ಬಾಂಬ್ ಸ್ಫೋಟದ ನಂತರ ಮಾಳವಿಕಾ 18 ತಿಂಗಳು ಆಸ್ಪತ್ರೆಯಲ್ಲಿದ್ದಳು. ಕಾಲಿನ ಬಹುತೇಕ ಮೂಳೆಗಳು ಮುರಿದಿದ್ದವು. ಕಾಲಿನಲ್ಲಿನ ನರಗಳು ಶೇ.70- 80ರಷ್ಟು ಚೈತನ್ಯಹೀನವಾಗಿದ್ದವು. ಅವುಗಳ ಚೇತರಿಕೆಗೆ ಲೆಕ್ಕವಿಲ್ಲದಷ್ಟು ಸರ್ಜರಿಗಳಾದವು…
“ಅಡುಗೆ ಬರುತ್ತಾ?’- ಮದ್ವೆ ವಯಸ್ಸಿಗೆ ಬಂದ ಹೆಣ್ಣಿಗೆ ಈ ಪ್ರಶ್ನೆ ತಪ್ಪಿದ್ದಲ್ಲ. ಕೆಲವರಿಗೆ ಅಡುಗೆ ಒಂದು ಪ್ರೀತಿಯ ಕಲೆಯಾಗಿ, ಕೆಲವರಿಗೆ ಅದೇ ದಿನಚರಿಯಾಗಿ, ಇನ್ನೂ ಕೆಲವರಿಗೆ ಒತ್ತಾಯದ ಕಲಿಕೆಯಾಗಿ ಇದು ಬದುಕಿನೊಳಗೆ ಸೇರಿಕೊಳ್ಳುತ್ತದೆ. “ಅಡುಗೆ ಗೊತ್ತೇ ಇಲ್ಲ’ ಎಂದು ಹೇಳುವ ಯುವತಿಯರು ಇಂದು ಅಪರೂಪ. ಆದರೆ, ಇಲ್ಲೊಬ್ಬಳಿದ್ದಾಳೆ… 28 ವರುಷದ ಯುವತಿ…. ಆಕೆ ಮೊದಲ ಬಾರಿಗೆ ಸೌಟು ಹಿಡಿದಾಗ, ಜಗತ್ತು ಒಮ್ಮೆ ಮೂಗಿನ ಮೇಲೆ ಬೆರಳಿಟ್ಟಿತ್ತು!
ಅವಳು ಮಾಳವಿಕಾ ಅಯ್ಯರ್. “ನಾನಿವತ್ತು ಮೊದಲ ಬಾರಿಗೆ ರುಚಿಕಟ್ಟಾದ ಸಬ್ಜಿ ಮಾಡಿದ್ದೇನೆ’ ಎಂದು ಟ್ವೀಟಿಸಿದ್ದು, ಸಿಕ್ಕಾಪಟ್ಟೆ ವೈರಲ್ ಆಯಿತು. ಆ ಟ್ವೀಟಿಗೆ ಎಷ್ಟು ಮಹತ್ವ ಸಿಕ್ಕಿತೆಂದರೆ, ಜನಪ್ರಿಯ ಶೆಫ್ ವಿಕಾಸ್ ಖನ್ನಾ, “ನಿಮ್ಮೊಂದಿಗೆ ನಾನು ಅಡುಗೆ ಮಾಡುತ್ತೇನೆ. ಅದು ನನ್ನ ಕನಸು ಕೂಡ’ ಎಂದು ಪ್ರತಿಯಾಗಿ ಟ್ವೀಟಿಸಿ, ಅವಳನ್ನು ಶ್ಲಾಘಿ ಸಿದರು. “ಅಯ್ಯೋ, ಒಬ್ಬಳು ಹುಡುಗಿ, ಅದರಲ್ಲೂ 28 ವರ್ಷದವಳು ಅಡುಗೆ ಮಾಡುವುದರಲ್ಲಿ ಏನು ವಿಶೇಷ?’ ಅಂತ ನಿಮ್ಮೊಳಗೆ ಪ್ರಶ್ನೆ ಹುಟ್ಟಬಹುದು. ಖಂಡಿತಾ ವಿಶೇಷವಿದೆ; ಮಾಳವಿಕಾಗೆ ಎರಡೂ ಕೈಗಳಿಲ್ಲ!
ಮಾಳವಿಕಾ ಅಯ್ಯರ್, ರಾಜಸ್ಥಾನದ ಬಿಕಾನೇರ್‌ನ ಬಾಂಬ್ ಸ್ಫೋಟದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡವಳು. ಆಗ ಆಕೆಗಿನ್ನೂ 13 ವರುಷ. ಆಡಿ ನಲಿಯುವ ವಯಸ್ಸಿನಲ್ಲಿ ಅವಳ ಜತೆಗೆ ವಿಧಿ ಕ್ರೂರವಾಗಿ ಆಟವಾಡಿತ್ತು. ಆದರೂ ಮಾಳವಿಕಾ ಧೈರ್ಯಗೆಡಲಿಲ್ಲ. ಅಯ್ಯೋ ಹೀಗಾಯಿತಲ್ಲ ಎಂದು ಕೊರಗುತ್ತಾ ಮೂಲೆ ಸೇರಲಿಲ್ಲ. ತಾಯಿಯ ಸಹಾಯದಿಂದ ಆಕೆ ಎಲ್ಲ ಕೆಲಸಗಳನ್ನೂ ಕಲಿತಳು. ಯಾರ ಸಹಾಯವೂ ಇಲ್ಲದೆ ಬದುಕು ನಡೆಸುವ ಛಾತಿ ಮೂಡಿಸಿಕೊಂಡಳು. ಆದರೂ ಒಂದು ಕೆಲಸ ಮಾಡುವುದು ಬಾಕಿ ಇತ್ತು. ಹಾnಂ, ಅದೇ ಅಡುಗೆ ಮಾಡುವುದು! ಕೊನೆಗೂ ಒಂದು ದಿನ ಮಾಳವಿಕಾ ಸೌಟು ಕೈಗೆತ್ತಿಕೊಂಡು, ಒಗ್ಗರಣೆ ಹಾಕಿಯೇಬಿಟ್ಟಳು!
ಆ ಕುರಿತು ಆಕೆ ಹೀಗೆನ್ನುತ್ತಾಳೆ- “ಬಾಂಬ್ ಸ್ಫೋಟದಲ್ಲಿ ಎರಡೂ ಕೈಗಳನ್ನು ಕಳೆದುಕೊಂಡಾಗ ಈ ಜನ್ಮದಲ್ಲಿ ನನಗೆ ಅಡುಗೆ ಮಾಡಲಾಗದು ಎಂದು ಭಾವಿಸಿದ್ದೆ. ಇವತ್ಯಾಕೋ ಬಹಳ ಬೇಸರವಾಗುತ್ತಿತ್ತು. ಅಮ್ಮನಿಗೆ ಕಾಲ್ ಮಾಡಿ, ತರಕಾರಿ ಸಬ್ಜಿಯ ರೆಸಿಪಿ ಕಲಿತುಕೊಂಡೆ. ಕ್ಲೀನ್ ಮಾಡುವುದರಿಂದ ಹಿಡಿದು ಎಲ್ಲ ಕೆಲಸವನ್ನೂ ನಾನೊಬ್ಬಳೇ ಮಾಡಿದೆ. 25 ನಿಮಿಷದಲ್ಲಿ ರುಚಿಯಾದ ಸಬ್ಜಿ ಮಾಡಿದ್ದೆ. ಓಹ್, ನೀವು ನಂಬುತ್ತೀರಾ? ಕೈಗಳೇ ಇಲ್ಲದ ನಾನು ಅಡುಗೆ ಮಾಡಿದ್ದೇನೆ. ನನಗೇ ಇದನ್ನು ನಂಬಲಾಗುತ್ತಿಲ್ಲ’.
ಬಾಂಬ್ ಸ್ಫೋಟದ ನಂತರ ಆಕೆ 18 ತಿಂಗಳು ಆಸ್ಪತ್ರೆಯಲ್ಲಿದ್ದಳು. ಕಾಲಿನ ಬಹುತೇಕ ಮೂಳೆಗಳು ಮುರಿದಿದ್ದವು. ಕಾಲಿನಲ್ಲಿನ ನರಗಳು ಶೇ.70- 80ರಷ್ಟು ಚೈತನ್ಯಹೀನವಾಗಿದ್ದವು. ಅವುಗಳ ಚೇತರಿಕೆಗೆ ಲೆಕ್ಕವಿಲ್ಲದಷ್ಟು ಸರ್ಜರಿಗಳಾದವು. ನಂತರವಷ್ಟೇ ಆಕೆ ಊರುಗೋಲಿನ ಸಹಾಯದಿಂದ ನಡೆಯುವಂತಾಗಿದ್ದು. ಕೃತಕ ಕೈಗಳನ್ನು ಜೋಡಿಸಲಾಯ್ತು. ಎಲ್ಲ ಕಷ್ಟಗಳೂ ಆಕೆಯ ಮೇಲೆ ಒಮ್ಮೆಲೆ ಮುಗಿಬಿದ್ದರೂ ಆಕೆಯ ಆತ್ಮವಿಶ್ವಾಸ ಮಾತ್ರ ಸಾಸಿವೆಯಷ್ಟೂ ಕುಗ್ಗಲಿಲ್ಲ.
ಇಷ್ಟೆಲ್ಲಾ “ಇಲ್ಲ’ಗಳ ನಡುವೆಯೂ ಆಕೆ ಈಗ ಸೋಷಿಯಲ್ ವರ್ಕ್‌ನಲ್ಲಿ ಪಿ.ಎಚ್‌ಡಿ ಓದುವುದರ ಜತೆಗೆ ದಿವ್ಯಾಂಗರ ಹಕ್ಕುಗಳ ಕಾರ್ಯಕರ್ತೆ ಆಗಿದ್ದಾಳೆ. “ಟೆಡ್’ನಲ್ಲಿ ಒಮ್ಮೆ ಆಕೆ ಸ್ಫೂರ್ತಿದಾಯಕ ತನ್ನ ಜೀವನ ಕತೆಯನ್ನೂ ಹಂಚಿಕೊಂಡಿದ್ದಾಳೆ. ಎಲ್ಲಾ ಇದ್ದರೂ ಸದಾ ಕೊರಗುವ ನಮ್ಮಂಥ ಹಲವರಿಗೆ ಈಕೆ ಮಾದರಿಯಲ್ಲವೇ?