ಕೆಲವೊಂದು ಅನುಭವಗಳು ಎಷ್ಟು ಖುಷಿಯನ್ನು ನೀಡುತ್ತವೆ ಅಂತಂದ್ರೆ ಜೀವನದಲ್ಲಿ ಆ ಘಟನೆಯನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಕಾಲೇಜಿನ ಸೆಮಿಸ್ಟರ್ ಪರೀಕ್ಷೆ ಮುಗಿದ ಅನಂತರ ಬಂದಂತಹ ಮೊದಲ ಅವಕಾಶ ಪುರಸಭೆಯಲ್ಲಿ ಡಾಟಾ ಎಂಟ್ರೀ ಮಾಡೋ ಕೆಲಸ. ನುಡಿ-ಬರಹದ ಪರಿಚಯ ಇದ್ದುದಕ್ಕೆ ಅದ್ಯಾಕೋ ನನ್ನ ಕೇಳದೇ ಆ ಕೆಲಸಕ್ಕೆ ನನ್ನ ಹೆಸರನ್ನ ನೋಂದಾವಣಿ ಮಾಡಿಬಿಟ್ಟಿದ್ರು. ಪುರಸಭೆಯಿಂದ ಕರೆ ಬಂದು “ನಾಡಿದ್ದಿನಿಂದ ಬಂದು ಸೇರ್ಕೊಳ್ಳಿ’ ಅಂತ ಹೇಳಿದಾಗ, ಮನೆಯಲ್ಲಿ ಒಂದು ಮಾತೂ ಹೇಳದೇ ಹೊರಟು ನಿಂತಿದ್ದೆ. ಏನು ಬೇಕಾದ್ರೂ ಆಗ್ಲಿ ಒಂದು ಪ್ರಯತ್ನ ಅಂತಂದು ನನ್ನ ಪಾಡಿಗೆ ಕೈಗೆ ಸಿಕ್ಕ ಒಂದಷ್ಟು ಬಟ್ಟೆಯನ್ನು ಬ್ಯಾಗಿಗೆ ತುರುಕಿಕೊಂಡು ಮನೆ ಬಿಟ್ಟಿದ್ದೆ.
ಹನ್ನೆರಡು ಸಾವಿರ ಸಂಬಳ. ಅಂದಿನಿಂದಲೇ ನನ್ನ ಕೆಲಸ ಪ್ರಾರಂಭ. ಹೇಳುವುದನ್ನು ಕೇಳಿ ಮಾತ್ರ ಗೊತ್ತಿದ್ದ ನನಗೆ ಈಗ ಅಸಲೀ ಪುರಸಭೆಯ ಕೆಲಸದ ಅನುಭವವೂ ದೊರೆಯುವುದರಲ್ಲಿತ್ತು. ಒಳಹೋಗಿ ಪರಿಚಯ ಹೇಳಿದಾಗ ನನ್ನ ಒಂದು ಕಂಪ್ಯೂಟರ್ ಮುಂದೆ ತಂದು ನಿಲ್ಲಿಸಿಬಿಟ್ಟರು. ಅಲ್ಲಿಂದ ನನ್ನ ಕಟಕಟ, ಕುಟುಕುಟು ಕುಟ್ಟುವ ಕೆಲಸ ಜಾರಿಯಾಗಿ ಕುಟ್ಟುವುದಕ್ಕೆ ಪ್ರಾರಂಭಿಸಿದೆ. ಎಷ್ಟುದ್ದ ಹೆಸರುಗಳು, ಏನೇನೋ ಹೆಸರುಗಳು, ಪದಗಳಿಗೆ ಸಿಕ್ಕದಂಥವೂ ಇತ್ತು.
ನಾನಂತೂ ಸಂಪೂರ್ಣವಾಗಿ ಕುಟ್ಟುವುದರಲ್ಲೇ ತಲ್ಲೀನಳಾಗಿ ಹೋದೆ. ನಾವೆಷ್ಟು ಪದಗಳನ್ನು ಟೈಪಿಸಿದ್ದೇವೆ ಅನ್ನುವುದರ ಮೇಲೆ ಹಾಗೂ ವೇಗದ ಮೇಲೆ ನನ್ನ ಸಂಬಳವು ನಿಗದಿಯಾಗಿತ್ತು.ಒಂದೆರಡು ವಾರಗಳು ಯಾವುದೇ ತೊಂದರೆಯಿಲ್ಲದೇ ನನ್ನ ಟೈಪಿಸುವ ಕೆಲಸ ಜಾರಿಯಲ್ಲಿತ್ತು. ಅನಂತರ ಬೇಜಾರು ಅನ್ನಿಸೋಕೆ ಶುರುವಾಗಿ ಇದೂ ಒಂದು ಕೆಲಸನಾ ಅನ್ನಿಸುವಷ್ಟರಲ್ಲಿ ಮತ್ತೆ ಕಾಲೇಜು ಪ್ರಾರಂಭವಾಗಿತ್ತು. ನಾನೆಷ್ಟು ಪದಗಳನ್ನು , ಹೆಸರುಗಳನ್ನು ಟೈಪಿಸಿದ್ದೆ ಎಂದೇ ನನಗೆ ನೆನಪಿರಲಿಲ್ಲ. ಗಣಿತಕ್ಕೂ ಸಿಕ್ಕಿರಲಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ನನ್ನ ಕೈಗೆ ಸಿಗಲಿದ್ದ ಮೊತ್ತದ ಕನಿಷ್ಟ ಅಂದಾಜೂ ನನಗಿರಲಿಲ್ಲ.
ಕಾಲೇಜಿನಲ್ಲಿ ತರಗತಿಗಳು ಪ್ರಾರಂಭವಾಗಿ ಬಿಡುವಿನ ಸಂದರ್ಭದಲ್ಲಿ ನನ್ನ ವಿಭಾಗ ಮುಖ್ಯಸ್ಥರು ಕರೆದು ಲೆಟರ್ ಒಂದನ್ನು ಕೈಗಿಟ್ಟು “ನಿನಗ್ಯಾವುದೋ ಲೆಟರ್ ಬಂದಿದೆ. ಅದೇನು ನೋಡು’ ಅಂತಂದರು. ಕ್ಲಾಸ್‌ನಲ್ಲಿ ತೆರೆದು ನೋಡಿದಾಗ ಅದು ಬರೋಬ್ಬರಿ ಹನ್ನೆರಡು ಸಾವಿರ ರೂಪಾಯಿಗಳ ಒಂದು ಚೆಕ್! ಅದೇ ನನ್ನ ಮೊದಲ ಕಾಲೇಜು ದಿನಗಳ ಸಂಪಾದನೆಯಾಗಿತ್ತು. ಇದಕ್ಕಾಗಿ ನಾನು ಪಟ್ಟ ಕಷ್ಟವೆಲ್ಲ ಆ ಚೆಕ್‌ನ್ನು ಕಂಡಾಗ ಮರೆತುಹೋಗಿತ್ತು.
ಅಪರ್ಣಾ ಎ. ಎಸ್.
ಪತ್ರಿಕೋದ್ಯಮ ವಿಭಾಗ
ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆ