ನೀಡಬೇಕು ಎನ್ನುವುದು ಮೀನು ಮಾರಾಟಗಾರ ಮಹಿಳೆಯರ ಬೇಡಿಕೆಯಾಗಿದೆ.

ಕ್ಷೀಣಿಸಿದ ವ್ಯಾಪಾರ
ಹಿಂದೆ 30-40ಮಂದಿ ಇಲ್ಲಿ ಮೀನು ಮಾರಾಟ ನಡೆಸುತ್ತಿದ್ದರು. ಮತ್ಸ Â ಪ್ರಿಯರು ಮೀನು ಖರೀದಿಗಾಗಿ ಇಲ್ಲಿಗೆ ಆಗಮಿಸುತ್ತಿದ್ದರು. ಆದರೆ ಮಾರುಕಟ್ಟೆ ಶಿಥಿಲವಾದ ಮೇಲೆ ಮೀನುಮಾರಾಟ ಮಾಡುವವರು, ಗಿರಾಕಿಗಳ ಸಂಖ್ಯೆ ತೀವ್ರವಾಗಿ ಕುಸಿದಿದೆ. ಜೀವಭಯದಲ್ಲೇ ಕಾಲ ಕಳೆಯುತ್ತಿದ್ದೇವೆ.
-ಮೀನು ಮಾರಾಟಗಾರ ಮಹಿಳೆಯರು

ಕ್ರಮಕೈಗೊಳ್ಳಲಾಗುವುದು
ಹೊಸ ಮೀನುಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆ ಇದೆ. ಆದರೆ ಸ್ಥಳಾವಕಾಶದ ಲಭ್ಯತೆ ಕುರಿತು ಸ್ಪಷ್ಟತೆ ಇಲ್ಲ. ಹೀಗಾಗಿ ಒಂದೆರಡು ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸರ್ವಿಸ್‌ ರಸ್ತೆ ಬಿಟ್ಟು ಎಷ್ಟು ಜಾಗ ಉಳಿಯಲಿದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲಾಗುವುದು ಹಾಗೂ ಕಾರಂತ ಬೀದಿಯ ರಸ್ತೆ ಮಾರ್ಜಿನ್‌ ಬಿಟ್ಟು ಮಿಕ್ಕುಳಿದ ಸ್ಥಳದಲ್ಲಿ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ಅರುಣ್‌ ಕುಮಾರ್‌, ಮುಖ್ಯಾಧಿಕಾರಿ
ಸಾಲಿಗ್ರಾಮ ಪ.ಪಂ.

ಜಾಗ ಗುರುತಿಸಿದರೆ ಪ್ರಸ್ತಾವನೆ
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಮೂಲಕ ಮಾರುಕಟ್ಟೆ ನಿರ್ಮಾಣಕ್ಕೆ ಅವಕಾಶವಿದೆ ಹಾಗೂ ಸ್ಥಳೀಯ ಮೀನುಗಾರರಿಂದ ಈ ಕುರಿತು ಬೇಡಿಕೆ ಬಂದಿದೆ. ಮಾರುಕಟ್ಟೆಗಾಗಿ ಜಾಗ ಗುರುತಿಸುವಂತೆ ಪ.ಪಂ.ಗೆ ತಿಳಿಸಲಾಗಿದೆ. ಜಾಗ ಗುರುತಿಸಿದ ತತ್‌ಕ್ಷಣ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿ ಅನುಮೋದನೆಗೆ ಕ್ರಮೈಗೊಳ್ಳಲಾಗುವುದು.
-ಎಂ.ಎಲ್‌. ದೊಡ್ಮನಿ, ಮುಖ್ಯ ವ್ಯವಸ್ಥಾಪಕ ನಿರ್ದೇಶಕರು ಕೆಎಫ್‌ಡಿಸಿ

-ರಾಜೇಶ ಗಾಣಿಗ  ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next