ಅಕ್ಕಿಆಲೂರು: ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೇಸಾಯ ಮಾಡುತ್ತ ಕೈಸುಟ್ಟುಕೊಳ್ಳುತ್ತಿರುವ ತಾಲೂಕಿನ ರೈತ ಸಮುದಾಯಕ್ಕೆ ಬಲ ನೀಡುವ ಉದ್ದೇಶದಿಂದ ಹಾನಗಲ್ಲ ತಾಲೂಕು ಸಂಪೂರ್ಣ ನೀರಾವರಿ ವ್ಯವಸ್ಥೆಗೆ ಸಂಕಲ್ಪಗೈಯಲಾಗಿದೆ ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು.
ಪಟ್ಟಣದ ಮುತ್ತಿನಕಂತಿಮಠ ಕಲ್ಯಾಣಮಂಟಪದಲ್ಲಿ ಹಾನಗಲ್ಲ ತಾಲೂಕು ಸ್ವಾಭಿಮಾನಿ ನಾಗರಿಕ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬಾಳೆಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಯ ಹೋರಾಟಗಾರರ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮರ್ಪಕ ನೀರು ಮತ್ತು ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಟ್ಟರೇ ಮಾತ್ರ ರೈತ ಸಮುದಾಯ ಆರ್ಥಿಕವಾಗಿ ವಿಕಾಸ ಹೊಂದಲು ಸಾಧ್ಯವಿದೆ. ಈಗಾಗಲೇ 504 ಕೋಟಿ ರೂ. ವೆಚ್ಚದಲ್ಲಿ 240 ಕೆರೆಗಳನ್ನು ತುಂಬಿಸುವ ಬಾಳೆಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗೆ ಚಾಲನೆ ಸಿಕ್ಕಿದೆ. ಈ ಮಹಾತ್ವಾಕಾಂಕ್ಷಿ ಯೋಜನೆ ಸಾಕಾರಗೊಳ್ಳಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಬಹುಮುಖ್ಯವಾಗಿ ಬಿ.ಎಸ್ .ಯಡಿಯೂರಪ್ಪನವರು ಮುಖ್ಯಮಂತ್ರಿಯಾಗದೇ ಹೋಗಿದ್ದರೆ ಈ ಯೋಜನೆ ತಾಲೂಕಿಗೆ ಕನಸಾಗಿ ಉಳಿಯುತ್ತಿತ್ತು ಎಂದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ್ ಮಾತನಾಡಿ, ಈಗಿರುವ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಕೇವಲ 2 ತಿಂಗಳಲ್ಲಿ ಬಾಳೆಂಬೀಡ ಹಾಗೂ ಹಿರೇಕಾಂಶಿ ಏತ ನೀರಾವರಿ ಯೋಜನೆಗೆ ಹಸಿರು ನಿಶಾನೆ ಸಿಗುವ ಮೂಲಕ ಹಾನಗಲ್ಲ ತಾಲೂಕಿನ ರೈತರ ಬಹುದಿನದ ಆಸೆ-ಆಕಾಂಕ್ಷೆ ಈಡೇರಿದೆ. ನೀರಾವರಿ ವ್ಯವಸ್ಥೆಯಿಂದ ವಂಚಿತವಾಗಿದ್ದ ಬೆಳಗಾಲಪೇಟೆ ಮತ್ತು ಬಮ್ಮನಹಳ್ಳಿ ಭಾಗದ ಕೆರೆಗಳು ಸೇರಿದಂತೆ ಒಟ್ಟು 103 ಕೆರೆಗಳ ಒಡಲು ತುಂಬಲಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ರೈತರ ಹಿತ ಕಾಯುವ ಕೆಲಸಗಳಾಗಬೇಕಿದೆ. ಜಗತ್ತಿಗೆ ಅನ್ನ ನೀಡುವ ಅನ್ನದಾತನ ಬದುಕು ಹಸನಾಗಬೇಕಾದರೇ ಪ್ರತಿಯೊಬ್ಬ ರಾಜಕಾರಿಣಿಗಳು ಪ್ರಾಮಾಣಿಕ ಪ್ರಯತ್ನ ನಡೆಸುವ ಮೂಲಕ ಬದ್ಧತೆ ಮೆರೆಯಬೇಕಿದೆ ಎಂದರು.
ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷ ಡಾ| ಪ್ರಕಾಶಗೌಡ ಪಾಟೀಲ, ಅಧ್ಯಕ್ಷ ಸೋಮಶೇಖರ ಕೊತಂಬರಿ, ತಾಲೂಕು ರೈತ ಸಂಘದ ಪದಾಧಿ ಕಾರಿಗಳಾದ ಮರಿಗೌಡ ಪಾಟೀಲ, ಅಡಿವೆಪ್ಪ ಆಲದಕಟ್ಟಿ, ಸಿದ್ದಪ್ಪ ಹಿರಗಪ್ಪನವರ, ಮಾಲತೇಶ ಪೂಜಾರ, ರುದ್ರಪ್ಪ ಬಳಿಗಾರ, ಮಾಲತೇಶ ಗಂಟೇರ, ಜಿ.ಎಸ್. ದೇಶಪಾಂಡೆ, ಹಾಶಂಪೀರ್ ಇನಾಂದಾರ್, ಜಗದೀಶ ಕೊಂಡೋಜಿ, ಮಹೇಶ ವಿರುಪಣ್ಣನವರ, ಸಹದೇವಪ್ಪ ಮನ್ನಂಗಿ, ಉದಯಕುಮಾರ ವಿರುಪಣ್ಣನವರ, ರಾಜಣ್ಣ ಅಂಕಸಖಾನಿ, ನಾಗಪ್ಪ ಸವದತ್ತಿ ಇದ್ದರು.