Advertisement

ಕೆಲಸ ಮಾಡದೇ ಮತ್ತೆ ಸ್ಪರ್ಧಿಸಿರುವ ಸುಳ್ಳುಗಾರರನ್ನು ಸೋಲಿಸುವುದೇ ಮೊದಲ ಆದ್ಯತೆ: ಇಂಗಳೆ

03:00 PM Jun 05, 2022 | Team Udayavani |

ವಿಜಯಪುರ: ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮೇಲ್ಮನೆ ಕ್ಷೇತ್ರದ ಪ್ರತಿನಿಧಿಗಳಾದ ಅರುಣ ಶಹಾಪುರ, ಹಣಮಂತ ನಿರಾಣಿ ಅವರು ನಿರುದ್ಯೋಗಿಗಳ ಭಾವನೆಗಳಿಗೆ ತಕ್ಕಂತೆ ಕೈಗಾರಿಕೆ ಸ್ಥಾಪಿಸುವ, ಉದ್ಯೋಗ ಸೃಷ್ಟಿಸುವ ಕೆಲಸ ಮಾಡಲಿಲ್ಲ. ಅಧಿಕಾರದ ಪ್ರತಿಷ್ಠೆಗಾಗಿ ಸ್ಪರ್ಧಿಸುವ ಇವರು ಅಭಿವೃದ್ದಿಗೆ ಬಂದಿರುವ ನಾಲ್ಕಾರು ಕೋಟಿ ರೂ. ಅನುದಾನ ಬಳಕೆಯಾಗದೇ ಸರ್ಕಾರಕ್ಕೆ ಮರಳುವಂತೆ ಮಾಡಿದ್ದಾರೆ. ಹೀಗಾಗಿ ಕೆಲಸ ಮಾಡದೇ ಮತ್ತೆ ಸ್ಪರ್ಧಿಸಿರುವ ಈ ಇಬ್ಬರು ಸುಳ್ಳುಗಾರರನ್ನು ಸೋಲಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಕರ್ನಾಟಕ ರಾಜ್ಯ ಪದವೀಧರ ಹಾಗೂ ಪದವೀಧರ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ ಹೇಳಿದರು.

Advertisement

ಭಾನುವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪದವೀಧರರ ಭಾವನೆಗೆ ಸ್ಪಂದಿಸುವ ಭರವಸೆ ನೀಡಿದ್ದರಿಂದ ಕಳೆದ ಬಾರಿ ಈ ಇಬ್ಬರಿಗೆ ಬೆಂಬಲ ನೀಡಿ ಗೆಲ್ಲಿಸಿದ್ದೆವು. ಗೆದ್ದ ಮೇಲೆ ಕೆಲಸ ಮಾಡದ ಈ ಇಬ್ಬರನ್ನೂ ಈ ಬಾರಿ ಸೋಲಿಸುವುದೇ ನಮ್ಮ ಆದ್ಯತೆ. ಮುಂದಿನ ಚುನಾವಣೆ ವೇಳೆಗೆ ಶಿಕ್ಷಕರು ಹಾಗೂ ಪದವೀಧರ ಭಾವನೆಗೆ ಸ್ಪಂದಿಸುವ ನಮ್ಮದೇ ಸಂಘಟನೆಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಗೆಲ್ಲಿವುದು ನಮ್ಮ ಮುಂದಿರುವ ಯೋಜನೆ ಎಂದರು.

ನಂಜುಂಡಪ್ಪ ಸಮಿತಿ ವರದಿ ಪ್ರಕಾರ ವಿಜಯಪುರ ಜಿಲ್ಲೆ ಅತ್ಯಂತ ಹಿಂದುಳಿದಿದ್ದು, ಉನ್ನತ ಶಿಕ್ಷಣ ಮರೀಚಿಕೆಯಾಗಿದೆ. ದೂರದ ಊರುಗಳಿಗೆ ತೆರಳಿ ಉನ್ನತ ಶಿಕ್ಷಣ ಪಡೆದರೂ ಸರ್ಕಾರಿ ಸ್ವಾಮ್ಯದ ಕೈಗಾರಿಕೆ ಸ್ಥಾಪಿಸಲಿಲ್ಲ. ಖಾಸಗೀಕರಣದ ಪರಿಣಾಮ ನಿರುದ್ಯೋಗ ತಾಂಡವವಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸದನದಲ್ಲಿ ಧ್ವನಿ ಎತ್ತದೇ ಈ ಇಬ್ಬರೂ ಅನ್ಯಾಯ ಮಾಡಿದ್ದಾರೆ ಎಂದು ಹರಿಹಾಯ್ದರು.

ವಿಜಯಪುರ, ಬೆಳಗಾವಿ, ಬಾಗಲಕೋಟೆ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಸಂಪನ್ಮೂಲಗಳಿವೆ. ವಿಜಯಪುರ ಜಿಲ್ಲೆಯಲ್ಲಿ ಕೃಷ್ಣಾ-ಭೀಮಾ ನದಿಗಳಿಗೆ ನಿರ್ಮಿಸಿರುವ ಜಲಾಶಯಗಳಿವೆ. ಕೂಡಗಿ ಎನ್‍ಟಿಪಿಸಿ ವಿದ್ಯುತ್ ಸ್ಥಾವರ, ಸಾವಿರಾರು ಎಕರೆ ಜಮೀನು ಕೈಗಾರಿಕೆಗೆ ಮೀಸಲಿದ್ದರೂ ಒಂದೇ ಒಂದು ಕೈಗಾರಿಕೆ ಸ್ಥಾಪಿಸಲಿಲ್ಲ. ಇದೀಗ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಸ್ಪರ್ಧಿಸಿರುವ ಅರುಣ ಹಾಗೂ ಹಣಮಂತ ಸುಳ್ಳುಗಳ ಮೂಲಕ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಪದವೀಧರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಹಣಮಂತ ನಿರಾಣಿ ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಕಳೆದ 6 ವರ್ಷಗಲ್ಲಿ ಸರ್ಕಾರ ಶಾಸಕರ ಪ್ರದೇಶಾಭಿವೃದ್ಧಿಗೆ ಬಿಡಿಗೆ ಮಾಡಿದ 8,72,93,859 ರೂ. ಅನುದಾನದಲ್ಲಿ 3,81,68,859 ರೂ. ಬಳಸದ ಕಾರಣ ಸರ್ಕಾರಕ್ಕೆ ಮರಳಿ ಹೊಗಿರುವುದು ಪ್ರತಿಷ್ಠೆಗಾಗಿ ರಾಜಕೀಯ ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿ. ಹೀಗಾಗಿ ಸ್ಪರ್ಧಿಸಲು ಹಣಮಂತ ಮತ್ತೆ ಅನರ್ಹರಾದ ಇಂಥವರನ್ನು ಸೋಲಿಸುವುದೇ ನಮ್ಮ ಆದ್ಯತೆ ಎಂದರು.

Advertisement

ಹಣ ಉಳ್ಳವರ ಪ್ರತಿಷ್ಠೆಗಾಗಿ ಮೇಲ್ಮನೆಗಳು ಮೇಲಾಟದ ವೇದಿಕೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ರಾಷ್ಟ್ರ-ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವಂತೆ ಮಕ್ಕಳನ್ನು ರೂಪಿಸಲು ರಾಜ್ಯದ ಸರಕಾರಿ ಪ್ರಾಥಮಿಕ-ಪ್ರೌಢ ಶಾಲೆಯಲ್ಲಿ 3535 ದೈಹಿಕ ಶಿಕ್ಷಕರಿಲ್ಲ. 677 ಸಂಗೀತ ಶಿಕ್ಷಕರು, 589 ಚಿತ್ರಕಲಾ ಶಿಕ್ಷಕರ ಕೊರತೆ ಇದೆ ಎಂದು ವಿವರಿಸಿದರು.

ಇದನ್ನೂ ಓದಿ: ಬಿಬಿಎಂಪಿ ಚುನಾವಣೆ ಗೆಲ್ಲಲು ಕಾರ್ಯಕರ್ತರಿಗೆ ಗೋವಾ ಟೂರ್‌!

ವಾಯುವ್ಯ ಕ್ಷೇತ್ರ ವ್ಯಾಪ್ತಿಯ ಬೆಳಗಾವಿ, ಬಾಲಕೋಟೆ, ವಿಜಯಪುರ ಜಿಲ್ಲೆಗಳಲ್ಲೇ ಕಂದಾಯ ಇಲಾಖೆಯಲ್ಲಿ 961, ಪಶುಸಂಗೋಪನೆ ಇಲಾಖೆಯಲ್ಲಿ 205 ಹುದ್ದೆಗಳು ಖಾಲಿ ಇವೆ. ಸರ್ಕಾರ ಖಾಲಿ ಇರುವ ಈ ಹುದ್ದೆಗಳ ನೇಮಕಕ್ಕೆ ಕ್ರಮ ಕೈಗೊಂಡಲ್ಲಿ ವಿವಿಧ ಪದವಿ ಪಡೆದು ಉದ್ಯೋಗದ ನಿರೀಕ್ಷೆಯಲ್ಲಿರುವ ಲಕ್ಷಾಂತರ ಜನರಿಗೆ ಉದ್ಯೋಗ ಅವಕಾಶಗಳು ದಕ್ಕಲಿವೆ. ಆದರೆ ತಮ್ಮದೇ ಮತದಾರರ ಸಮಸ್ಯೆಗಳ ಬಗ್ಗೆ ಅರುಣ ಹಾಗೂ ಹಣಮಂತ ಇಬ್ಬರೂ ಸ್ಪಂದಿಸಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next