Advertisement

ಬಿಸಿಲ ನೆಲಕ್ಕೆ ಹಸಿರು ಹೊದಿಕೆ ; ರಾಜ್ಯದಲ್ಲೇ ಪ್ರಥಮ ಬಾರಿ ಯಶಸ್ವಿಯಾದ ಪ್ರಯೋಗ ‌

09:54 PM Aug 04, 2021 | Shreeram Nayak |

ಸಿಂದಗಿ: ಉದ್ಯಾನವೇ ಇಲ್ಲದ ಪಟ್ಟಣದಲ್ಲಿ ಸ್ಥಳಿಯ ಪದ್ಮರಾಜ್‌ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಆವರಣವು ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ.

Advertisement

ಮಹಾವಿದ್ಯಾಲಯದ ಒಳ ಹಾಗೂ ಹೊರ ಆವರಣದ ತುಂಬ ಬೆಳೆದ ಗಿಡ, ಸಸಿಗಳು ಹಸಿರು ಸೂಸುತ್ತ ನೋಡಗರ ಕಣ್ಣುಗಳನ್ನು ತಂಪಾಗಿಸುತ್ತದೆ. ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿಸುವ ಕೇಂದ್ರವಾಗಿದೆ. ಕಲುಷಿತ ನೀರನ್ನು ಶುದ್ಧೀಕರಿಸಿ ಪುನಃ ಬಳಕೆ ಮಾಡಿಕೊಳ್ಳುತ್ತಿರುವ ಮಹಾವಿದ್ಯಾಲಯದ ಕಾರ್ಯ ರಾಜ್ಯದಲ್ಲಿಯೇ ಪ್ರಥಮವಾಗಿದೆ.

ಕಲುಷಿತ ನೀರು ಪುನಃ ಬಳಕೆ ಮಾಡಿ ಮಹಾವಿದ್ಯಾಲಯವನ್ನು ಹಸಿರುಮಯ ಮಾಡಿದೆ. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದೆ. ಪರಿಸರದ ಆರೋಗ್ಯ ಕಾಪಾಡಲಾಗಿದೆ. ಪರಿಸರ ಪ್ರೇಮಿ ಈ ಕಾರ್ಯಕ್ಕೆ ಫಲವಾಗಿ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯ ಸಾಧನೆಗೆ ಭಾರತ ಸರಕಾರದ ಮಹಾತ್ಮ ಗಾಂಧಿ  ರಾಷ್ಟ್ರೀಯ ಗ್ರಾಮಿಣ ಶಿಕ್ಷಣ ಪರಿಷತ್‌, ಮಿನಿಸ್ಟರಿ ಆಫ್‌ ಎಜ್ಯುಕೇಶನ್‌ ಅವರು ಕೊಡಮಾಡುವ ಡಿಸ್ಟ್ರಿಕ್‌ ಗ್ರೀನ್‌ ಚಾಂಪಿಯನ್‌ ಸರ್ಟಿμಕೇಟ್‌ ಸೇರಿದೆ. ಜಲ ಶುದ್ಧೀಕರಣವೆಂಬುದು ಮೂಲ ಸ್ಥಿತಿಯ ನೀರಿನಲ್ಲಿರುವ ಬೇಡವಾದ ರಾಸಾಯನಿಕಗಳನ್ನು, ವಸ್ತುಗಳನ್ನು ಮತ್ತು ಜೈವಿಕ ಕಶ್ಮಷಗಳನ್ನು ತೆಗೆಯುವ ಕ್ರಿಯೆಯಾಗಿದೆ. ನಿರ್ದಿಷ್ಟ ಉದ್ದೇಶಕ್ಕೆ ಹೊಂದಿಕೊಳ್ಳುವ ನೀರನ್ನು ಉತ್ಪಾದಿಸುವುದು ಇದರ ಗುರಿಯಾಗಿದೆ.

ಮಾನವರ ಬಳಕೆಗಾಗಿ ಬಹುಪಾಲು ನೀರನ್ನು ಶುದ್ಧೀಕರಿಸಲಾಗುತ್ತದೆ. ಸಾರ್ವತ್ರಿಕವಾಗಿ ಬಳಸುವ ವಿಧಾನಗಳು ಶೋಧನೆ ಮತ್ತು ಸಂಚಯದಂತಹ ಭೌತಿಕ ಪ್ರಕ್ರಿಯೆಗಳು, ನಿಧಾನವಾಗಿ ಮರಳಿನ ಸೋಸುವಿಕೆ ಅಥವಾ ಕ್ರಿಯಾಶೀಲ ಕೆಸರಿನಂತಹ ಜೈವಿಕ ಕಾರ್ಯವಿಧಾನಗಳು, ಕುಚ್ಚಾಗುವಿಕೆ ಮತ್ತು ಕ್ಲೋರಿನೀಕರಣದಂತಹ ರಾಸಾಯನಿಕ ಕಾರ್ಯವಿಧಾನಗಳು ಹಾಗೂ ನೇರಳಾತೀತ ಬೆಳಕಿನಂತಹ ವಿದ್ಯುತ್ಕಾಂತೀಯ ವಿಕಿರಣಗಳ ಬಳಕೆಯನ್ನು ಒಳಗೊಂಡಿದೆ. ಕಲುಷಿತ ನೀರನ್ನು ಶುದ್ಧೀಕರಿಸಿ ಪುನಃ ಬಳಕೆ ಮಾಡುವುದು ಶುದ್ಧೀಕರಣದ ಉದ್ಧೇಶವಾಗಿದೆ.

ಈ ನಿಟ್ಟಿನಲ್ಲಿ ಸ್ಥಳಿಯ ಪದ್ಮರಾಜ್‌ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಜಿ.ಪಿ. ಪೋರವಾಲ ಕಲಾ, ವಾಣಿಜ್ಯ ಹಾಗೂ ವಿ.ವಿ. ಸಾಲಿಮಠ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ವಸತಿ ನಿಲಯದಿಂದ ಸುಮಾರು ಐದು ಸಾವಿರ ಗ್ಯಾಲೆನ್‌ ಕಲುಷಿತ ನೀರು ವ್ಯರ್ಥವಾಗಿ ಹೋಗುತ್ತಿತ್ತು. ಕಲುಷಿತ ನೀರು ವ್ಯರ್ಥವಾಗಿ ಹರಿಬಿಟ್ಟರೆ ಅಲ್ಲಿಯ ವಾತಾವರಣ ಕಲುಷಿತವಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ಇದನ್ನು ಮನಗಂಡ ಸಂಸ್ಥೆಯು ಸಂಸ್ಥೆಯ ಸ್ವಂತ ಖರ್ಚಿನಿಂದ ಬೆಂಗಳೂರಿನ ಅಶ್ವಥನಾರಾಯಣ ಅವರಿಂದ ಕೊಳಚೆ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಿದ್ದಾರೆ.ಕೊಳಚೆ ನೀರು ಶುದ್ಧೀಕರಣ ಮಾಡಿ ಪುನಃ ಬಳಕೆ ಮಾಡಲಾಗುತ್ತಿದೆ. ‌

Advertisement

ಕಲುಷಿತ ನೀರನ್ನು ಪುನಃ ಬಳಕೆ ಮಾಡಲು ಶುದ್ಧೀಕರಣ ಮಾಡುವ ಘಟಕ ನಿರ್ಮಾಣಕ್ಕೆ ಸರ್ಕಾರ, ಜನಪ್ರತಿನಿಧಿಗಳು ಸಂಘ-ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಸರ್ಕಾರ ವಿಶೇಷ ಅನುದಾನ ನೀಡಬೇಕು. ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರ ನೀಡಬೇಕು. ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಕಾಲೇಜಿನ ಆವರಣ ಹಸಿರಾಗಿದೆ. ಫಲವಾಗಿ ಡಿಸ್ಟ್ರಿಕ್‌ ಗ್ರೀನ್‌ ಚಾಂಪಿಯನ್‌ ಸರ್ಟಿಫಿಕೇಟ್‌ ಲಭಿಸಿದೆ.
-ಡಾ| ಪ್ರಭುಸಾರಂಗದೇವ ಶಿವಾಚಾರ್ಯರು, ಚೇರಮನ್‌, ಎಸ್‌ಪಿವಿವಿಎಸ್‌ ಸಾರಂಗಮಠ, ಸಿಂದಗಿ

ಮಹಾವಿದ್ಯಾಲಯದ ಮಹಿಳಾ ವಸತಿ ನೀಲಯದಿಂದ ಹೊರ ಹೋಗುವ ಕಲುಷಿತ ನೀರನ್ನು ಶುದ್ಧೀಕರಿಸಿ ಪುನಃ ಬಳಕೆ ಮಾಡುವ ಘಟಕ ನಿರ್ಮಾಣ ಮಾಡಲು 25 ಲಕ್ಷ ರೂ. ವೆಚ್ಚ ಖರ್ಚಾಗಿದೆ. ಈ ಘಟಕ ನಿರ್ಮಾಣಕ್ಕೆ ಜನಪ್ರತಿನಿ ಧಿಗಳು ಸ್ಪಂದಿಸಲಿಲ್ಲ. ಸಂಸ್ಥೆಯ ಚೇರಮನ್‌ ಡಾ| ಪ್ರಭುಸಾರಂಗದೇವ ಶಿವಾಚಾರ್ಯರು ಸ್ವಂತ ಹಣ ನೀಡಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಿಸಿ ನೀರಿನ ಸಮಸ್ಯೆ ಪರಿಹರಿಸಿದರು. ಇಂಥ ಘಟಕಗಳನ್ನು ಸ್ಥಾಪಿಸಬೇಕಾದಲ್ಲಿ ಬೆಂಗಳೂರಿನ ಅಶ್ವಥನಾರಾಯಣ ಅವರ ದೂರವಾಣಿ ಸಂಖ್ಯೆ 9448440647ಗೆ ಸಂಪರ್ಕಿಸಬೇಕು.
-ಡಿ.ಎಂ. ಪಾಟೀಲ, ಪ್ರಾಚಾರ್ಯರು, ಜಿ.ಪಿ. ಪೋರವಾಲ ಕಾಲೇಜ್‌, ಸಿಂದಗಿ

ಕಲುಷಿತ ನೀರು ಶುದ್ಧೀಕರಿಸಿ ಪುನಃ ಬಳಕೆ ಮಾಡುವ ಘಟಕಗಳು ಹೆಚ್ಚಾದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಇಂಥ ಘಟಕಗಳ ನಿರ್ಮಾಣಕ್ಕೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು. ಈ ಘಟಕಕ್ಕೆ ವಿದ್ಯುತ್‌ ವೆಚ್ಚ ಹೆಚ್ಚಾಗುವುದರಿಂದ ಸೋಲಾರ ಘಟಕ ನಿರ್ಮಿಸಿಕೊಳ್ಳಲು ಸರ್ಕಾರ ಸಹಾಯಧನ ನೀಡಬೇಕು.
-ಸಿದ್ದು ಮಂಗಳೂರ, ಪರಿಸರ ಪ್ರೇಮಿ, ಸಿಂದಗಿ

-ರಮೇಶ ಪೂಜಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next