ಬೆಳಗಾವಿ: ಉಕ್ರೇನ್ ದಲ್ಲಿ ಸಿಲುಕಿಕೊಂಡಿರುವ ನಮ್ಮ ವಿದ್ಯಾರ್ಥಿಗಳು ಹಾಗೂ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವುದೇ ನಮ್ಮ ಅತ್ಯಂತ ಮೊದಲ ಆದ್ಯತೆ. ಈ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನಿಗಳೇ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ದಿನನಿತ್ಯದ ಪ್ರತಿಕ್ಷಣದ ಬೆಳವಣಿಗೆಯ ಬಗ್ಗೆ ಪ್ರಧಾನಿ ಮೋದಿ ಅವರು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಅಲ್ಲಿನ ಯಾವ ಭಾರತೀಯರಿಗೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದರು.
ಉಕ್ರೇನ್ ದಲ್ಲಿ ಈಗ ದೊಡ್ಡ ಪ್ರಮಾಣದಲ್ಲಿ ಯುದ್ಧ ನಡೆದಿದೆ. ಅಲ್ಲಿ ಅತ್ಯಂತ ಕ್ಲಿಷ್ಟಕರ ಹಾಗೂ ಕಷ್ಟಕರ ಸನ್ನಿವೇಶ ನಿರ್ಮಾಣವಾಗಿದೆ. ಹೀಗಿರುವಾಗ ಅಲ್ಲಿನ ಭಾರತೀಯರು ಹಾಗೂ ನಮ್ಮ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಸವಾಲು ನಮ್ಮ ಮುಂದಿದೆ. ಇದಕ್ಕೆ ಅಕ್ಕಪಕ್ಕದ ರಾಷ್ಟ್ರಗಳ ಸಹಕಾರ ಪಡೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಚಿವರಿಗೆ ಹೊಣೆ; PM ಮೋದಿ ದಿಟ್ಟ ಕ್ರಮ
ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಂದ ಹಾಗೂ ಭಾರತೀಯ ಪ್ರಜೆಗಳಿಂದ ದಿನನಿತ್ಯ ಕರೆಗಳು ಬರುತ್ತಿವೆ. ಆದರೆ ಅವರನ್ನು ತಲುಪಲು ನಮಗೆ ಸಾಧ್ಯವಾಗುತ್ತಿಲ್ಲ. ನಮ್ಮಿಂದ ಸಾಧ್ಯವಾಗುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸುರಕ್ಷಿತವಾಗಿ ಕರೆತರುವದಕ್ಕೆ ನಮ್ಮ ಮೊಟ್ಟಮೊದಲ ಆದ್ಯತೆ ಎಂದು ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದರು.